ಬೆಂಗಳೂರಿನಲ್ಲಿ ಧಾರಾಕಾರ ಮಳೆ
–ಪ್ರಜಾವಾಣಿ ಚಿತ್ರ
ಬೆಂಗಳೂರು: ಗುರುವಾರ ರಾತ್ರಿ ಗಾಳಿ, ಗುಡುಗು ಸಿಡಿಲಿನೊಂದಿಗೆ ಧಾರಾಕಾರ ಮಳೆ ಸುರಿದಿದ್ದು, ಹಲವೆಡೆ ಮರಗಳು ಮುರಿದು ಬಿದ್ದಿವೆ. ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ತೊಡಕುಂಟಾಗಿದೆ. ಕತ್ರಿಗುಪ್ಪೆ ಮುಖ್ಯರಸ್ತೆಯ ಬಸ್ ನಿಲ್ದಾಣದ ಬಳಿ ಆಟೊದ ಮೇಲೆ ಮರ ಉರುಳಿ ಬಿದ್ದು, ಆಟೊ ಚಾಲಕ, ಇಟ್ಟಮಡು ನಿವಾಸಿ ಮಹೇಶ್ (45) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಾತ್ರಿ 7.30ರ ಸುಮಾರಿಗೆ ಘಟನೆ ನಡೆದಿದೆ.
ಕೋರಮಂಗಲ, ಸುಬ್ರಹ್ಮಣ್ಯನಗರ, ತಾವರೆಕೆರೆ ಸಹಿತ ವಿವಿಧೆಡೆ ಮರಗಳು ಮುರಿದು ಬಿದ್ದಿವೆ.
ಕೋರಮಂಗಲದಲ್ಲಿ ಮರ ಬಿದ್ದು ಕಾರು ಜಖಂಗೊಂಡಿದೆ. ರಸ್ತೆಯಲ್ಲಿಯೇ ಕಾಲುವೆಯಂತೆ ನೀರು ಹರಿಯಿತು. ನಗರದ ವಿವಿಧೆಡೆ ಚರಂಡಿ ವ್ಯವಸ್ಥೆ ಸರಿ ಇಲ್ಲದೇ ರಸ್ತೆಯಲ್ಲಿಯೇ ಮಳೆನೀರು ನಿಂತಿದ್ದರಿಂದ ವಾಹನ ಸಂಚಾರಕ್ಕೆ ತೊಂದರೆಯಾಯಿತು. ಬಿಳೇಕಹಳ್ಳಿ ಯಿಂದ ಜೆ.ಡಿ. ಮರ ಕಡೆಗೆ, ವೀರಸಂದ್ರ ಬಳಿ ಎರಡೂ ಬದಿ ರಸ್ತೆಯಲ್ಲಿ, ಬಸಾಪುರ ಜಂಕ್ಷನ್‌ನಲ್ಲಿ ಹೊರಮಾವು ಕೆಳಸೇತುವೆಯಲ್ಲಿ ನೀರು ನಿಂತಿತ್ತು.
ವಿಧಾನಸೌಧದ ಸುತ್ತಮುತ್ತ, ರಿಚ್ಮಂಡ್ ಟೌನ್, ಶಾಂತಿನಗರ, ಕಾರ್ಪೊರೇಷನ್ ವೃತ್ತ, ಮೆಜೆಸ್ಟಿಕ್, ಕೆ.ಆರ್.ಮಾರುಕಟ್ಟೆ, ರಾಜಾಜಿನಗರ, ಬಸವೇಶ್ವರ ನಗರ, ನಂದಿನಿ ಲೇಔಟ್ ಸೇರಿ ಹಲವು ಬಡಾವಣೆ
ಗಳಲ್ಲಿ ಒಂದು ತಾಸಿಗೂ ಹೆಚ್ಚು ಜೋರು ಮಳೆ ಸುರಿಯಿತು. ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದವರು ಮಾರ್ಗ ಮಧ್ಯದಲ್ಲೇ ಸಿಲುಕಿ ಪರದಾಡಿದರು.
