ಬಂಧನ (ಸಾಂದರ್ಭಿಕ ಚಿತ್ರ)
ಬೆಂಗಳೂರು: ಸಂಬಂಧಿಯನ್ನು ಹೆದರಿಸಲು ಹೋಗಿ ಸಾರ್ವಜನಿಕರ ಮೇಲೆ ಮಚ್ಚು ಹಾಗೂ ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿದ್ದ ನಾಲ್ವರ ವಿರುದ್ಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಯಾಳು ಪವನ್ ಕುಮಾರ್ ನೀಡಿದ ದೂರಿನ ಮೇರೆಗೆ ಆರೋಪಿ ರವಿ ಹಾಗೂ ತಲೆಮರೆಸಿಕೊಂಡಿರುವ ಆತನ ಮೂವರು ಸ್ನೇಹಿತರ ವಿರುದ್ಧ ಪ್ರಕರಣ ದಾಖಲಾಗಿದೆ.
‘ಮನೆಗೆ ನಡೆದು ಹೋಗುವಾಗ ಆರೋಪಿಗಳು ಏಕಾಏಕಿ ಹಲ್ಲೆ ಮಾಡಿದ್ದಾರೆ’ ಎಂದು ದೂರಿನಲ್ಲಿ ಪವನ್ ಆರೋಪಿಸಿದ್ದಾರೆ.
ಜುಲೈ 13ರಂದು ರಾತ್ರಿ ನಂದಿನಿಲೇಔಟ್‌ನ ಕಂಠೀರವ ನಗರದಲ್ಲಿ ಘಟನೆ ನಡೆದಿದೆ. ಹಲ್ಲೆಯ ದೃಶ್ಯ ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿ ಶೋಧಕಾರ್ಯ ನಡೆಸುತ್ತಿದ್ದಾರೆ.
‘ಕಂಠೀರವ ನಗರದಲ್ಲಿ ನೆಲಸಿರುವ ಜಗದೀಶ್ ಅವರ ಅಕ್ಕನ ಮಗಳನ್ನು ರವಿ ಮದುವೆಯಾಗಲು ಮುಂದಾಗಿದ್ದ. ಇದಕ್ಕೆ ಜಗದೀಶ್ ಒಪ್ಪಿರಲಿಲ್ಲ. ಇದೇ ಕಾರಣಕ್ಕೆ ಕೋಪಗೊಂಡಿದ್ದ ರವಿ ತನ್ನ ಸಂಬಂಧಿಯೂ ಆಗಿರುವ ಜಗದೀಶ್ ಅಂಗಡಿ ಬಳಿಗೆ ಸ್ನೇಹಿತರೊಂದಿಗೆ ಬಂದು ಗಲಾಟೆ ಮಾಡಿದ್ದ. ಗಲಾಟೆ ತೀವ್ರಗೊಂಡಾಗ ಮಚ್ಚು ಬೀಸಿದ್ದ. ರಸ್ತೆಯಲ್ಲಿ ನಡೆದು ತೆರಳುತ್ತಿದ್ದ ದೂರುದಾರ ಪವನ್, ವೆಂಕಟೇಶ್, ಸ್ಯಾಮ್ಸನ್ ಅವರಿಗೆ ಏಟು ಬಿದ್ದಿತ್ತು’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.