ಬೆಂಗಳೂರು: ಬೆಂಗಳೂರು ನಗರ ವಿಶ್ವವಿದ್ಯಾಲಯದ ಘಟಕ ಕಾಲೇಜುಗಳಾಗಿ ಆರ್.ಸಿ. ಕಾಲೇಜು ಮತ್ತು ಸರ್ಕಾರಿ ಕಲಾ ಕಾಲೇಜು ಅನ್ನು ಪರಿವರ್ತಿಸುವ ಸರ್ಕಾರದ ನಿರ್ಧಾರ ಖಂಡಿಸಿ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಮಂಗಳವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಯಿತು.
ರಾಮನಾರಾಯಣ್ ಚೆಲ್ಲಾರಾಮ್ (ಆರ್.ಸಿ.) ಕಾಲೇಜು ಮತ್ತು ಕೆ.ಆರ್.ವೃತ್ತದಲ್ಲಿರುವ ಸರ್ಕಾರಿ ಕಲಾ ಕಾಲೇಜು ವಿಶ್ವವಿದ್ಯಾಲಯದ ಘಟಕ ಕಾಲೇಜುಗಳಾದರೆ, ಕಾಲೇಜಿನ ಶುಲ್ಕ ಹೆಚ್ಚಳವಾಗುತ್ತದೆ. ಬಡ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆ ಆಗಲಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ಎಐಡಿಎಸ್ಒ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಮಾತನಾಡಿ, ‘ಘಟಕ ಕಾಲೇಜುಗಳ ಪರಿಸ್ಥಿತಿ ಸರಿಯಿಲ್ಲ. ವಿವಿಧ ಪದವಿ ಕೋರ್ಸುಗಳಿಗೆ ಸರ್ಕಾರಿ ಪದವಿ ಕಾಲೇಜುಗಳಲ್ಲಿ ₹6,000 ಗಿಂತ ಕಡಿಮೆ ಶುಲ್ಕವಿದ್ದರೆ, ಘಟಕ ಕಾಲೇಜುಗಳ ಕನಿಷ್ಠ ಶುಲ್ಕವೇ ₹12,000ರಿಂದ ಆರಂಭವಾಗುತ್ತದೆ. ಉದಾಹರಣೆಗೆ, ಮೈಸೂರಿನ ಯುವರಾಜ ಕಾಲೇಜು, ತುಮಕೂರಿನ ಘಟಕ ಕಾಲೇಜು ಮತ್ತು ಧಾರವಾಡದ ಘಟಕ ಕಾಲೇಜುಗಳ ಶುಲ್ಕ ಹೆಚ್ಚಾಗಿದೆ. ಯುವರಾಜ ಕಾಲೇಜು ಸಹ ಘಟಕ ಕಾಲೇಜು ಆಗಿ ಪರಿವರ್ತನೆಗೊಂಡ ನಂತರ ಕಾಲೇಜು ಶುಲ್ಕ ಬಿಎಸ್‌ಸಿ ಕೋರ್ಸ್‌ಗೆ ₹13,600, ಬಿಬಿಎ ಕೋರ್ಸ್‌ಗೆ ₹24,810 ಆಗಿವೆ’ ಎಂದು ಹೇಳಿದರು.
‘ಒಂದು ವಿಶ್ವವಿದ್ಯಾಲಯ ನಡೆಸಲು ಸುಮಾರು ₹250 ಕೋಟಿ ಅವಶ್ಯಕತೆಯಿದೆ. ಈಗಾಗಲೇ ವಿಶ್ವವಿದ್ಯಾಲಯಗಳು ಹಣದ ಕೊರತೆ ಎದುರಿಸುತ್ತಿದ್ದು, ರಾಜ್ಯದ 7 ವಿಶ್ವವಿದ್ಯಾಲಯಗಳನ್ನು ಮುಚ್ಚಲು ರಾಜ್ಯ ಸರ್ಕಾರ ಮುಂದಾಗಿದೆ. ಹೀಗಿರುವಾಗ ಈ ಎರಡೂ ಶಿಕ್ಷಣ ಸಂಸ್ಥೆಗಳು ವಿಶ್ವವಿದ್ಯಾಲಯದ ಸುಪರ್ದಿಗೆ ಬಂದರೆ, ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ಹೊರಗುಳಿಯುವಂತೆ ಸರ್ಕಾರವೇ ಮಾಡಿದಂತೆ ಆಗುತ್ತದೆ’ ಎಂದರು.
ಕೂಡಲೇ ಘಟಕ ಕಾಲೇಜಿನ ನಿರ್ಧಾರವನ್ನು ಸರ್ಕಾರ ಹಿಂಪಡೆಯಬೇಕು ಎಂದು ರಾಜ್ಯ ಉಪಾಧ್ಯಕ್ಷ ಅಭಯ ದಿವಾಕರ್ ಅವರು ಸರ್ಕಾರವನ್ನು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಆರ್ ಸಿ ಮತ್ತು ಸರ್ಕಾರಿ ಕಲಾ ಕಾಲೇಜಿನ ವಿದ್ಯಾರ್ಥಿಗಳು, ಜಿಲ್ಲಾ ಅಧ್ಯಕ್ಷೆ ಅಪೂರ್ವ, ಜಿಲ್ಲಾ ಕಾರ್ಯದರ್ಶಿ ಕಲ್ಯಾಣ್, ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.