
ಬೆಂಗಳೂರು: ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ರಿಯಲ್ ಎಸ್ಟೇಟ್ ಏಜೆಂಟ್ ಮನೆಗೆ ದರೋಡೆಕೋರರು ಸೋಮವಾರ ಮಧ್ಯಾಹ್ನ ಪೊಲೀಸರ ಸೋಗಿನಲ್ಲಿ ನುಗ್ಗಿ ₹20 ಲಕ್ಷ ದೋಚಿ ಪರಾರಿ ಆಗಿದ್ದಾರೆ.
ಬಿಇಎಲ್ ಲೇಔಟ್ ನಿವಾಸಿ ಹೊಂಬಾಳೇಗೌಡ ಅವರ ಮನೆಯಲ್ಲಿ ಕೃತ್ಯ ಎಗಲಾಗಿದೆ.
ಮಧ್ಯಾಹ್ನ 3 ಗಂಟೆ ಸುಮಾರಿಗೆ ಪೊಲೀಸ್ ಸಮವಸ್ತ್ರದಲ್ಲಿ ಬಂದ ಇಬ್ಬರು ಆರೋಪಿಗಳು, ಬೆದರಿಸಿ ₹ 20 ಲಕ್ಷ ನಗದು, 500 ಗ್ರಾಂ ಚಿನ್ನಾಭರಣ ಸುಲಿಗೆ ಮಾಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ರಿಯಲ್ ಎಸ್ಟೇಟ್ ಏಜೆಂಟ್ ಜತೆಗೆ ಗುತ್ತಿಗೆದಾರರಾಗಿರುವ ಹೊಂಬಾಳೇಗೌಡ ಅವರು ಮಧ್ಯಾಹ್ನ 3 ಗಂಟೆಗೆ ಪತ್ನಿ ಮಂಗಳಮ್ಮ ಮತ್ತು ಮೊಮ್ಮಗಳ ಜತೆ ಮನೆಯಲ್ಲಿ ಇದ್ದರು. ಈ ವೇಳೆ ಪೊಲೀಸ್ ಸಮವಸ್ತ್ರದಲ್ಲಿ ಬಂದ ಇಬ್ಬರು ವ್ಯಕ್ತಿಗಳು, ಬಾಗಿಲು ತಟ್ಟಿದ್ದಾರೆ. ಹೊಂಬಳೇಗೌಡ ಬಾಗಿಲು ತೆರೆದಾಗ, ಇಬ್ಬರು ತಾವು ಯಲಹಂಕ ಠಾಣೆಯ ಪಿಎಸ್‌ಐ ಎಂದು ಪರಿಚಯ ಮಾಡಿಕೊಂಡಿದ್ದರು. ಬಳಿಕ ಚಾಕು ಹಿಡಿದು ಬೆದರಿಸಿ ಸುಲಿಗೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮನೆಯ ಎಲ್ಲಾ ಕೋಣೆಗಳನ್ನು ಹುಡುಕಾಟ ನಡೆಸಿ, ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿ ಆಗಿದ್ದಾರೆ. ದಂಪತಿಯ ಮೊಬೈಲ್‌ಗಳು ಮತ್ತು ಸಿಸಿಟಿವಿ ಕ್ಯಾಮೆರಾದ ಡಿವಿಆರ್ ಅನ್ನು ತೆಗೆದುಕೊಂಡು ಹೋಗಿದ್ದಾರೆ. ಕೋಣೆಯಲ್ಲಿದ್ದ ಮಗುವಿಗೆ ಯಾವುದೇ ತೊಂದರೆ ಕೊಟ್ಟಿಲ್ಲ ಎಂದು ಪೊಲೀಸರು ಹೇಳಿದರು. ಈ ಸಂಬಂಧ ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.