ADVERTISEMENT

ಬೆಂಗಳೂರು ನಗರದ ಮಾಲಿನ್ಯ ಹೆಚ್ಚಿಸಿದ ಪಟಾಕಿ

ಹಬ್ಬದ ಅವಧಿಯಲ್ಲಿ ಮಾಲಿನ್ಯಕಾರಕ ಕಣಗಳು ದುಪ್ಪಟ್ಟು

ವರುಣ ಹೆಗಡೆ
Published 27 ಅಕ್ಟೋಬರ್ 2022, 21:00 IST
Last Updated 27 ಅಕ್ಟೋಬರ್ 2022, 21:00 IST
ದಾಸರಹಳ್ಳಿಯಲ್ಲಿ ಮಗುವೊಂದು ಪಟಾಕಿ ಹಚ್ಚಿ ಸಂಭ್ರಮಿಸುತ್ತಿರುವುದು
ದಾಸರಹಳ್ಳಿಯಲ್ಲಿ ಮಗುವೊಂದು ಪಟಾಕಿ ಹಚ್ಚಿ ಸಂಭ್ರಮಿಸುತ್ತಿರುವುದು   

ಬೆಂಗಳೂರು:ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಿಡಿಸಿದ ಪಟಾಕಿ ಹೊಗೆಯಿಂದ ನಗರದ ವಿವಿಧೆಡೆ ಹೆಚ್ಚಿನ ಪ್ರಮಾಣದಲ್ಲಿ ಮಾಲಿನ್ಯಕಾರಕ ಕಣಗಳು (ಪಿಎಂ 2.5 ಮತ್ತು ಪಿಎಂ 10) ಕಾಣಿಸಿಕೊಂಡಿವೆ. ಇದರಿಂದಾಗಿ ‘ಉತ್ತಮ’ ಸ್ಥಿತಿಯಲ್ಲಿದ್ದ ಗಾಳಿಯ ಗುಣಮಟ್ಟ ‘ಕಳಪೆ’ ಸ್ಥಿತಿ ತಲುಪಿದೆ.

ಹಬ್ಬಕ್ಕೂ ಮುನ್ನ ಸರ್ಕಾರೇತರ ಸಂಸ್ಥೆಗಳು ಪಟಾಕಿ ಅವಘಡಗಳು ಹಾಗೂ ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸಿದ್ದವು. ಕೋವಿಡ್ ಕಾರಣ ಕಳೆದ ವರ್ಷ ಕಳೆಗುಂದಿದ್ದ ದೀಪಾವಳಿ, ಈ ಬಾರಿ ಜನರ ಸಂಭ್ರಮವನ್ನು ಹೆಚ್ಚಿಸಿತ್ತು. ಇದರಿಂದಾಗಿ ನಗರದ ಎಲ್ಲೆಡೆ ಹಬ್ಬದ ಮೂರೂ ದಿನಗಳು ಪಟಾಕಿಯ ಸದ್ದು ಜೋರಾಗಿ ಮೊಳಗಿತ್ತು. ಪಟಾಕಿಯ ಹೊಗೆಯಿಂದಾಗಿ ನಗರದ ಬಹತೇಕ ಕಡೆಮಾಲಿನ್ಯಕಾರಕ ಕಣಗಳು ದುಪ್ಪಟ್ಟಾಗಿವೆ. ಶಬ್ದ ಮಾಲಿನ್ಯ ಪ್ರಮಾಣದಲ್ಲೂ ಹೆಚ್ಚಳವಾಗಿದೆ.

ಸಾಣೆಗುರುವನಹಳ್ಳಿ,ಹೆಬ್ಬಾಳ, ಜಯನಗರ, ಸೆಂಟ್ರಲ್ ಸಿಲ್ಕ್‌ ಬೋರ್ಡ್‌, ಕವಿಕಾ ಲೇಔಟ್, ನಗರ ರೈಲು ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಹಬ್ಬಕ್ಕೂ ಮೊದಲು ಗಾಳಿಯ ಗುಣಮಟ್ಟದ ಸೂಚ್ಯಂಕ (ಎಕ್ಯೂಐ) 100ರ ಮಿತಿಯೊಳಗಿತ್ತು.

