ADVERTISEMENT

ಬೆಂಗಳೂರು| ಮಾರ್ಚ್ 1ಕ್ಕೆ ಪೊಲೀಸ್ ಓಟ; 5 ಕಿ.ಮೀ, 10 ಕಿ.ಮೀ. ಓಟದ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 14:19 IST
Last Updated 23 ಫೆಬ್ರುವರಿ 2026, 14:19 IST
ಪೊಲೀಸ್ ಓಟದಲ್ಲಿ ಪಾಲ್ಗೊಳ್ಳುವವರಿಗೆ ನೀಡುವ ಟೀ ಶರ್ಟ್‌ ಅನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ (ಎಡದಿಂದ ಮೂರನೇಯವರು) ಅನಾವರಣ ಮಾಡಿದರು. ಸಂದೀಪ್ ಪಾಟೀಲ್, ಸೀಮಾಂತ್ ಕುಮಾರ್ ಸಿಂಗ್, ಜೂಹಿ ಸ್ಮಿತಾ ಸಿನ್ಹಾ, ನಾಗರಾಜ ಅಡಿಗ, ಅಕ್ಷಯ್ ಹಾಕೆ ಉಪಸ್ಥಿತರಿದ್ದರು
ಪೊಲೀಸ್ ಓಟದಲ್ಲಿ ಪಾಲ್ಗೊಳ್ಳುವವರಿಗೆ ನೀಡುವ ಟೀ ಶರ್ಟ್‌ ಅನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ (ಎಡದಿಂದ ಮೂರನೇಯವರು) ಅನಾವರಣ ಮಾಡಿದರು. ಸಂದೀಪ್ ಪಾಟೀಲ್, ಸೀಮಾಂತ್ ಕುಮಾರ್ ಸಿಂಗ್, ಜೂಹಿ ಸ್ಮಿತಾ ಸಿನ್ಹಾ, ನಾಗರಾಜ ಅಡಿಗ, ಅಕ್ಷಯ್ ಹಾಕೆ ಉಪಸ್ಥಿತರಿದ್ದರು   

ಬೆಂಗಳೂರು: ಪೊಲೀಸ್ ಇಲಾಖೆ ಹಾಗೂ ಸ್ಟೇಟ್ ಬ್ಯಾಂಕ್ ಆಫ್‌ ಇಂಡಿಯಾ (ಎಸ್‌ಬಿಐ) ಸಹಯೋಗದಲ್ಲಿ ಮೂರನೇ ಆವೃತ್ತಿಯ ಪೊಲೀಸ್ ಓಟವನ್ನು (ಕೆಎಸ್‌ಪಿ ರನ್) ಮಾರ್ಚ್ 1ರಂದು ನಗರದಲ್ಲಿ ಆಯೋಜಿಸಲಾಗಿದೆ.

ಪೊಲೀಸ್ ಪ್ರಧಾನ ಕಚೇರಿಯಲ್ಲಿ ಸೋಮವಾರ ಮೂರನೇ ಆವೃತ್ತಿಯ ಓಟದ ಸ್ಪರ್ಧಿಗಳಿಗೆ ನೀಡುವ ಟೀ ಶರ್ಟ್‌ ಹಾಗೂ ವಿಜೇತರಿಗೆ ನೀಡುವ ಪದಕಗಳನ್ನು ರಾಜ್ಯ ಪೊಲೀಸ್ ಮಹಾ ನಿರ್ದೇಶಕ (ಡಿಜಿ–ಐಜಿಪಿ) ಎಂ.ಎ.ಸಲೀಂ, ನಗರ ಪೊಲೀಸ್ ಕಮಿಷನರ್ ಸೀಮಾಂತ ಕುಮಾರ್ ಸಿಂಗ್, ಎಸ್‌ಬಿಐ ಬೆಂಗಳೂರು ವಲಯದ ಪ್ರಧಾನ ವ್ಯವಸ್ಥಾಪಕಿ ಜೂಹಿ ಸ್ಮಿತಾ ಸಿನ್ಹಾ ಅನಾವರಣಗೊಳಿಸಿದರು.

