ADVERTISEMENT

ಪ್ರತಾಪ್ ರೆಡ್ಡಿ ಬೆಂಗಳೂರು ಪೊಲೀಸ್‌ ಕಮಿಷನರ್; ಕಮಲ್‌ ಪಂತ್‌ ವರ್ಗ

​ಪ್ರಜಾವಾಣಿ ವಾರ್ತೆ
Published 16 ಮೇ 2022, 19:04 IST
Last Updated 16 ಮೇ 2022, 19:04 IST
ಪ್ರತಾಪ್‌ ರೆಡ್ಡಿ
ಪ್ರತಾಪ್‌ ರೆಡ್ಡಿ    


ಬೆಂಗಳೂರು: ನಗರದ ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರನ್ನು ಸೋಮವಾರ ದಿಢೀರ್ ವರ್ಗಾವಣೆ ಮಾಡಲಾಗಿದ್ದು, ಅವರ ಜಾಗಕ್ಕೆ ರಾಜ್ಯ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಸಿ.ಎಚ್. ಪ್ರತಾಪ್ ರೆಡ್ಡಿ ಅವರನ್ನು ನೇಮಕ ಮಾಡಲಾಗಿದೆ.

‘ಲಾಕ್‌ಡೌನ್ ವೇಳೆ ಅಗತ್ಯ ಸೇವೆಗಳಿಗೆ ಪಾಸ್‌ ವಿತರಿಸುವ ವಿಚಾರವಾಗಿ ರಾಜಕೀಯ ಮುಖಂಡರ ಜೊತೆ ಜಟಾಪಟಿ ನಡೆಸಿದ್ದರು’ ಎನ್ನಲಾದ ನಗರದ 35ನೇ ಕಮಿಷನರ್ ಭಾಸ್ಕರ್‌ ರಾವ್‌ ಅವರನ್ನು ಸಹ ದಿಢೀರ್ ಬದಲಾವಣೆ ಮಾಡಲಾಗಿತ್ತು. ಅವರ ಜಾಗಕ್ಕೆ ಬಂದಿದ್ದ ಕಮಲ್ ಪಂತ್, 653 ದಿನ ಅಧಿಕಾರ ಚಲಾಯಿಸಿದ್ದರು.

ಜಗಜೀವನ್‌ರಾಮ್ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಚಂದ್ರು (22) ಕೊಲೆ ಪ್ರಕರಣದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ‘ಉರ್ದು ಮಾತನಾಡಿದ್ದಕ್ಕೆ ಕೊಲೆ ಆಗಿದೆ’ ಎಂದಿದ್ದರು. ಹೇಳಿಕೆ ತಳ್ಳಿಹಾಕಿದ್ದ ಕಮಿಷನರ್ ಕಮಲ್ ಪಂತ್, ‘ಬೈಕ್‌ಗಳು ಪರಸ್ಪರ ತಗುಲಿದ್ದ ಕಾರಣಕ್ಕೆ ಗಲಾಟೆಯಾಗಿ ಚಂದ್ರಶೇಖರ್ ಕೊಲೆ ಆಗಿದೆ. ಉರ್ದು ಮಾತನಾಡಿದ್ದಕ್ಕಲ್ಲ’ ಎಂದಿದ್ದರು. ಇದು ರಾಜ್ಯ ಸರ್ಕಾರದ ಮುಜುಗರಕ್ಕೆ ಕಾರಣವಾಗಿತ್ತು.

ADVERTISEMENT

ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ‘ಉರ್ದು ಮಾತನಾಡದಿದ್ದಕ್ಕೆ ಕೊಲೆಯಾಗಿದೆ’ ಎಂದು ಪುನಃ ಹೇಳಿದ್ದರು. ಕಮಿಷನರ್ ಹೇಳಿಕೆಯೇ ಸುಳ್ಳು ಎಂಬುದಾಗಿ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಜಟಾಪಟಿ ನಡುವೆಯೇ ಕಮಿಷನರ್ ಬದಲಾವಣೆ ಮಾತುಗಳು ಕೇಳಿಬಂದಿದ್ದವು. ಇದೀಗ ಅಧಿಕೃತ ಆದೇಶ ಹೊರಬಿದ್ದಿದ್ದು, ಕಮಲ್ ಪಂತ್ ಕಮಿಷನರ್ ಹುದ್ದೆಯಿಂದ ನಿರ್ಗಮಿಸುತ್ತಿದ್ದಾರೆ.

ವರ್ಗಾವಣೆ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಕಮಲ್ ಪಂತ್, ‘ನನಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡು ಬೆಂಗಳೂರಿನ ರಕ್ಷಣೆಗೆ ಶ್ರಮಿಸಿದ್ದೇನೆ. ಎಲ್ಲರಿಗೂ ಧನ್ಯವಾದಗಳು’ ಎಂದರು.

