ಬಾಗಲೂರು ರಸ್ತೆಯಲ್ಲಿ ಗುಂಡಿ ಮುಚ್ಚಿವ ಕಾರ್ಯವನ್ನು ಡಿ.ಕೆ. ಶಿವಕುಮಾರ್ ವೀಕ್ಷಿಸಿದರು
ಬೆಂಗಳೂರು: ನಗರದಲ್ಲಿ ಗುಣಮಟ್ಟ ಕಾಪಾಡಿಕೊಂಡು ರಸ್ತೆ ಗುಂಡಿಗಳನ್ನು ಮುಚ್ಚಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದರು.
ಬಾಗಲೂರು ರಸ್ತೆ, ಸಂದೀಪ್ ಉನ್ನಿಕೃಷ್ಣನ್ ರಸ್ತೆ ಹಾಗೂ ಈಜೀಪುರ ರಸ್ತೆಯಲ್ಲಿ ಸೋಮವಾರ ತಡರಾತ್ರಿ ಗುಂಡಿ ಮುಚ್ಚುವ ಕಾರ್ಯವನ್ನು ಪರಿಶೀಲಿಸಿ, ಅವರು ಮಾತನಾಡಿದರು.
‘ರಸ್ತೆ ಗುಂಡಿಗಳನ್ನು ಮುಚ್ಚುವ ವಿಚಾರವಾಗಿ ನಗರದ ಶಾಸಕರೆಲ್ಲರೂ ಗಮನಕ್ಕೆ ತಂದಿದ್ದರು. ನಗರದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಸಲುವಾಗಿ ‘ರಸ್ತೆ ಗುಂಡಿ ಗಮನ’ ತಂತ್ರಾಂಶ ಸಿದ್ಧಪಡಿಸಿದ್ದೇವೆ. ಪೊಲೀಸರಿಗೂ ಅವರ ಠಾಣೆಗಳ ವ್ಯಾಪ್ತಿಯಲ್ಲಿ ಗುಂಡಿಗಳಿರುವ ಪಟ್ಟಿ ಕೊಡಲು ತಿಳಿಸಲಾಗಿತ್ತು. ಇತ್ತೀಚೆಗೆ ಬಾಗಲೂರು ರಸ್ತೆಯಲ್ಲಿ ಹೋದಾಗ ರಸ್ತೆ ಸ್ಥಿತಿ ನೋಡಿ ಬೇಸರವಾಗಿತ್ತು’ ಎಂದರು.
‘ನಗರದ ಎಲ್ಲ ಕಡೆ ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡಲಾಗುತ್ತಿದೆ. 5,000ಕ್ಕೂ ಹೆಚ್ಚು ಗುಂಡಿಗಳನ್ನು ಗುರುತಿಸಲಾಗಿದ್ದು, ಅದರಲ್ಲಿ 4,400 ರಸ್ತೆ ಗುಂಡಿಗಳನ್ನು ಆದ್ಯತೆ ಮೇಲೆ ಮುಚ್ಚಲು ಸೂಚಿಸಲಾಗಿದೆ. ನಾಲ್ಕು ದಿನಗಳಿಂದ 2,200 ಗುಂಡಿಗಳನ್ನು ಮುಚ್ಚಲಾಗಿದೆ’ ಎಂದು ಹೇಳಿದರು.
‘ನಗರದಲ್ಲಿ ಸ್ವಚ್ಛತೆ ಕಾಪಾಡುವ ಕೆಲಸ ಮಾಡಲಾಗುತ್ತಿದ್ದು, ಸ್ಕೈವಾಕ್‌ಗಳನ್ನು ಸ್ವಚ್ಛ ಮಾಡಲಾಗಿದೆ. ರಸ್ತೆ ಗುಂಡಿಗಳನ್ನು ಮುಚ್ಚಿ ಹೋಗುವುದು ಮಾತ್ರವಲ್ಲ, ಗುಣಮಟ್ಟದ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಹಾಟ್ ಮಿಕ್ಸ್, ಕೋಲ್ಡ್ ಮಿಕ್ಸ್ ಹಾಗೂ ಇಕೋಫಿಕ್ಸ್ ಸೇರಿದಂತೆ ಮೂರೂ ಮಾದರಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಲಾಗುತ್ತಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.