‘ನಮ್ಮ ಪೊಲೀಸ್ ನಮ್ಮ ಹೆಮ್ಮೆ’ ಎಂಬ ಘೋಷವಾಕ್ಯದಡಿ ಈ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ‘ಹಸಿರು ಬೆಂಗಳೂರು’, ‘ಡ್ರಗ್ಸ್ ಮುಕ್ತ ಕರ್ನಾಟಕ’, ‘ಸೈಬರ್ ಅಪರಾಧ’ ಕುರಿತು ಜಾಗೃತಿ ಮೂಡಿಸಲಾಗುವುದು.

ADVERTISEMENT

ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಎಂ.ಎ.ಸಲೀಂ, ‘ಸ್ಪರ್ಧೆಗೆ ಈವರೆಗೂ 9 ಸಾವಿರ ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ನೋಂದಣಿಗೆ ಇನ್ನೂ ಅವಕಾಶ ಇದೆ. ಹಾಗಾಗಿ ಈ ಬಾರಿ 12 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಓಟದಲ್ಲಿ ಭಾಗವಹಿಸಲು ಎಲ್ಲಾ ವಯೋಮಾನದವರಿಗೂ ಅವಕಾಶ ಕಲ್ಪಿಸಲಾಗಿದೆ. ಕಳೆದ ಬಾರಿ ಯುವಕರು, ಯುವತಿಯರು, ಮಹಿಳೆಯರು, ಪುರುಷರು ಉತ್ಸಾಹದಿಂದ ಭಾಗವಹಿಸಿದ್ದರು’ ಎಂದು ವಿವರಿಸಿದರು.

ವಿಧಾನಸೌಧದ ಮೆಟ್ಟಿಲು ಮುಂದೆ ಅಂದು ಬೆಳಿಗ್ಗೆ 6 ಗಂಟೆಗೆ ಗೃಹ ಸಚಿವ ಜಿ.ಪರಮೇಶ್ವರ ಸ್ಪರ್ಧೆಗೆ ಚಾಲನೆ ನೀಡುವರು. ವಿಧಾನಸೌಧದಿಂದ ಆರಂಭಗೊಳ್ಳುವ ಓಟ, ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ, ವಿಧಾನಸೌಧದ ಮುಂಭಾಗ ಮುಕ್ತಾಯಗೊಳ್ಳಲಿದೆ. 10 ಕಿ.ಮೀ. ಓಟದ ಸ್ಪರ್ಧೆ ಅನುಭವಿ ಓಟಗಾರರಿಗೆ ಹಾಗೂ 5 ಕಿ.ಮೀ. ಸ್ಪರ್ಧೆಯಲ್ಲಿ ಎಲ್ಲರೂ ಭಾಗವಹಿಸಬಹುದು. ಎರಡು ವಿಭಾಗಗಳಿಂದ ವಿಜೇತರಿಗೆ ₹18 ಲಕ್ಷ ನಗದು ಬಹುಮಾನ ನೀಡಲಾಗುವುದು ಎಂದರು.

ಪೊಲೀಸರಿಗೆ ‘ಫಿಟ್‌ನೆಸ್’ ಮುಖ್ಯ. ಹಾಗಾಗಿ ಈ ಬಾರಿಯ ಓಟದಲ್ಲಿ ಮೂರು ಸಾವಿರ ಪೊಲೀಸ್ ಸಿಬ್ಬಂದಿ ಭಾಗವಹಿಸುತ್ತಿರುವುದು ವಿಶೇಷ. 90 ವರ್ಷ ಮೇಲ್ಪಟ್ಟವರು ಹಾಗೂ ಅಂಗವಿಕಲರು ಕೂಡ ಭಾಗವಹಿಸುತ್ತಿದ್ದಾರೆ. ಮಾರ್ಚ್ 1 ರಂದು ಏಕಕಾಲಕ್ಕೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪೊಲೀಸ್ ಓಟ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಐಜಿಪಿ ಸಂದೀಪ್ ಪಾಟೀಲ್, ಡಿಸಿಪಿ ಅಕ್ಷಯ್ ಹಾಕೆ, ಎನ್‌ಇಬಿ ಸಂಸ್ಥೆ ಅಧ್ಯಕ್ಷ ನಾಗರಾಜ ಅಡಿಗ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.