ADVERTISEMENT

ಬೆಂಗಳೂರು: ಕ್ಯಾನ್ಸರ್‌ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ಕೈದಿ ಪರಾರಿ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 14:31 IST
Last Updated 9 ಸೆಪ್ಟೆಂಬರ್ 2025, 14:31 IST
ಪರಾರಿಯಾದ ಸಜಾಬಂದಿ ಚೇತನ್ ಕಲ್ಯಾಣಿ
ಪರಾರಿಯಾದ ಸಜಾಬಂದಿ ಚೇತನ್ ಕಲ್ಯಾಣಿ   

ಬೆಂಗಳೂರು: ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ಸಜಾಬಂದಿ ಚೇತನ್ ಕಲ್ಯಾಣಿ (34) ಎಂಬಾತ ಸೆಪ್ಟೆಂಬರ್‌ 8ರಂದು ಪರಾರಿಯಾಗಿದ್ದು, ಈ ದೃಶ್ಯಾವಳಿ ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

ಕ್ಯಾನ್ಸರ್‌ ಚಿಕಿತ್ಸೆಗೆಂದು ಕಿದ್ವಾಯಿ ಆಸ್ಪತ್ರೆಗೆ ಸಜಾಬಂದಿಯನ್ನು ದಾಖಲಿಸಲಾಗಿತ್ತು.

ವಿಜಯಪುರ ಜಿಲ್ಲೆಯ ಚೇತನ್ ಕಲ್ಯಾಣಿ, ಕಳವು ಪ್ರಕರಣದಲ್ಲಿ ಮೂರು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ. ವಿಜಯಪುರ ಜಿಲ್ಲಾ ಕಾರಾಗೃಹದಲ್ಲಿದ್ದ ಆತನನ್ನು ಆಗಸ್ಟ್‌ 3ರಂದು ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿತ್ತು.

ADVERTISEMENT

ಚೇತನ್, ಬಾಯಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕಾರಣಕ್ಕೆ ಜೈಲಿನ ವೈದ್ಯರ ಸಲಹೆ ಮೇರೆಗೆ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಿದ್ವಾಯಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ಚೇತನ್, ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಆಸ್ಪತ್ರೆಯಿಂದ ಪರಾರಿ ಆಗಿದ್ದಾನೆ ಎಂದು ಮೂಲಗಳು ಹೇಳಿವೆ.

ಪರಪ್ಪನ ಅಗ್ರಹಾರ ಜೈಲಿನ ವಾರ್ಡನ್ ರಘು ಅವರನ್ನು ಕಿದ್ವಾಯಿ ಆಸ್ಪತ್ರೆಯಲ್ಲಿ ಚೇತನ್‍ನ ಕಾವಲಿಗೆ ನಿಯೋಜಿಸಲಾಗಿತ್ತು. ರಘು ಅವರು ಚೇತನ್‍ನ ವೈದ್ಯಕೀಯ ದಾಖಲೆಗಳನ್ನು ವೈದ್ಯರಿಗೆ ತೋರಿಸಲು ವಾರ್ಡ್‍ನಿಂದ ಹೊರಗೆ ಹೋಗಿದ್ದರು. ಆಗ ಚೇತನ್ ವಾರ್ಡ್‍ನಿಂದ ಪರಾರಿ ಆಗಿದ್ದಾನೆ ಎಂದು ಮೂಲಗಳು ಹೇಳಿವೆ.

ಕೈದಿ ಚೇತನ್ ಪರಾರಿಯಾಗಲು ಜೈಲಿನ ವಾರ್ಡನ್ ರಘು ಅವರ ನಿರ್ಲಕ್ಷ್ಯವೇ ಕಾರಣ. ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಚೇತನ್‍ನ ಪತ್ತೆ ಕಾರ್ಯ ಮುಂದುವರಿದಿದೆ. ಕಿದ್ವಾಯಿ ಆಸ್ಪತ್ರೆ ಹಾಗೂ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.