ADVERTISEMENT

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಿಡಿಸಿದ ಪಟಾಕಿಗಳ ಮಾಲಿನ್ಯಕಾರಕ ಹೊಗೆಯಿಂದ ಗಾಳಿಯ ಗುಣಮಟ್ಟದ ಸೂಚ್ಯಂಕದಲ್ಲಿ ದಿಢೀರ್ ಏರಿಕೆ ಆಗಿದೆ. ಪಿಎಂ 10 ಹಾಗೂ ಪಿಎಂ 2.5 ಕಣಗಳಲ್ಲಿ ವ್ಯತ್ಯಾಸ ಉಂಟಾಗಿದೆ. ನಗರದ ಬಹುತೇಕ ಕಡೆ ಒಂದು ಸಾವಿರ ಲೀಟರ್ ಗಾಳಿಯಲ್ಲಿ ಪಿಎಂ 10ರ ಪ್ರಮಾಣ 100 ಮೈಕ್ರೊ ಗ್ರಾಂ ಹಾಗೂ ಪಿಎಂ 2.5ರ ಪ್ರಮಾಣ 60 ಮೈಕ್ರೊ ಗ್ರಾಂ ಮೀರಿದೆ.

ಕಳಪೆ ಹಂತ: ನರಕ ಚತುರ್ದಶಿ ದಿನವಾದ ಸೋಮವಾರ, ಹಬ್ಬದ ಮುನ್ನಾದಿನವಾದ ಮಂಗಳವಾರ ಹಾಗೂಹಬ್ಬದ ದಿನವಾದ ಬುಧವಾರ ರಾತ್ರಿ ವೇಳೆ ಹೆಚ್ಚಿನ ಪ್ರಮಾಣದಲ್ಲಿ ಮಾಲಿನ್ಯಕಾರಕ ಕಣಗಳು ಕಾಣಿಸಿಕೊಂಡಿವೆ. ಸೆಂಟ್ರಲ್‌ ಸಿಲ್ಕ್‌ ಬೋರ್ಡ್, ಜಯನಗರ, ಬಿಟಿಎಂ ಬಡಾವಣೆ ಸೇರಿ ವಿವಿಧ ಕೇಂದ್ರಗಳ ಸುತ್ತಮುತ್ತ ಎಕ್ಯುಐ 200ರ ಗಡಿ ದಾಟಿ, ಕಳಪೆ ಹಂತಕ್ಕೆ ತಲುಪಿದೆ. ಉಳಿದ ಕಡೆಯೂ ಈ ಪ್ರಮಾಣ ಸಾಮಾನ್ಯ ದಿನಗಳಿಗಿಂತ ಎರಡು ಪಟ್ಟು ಹೆಚ್ಚಳವಾಗಿತ್ತು.

‘ವಾತಾವರಣದಲ್ಲಿತೇವಾಂಶ ಹೆಚ್ಚಾದರೆ ದೂಳಿನ ಕಣಗಳು ಆಕಾಶಕ್ಕೆ ಹೋಗದೆ, ತಳಮಟ್ಟದಲ್ಲಿಯೇ ಗಾಳಿಯಲ್ಲಿ ತೇಲಾಡುತ್ತಿರುತ್ತವೆ. ಪಟಾಕಿಯ ವಿಷಕಾರಿ ಹೊಗೆ ಈ ಗಾಳಿಯನ್ನು ಸೇರಿದಾಗ ಮಲಿನಕಾರಕ ಕಣಗಳು ಗಾಳಿಯಲ್ಲಿ ಉಳಿಯುತ್ತವೆ. ಮೋಡದ ವಾತಾವರಣದಲ್ಲಿಯೂ ಪಟಾಕಿಗಳನ್ನು ಸಿಡಿಸಿದ್ದರಿಂದ ಕೆಲವೆಡೆ ಗಾಳಿಯ ಗುಣಮಟ್ಟದ ಸೂಚ್ಯಂಕ ಏರಿಕೆ ಕಂಡಿದೆ’ ಎಂದುಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಕೆಎಸ್‌ಪಿಸಿಬಿ) ಪರಿಸರ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.