ಬಡ್ತಿ ಹೊಂದಿದ್ದ ಕಮಲ್ ಪಂತ್: ಎಡಿಜಿಪಿ ಆಗಿದ್ದ ಕಮಲ್ ಪಂತ್ ಅವರಿಗೆ ಕೆಲ ತಿಂಗಳ ಹಿಂದೆಯೇ ಡಿಜಿಪಿ ಹುದ್ದೆಗೆ ಬಡ್ತಿ ನೀಡಲಾಗಿತ್ತು. ಆದರೆ, ರಾಜ್ಯದಲ್ಲಿ ಯಾವುದೇ ಡಿಜಿಪಿ ಹುದ್ದೆಗಳು ಖಾಲಿ ಇರಲಿಲ್ಲ. ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಹುದ್ದೆಯನ್ನೇ ಡಿಜಿಪಿ ಹುದ್ದೆಗೆ ಉನ್ನತೀಕರಿಸಲಾಗಿದ್ದು, ಅದೇ ಜಾಗಕ್ಕೆ ಕಮಲ್ ಪಂತ್ ಅವರನ್ನು ವರ್ಗಾಯಿಸಲಾಗಿದೆ.

‘ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಎಡಿಜಿಪಿ ಅಮ್ರಿತ್ ಪೌಲ್ ಭಾಗಿಯಾಗಿರುವ ಮಾಹಿತಿ ಇದ್ದು, ಅದಕ್ಕಾಗಿ ಸಿಐಡಿ ಅಧಿಕಾರಿಗಳು ಪುರಾವೆಗಳನ್ನು ಹುಡುಕುತ್ತಿದ್ದಾರೆ.ಮುಂಬರುವ ನೇಮಕಾತಿಗಳಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವ ಉದ್ದೇಶದಿಂದಲೇ ಎಡಿಜಿಪಿ ಹುದ್ದೆಯನ್ನು ತೆಗೆದು ಡಿಜಿಪಿ ಹುದ್ದೆ ಸೃಜಿಸಲಾಗಿದೆ’ ಎಂದೂ ಹೇಳಲಾಗುತ್ತಿದೆ.

ಅಧಿಕಾರ ಸ್ವೀಕಾರ ಇಂದು

ಆಂಧ್ರಪ್ರದೇಶದ ಗುಂಟೂರಿನ ಪ್ರತಾಪ್ ರೆಡ್ಡಿ, 1991ನೇ ಐಪಿಎಸ್ ಬ್ಯಾಚ್ ಅಧಿಕಾರಿ. ಬೆಂಗಳೂರಿನ 37ನೇ ಕಮಿಷನರ್ ಆಗಿ ಅವರು ಮಂಗಳವಾರ ಬೆಳಿಗ್ಗೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಸೋಮವಾರ ಸಂಜೆ ಆದೇಶ ಹೊರಬೀಳುತ್ತಿದ್ದಂತೆ ಪ್ರತಾಪ್ ರೆಡ್ಡಿ ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾಗಿ, ಕೃತಜ್ಞತೆ ಸಲ್ಲಿಸಿದರು.

ಅಲೋಕ್‌ಕುಮಾರ್ ವರ್ಗ

ಕೆಎಸ್‌ಆರ್‌ಪಿ ಎಡಿಜಿಪಿ ಆಗಿದ್ದ ಅಲೋಕ್‌ಕುಮಾರ್ ಅವರನ್ನು ರಾಜ್ಯದ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆಗಿ ವರ್ಗಾವಣೆ ಮಾಡಲಾಗಿದೆ. ಅವರ ಜಾಗಕ್ಕೆ ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ (ಪ್ರಭಾರ) ಆಗಿದ್ದ ಆರ್. ಹಿತೇಂದ್ರ ಅವರನ್ನು ವರ್ಗಾಯಿಸಲಾಗಿದೆ.

ಬೆಂಗಳೂರು ಕೇಂದ್ರ ವಿಭಾಗದ ಡಿಪಿಪಿ ಎಂ.ಎನ್‌.ಅನುಚೇತ್ ಅವರನ್ನು ಸಿಐಡಿಗೆ ವರ್ಗಾಯಿಸಲಾಗಿದ್ದು, ಅವರ ಜಾಗಕ್ಕೆ ಇನ್ನೂ ಯಾರನ್ನೂ ವರ್ಗಾವಣೆ ಮಾಡಿ

ಇವುಗಳನ್ನು ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.