ADVERTISEMENT

ಬೆಂಗಳೂರು: ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ, ಇಬ್ಬರು ಮಕ್ಕಳ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 19:52 IST
Last Updated 28 ಫೆಬ್ರುವರಿ 2026, 19:52 IST
<div class="paragraphs"><p> ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಹಾಗೂ ಇಬ್ಬರು ಮಕ್ಕಳನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಈ ಬಗ್ಗೆ ಸಂಪಿಗೆಹಳ್ಳಿ, ಮಲ್ಲೇಶ್ವರ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ಸಂಪಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಎಂಸಿಇಸಿಎಚ್‌ಎಸ್ ಲೇಔಟ್‌ನ ರೈಲ್ವೆ ಹಳಿ ಸಮೀಪ ಶುಕ್ರವಾರ ರಾತ್ರಿ 1.30ರ ಸುಮಾರಿಗೆ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ಅಸಹಾಯಕರಾಗಿ ಕುಳಿತಿರುವುದನ್ನು ಸ್ಥಳೀಯರು ಗಮನಿಸಿ, ಪೊಲೀಸ್ ಸಹಾಯವಾಣಿ 112 ಗೆ ಕರೆ ಮಾಡಿದ್ದಾರೆ.

ADVERTISEMENT

ಸ್ಥಳಕ್ಕೆ ಹೊಯ್ಸಳ-174ರಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿ ತೆರಳಿ, ಬಿಹಾರದ ಮಹಿಳೆ ಹಾಗೂ ಅವರ ಮಕ್ಕಳಿಬ್ಬರನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಅವರನ್ನುವಿಚಾರಿಸಿದಾಗ, ಬಿಹಾರದಿಂದ ಕಟ್ಟಡ ಕೆಲಸಕ್ಕೆಂದು ನಗರಕ್ಕೆ ಬಂದಿದ್ದು, ಪತಿ ನಿತ್ಯ ಕುಡಿದು ಬಂದು ಹಿಂಸೆ ನೀಡುತ್ತಿದ್ದಾನೆ. ಹಾಗಾಗಿ ಮಕ್ಕಳೊಂದಿಗೆ ಆತ್ಮಹತ್ಯೆಗೆ ಮುಂದಾಗಿರುವುದಾಗಿ ಮಹಿಳೆ ತಿಳಿಸಿದ್ದಾಳೆ.

ಬಳಿಕ ಮಹಿಳೆಯ ಪತಿಯನ್ನು ಪತ್ತೆ ಮಾಡಿ, ಆಕೆಗೆ ಹಿಂಸೆ ಮಾಡದಂತೆ ಎಚ್ಚರಿಕೆ ನೀಡಿ, ಮೂವರನ್ನು ಸುರಕ್ಷಿತವಾಗಿ ಮನೆಗೆ ಬಿಟ್ಟು ಬರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಲ್ಲೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಕೆ.ಬಿ.ನಗರದ ಗಣೇಶ ದೇವಸ್ಥಾನದ ಸಮೀಪ ವಾಸವಿರುವ ಮಹಿಳೆಯೊಬ್ಬರು ವೈಯಕ್ತಿಕ ಸಮಸ್ಯೆಯಿಂದ ನೇಲ್ ಪಾಲಿಷ್ ಸೇವಿಸಿ ಆತ್ಮಹತ್ಯೆಗೆ ಮುಂದಾಗಿದ್ದರು. 112ಗೆ ಬಂದ ಮಾಹಿತಿಯಿಂದಾಗಿ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಂತ್ರಸ್ತೆಯನ್ನು ಕುಟುಂಬಸ್ಥರೊಂದಿಗೆ ಕಳುಹಿಸಿ ಕೊಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.