ಜ್ಞಾನಭಾರತಿ ಹತ್ತಿರ ನೀರು ನಿಂತಿರುವುದರಿಂದ ರಾಜರಾಜೇಶ್ವರಿ ನಗರದ ಕಡೆಗೆ ವಾಹನಗಳು ನಿಧಾನಗತಿಯಲ್ಲಿ ಸಾಗಿದವು. ತಾವರೆಕೆರೆಯಿಂದ ನಿಮ್ಹಾನ್ಸ್ ಆಸ್ಪತ್ರೆ ಕಡೆಗೆ ವಾಹನಗಳ ಸಂಚಾರಕ್ಕೆ ತಡೆಯುಂಟಾಯಿತು. ಹೆಬ್ಬಾಳ ಪೊಲೀಸ್ ಠಾಣೆಯಿಂದ ವಿಮಾನ ನಿಲ್ದಾಣದ ಕಡೆಗೆ, ಆರ್.ಪಿ. ರಸ್ತೆಯಿಂದ ಪಿ.ಜಿ. ಹಳ್ಳಿ ಕಡೆಗೆ, ವರ್ತೂರು ಕಡೆಯಿಂದ ಗುಂಜೂರು ಕಡೆಗೆ, ಭಾಷ್ಯಂ ವೃತ್ತದಿಂದ ಕಾವೇರಿ ಕಡೆಗೆ, ಉದಯ ಟಿ.ವಿ ಜಂಕ್ಷನ್ ಕಡೆಯಿಂದ ಜಯಮಹಲ್ ರಸ್ತೆ ಕಡೆಗೆ ವಾಹನಗಳು ನಿಧಾನವಾಗಿ ಸಾಗಿದವು.
ಗುಡುಗು ಮಿಂಚು ಸಹಿತ ಒಂದು ತಾಸಿಗೂ ಅಧಿಕ ಮಳೆಯಾಗಿದ್ದು, ಬೇಸಿಗೆಯ ಧಗೆಯನ್ನು ಕಡಿಮೆ ಮಾಡಿತು.
ಮಳೆ ಪ್ರಮಾಣ:
ಹಂಪಿನಗರ 5.5 ಸೆಂ.ಮೀ., ನಾಯಂಡಹಳ್ಳಿ 4.5 ಸೆಂ.ಮೀ., ವಿದ್ಯಾಪೀಠ
4.5 ಸೆಂ.ಮೀ., ರಾಜರಾಜೇಶ್ವರಿ ನಗರ 4.4 ಸೆಂ.ಮೀ., ಹೊರಮಾವು 3.1 ಸೆಂ.ಮೀ., ಹೇರೋಹಳ್ಳಿ 3 ಸೆಂ.ಮೀ., ಪುಲಕೇಶಿನಗರ 2.7 ಸೆಂ.ಮೀ., ಕೆಂಗೇರಿ 2.5 ಸೆಂ.ಮೀ., ಗೊಟ್ಟಿಗೆರೆ 2.4 ಸೆಂ.ಮೀ., ಬಾಣಸವಾಡಿ 2.4 ಸೆಂ.ಮೀ., ಬಸವೇಶ್ವರ ನಗರ 2 ಸೆಂ.ಮೀ., ಸಿಂಗಸಂದ್ರ 1.8 ಸೆಂ.ಮೀ., ಪಟ್ಟಾಭಿರಾಮ ನಗರ 1.7 ಸೆಂ.ಮೀ., ನಾಗಪುರ 1.7 ಸೆಂ.ಮೀ., ಅಂಜನಾಪುರ 1.7 ಸೆಂ.ಮೀ., ಬಿಳೇಕಹಳ್ಳಿ 1.6 ಸೆಂ.ಮೀ., ಕೋರಮಂಗಲ 1.4 ಸೆಂ.ಮೀ., ಸಂಪಂಗಿರಾಮ ನಗರ 1.4 ಸೆಂ.ಮೀ., ನಂದಿನಿ ಲೇಔಟ್ 1.3 ಸೆಂ.ಮೀ., ಕುಶಾಲನಗರ 1.3 ಸೆಂ.ಮೀ., ರಾಜಾಜಿನಗರ 1.3 ಸೆಂ.ಮೀ., ವನ್ನರ್‌ಪೇಟೆ 1.2 ಸೆಂ.ಮೀ., ಎಚ್‌ಎಎಲ್ 1 ಸೆಂ.ಮೀ., ಬಸವನಪುರ 1 ಸೆಂ.ಮೀ., ಅರಕೆರೆ 1 ಸೆಂ.ಮೀ., ಎಚ್‌ಎಸ್‌ಆರ್ ಲೇಔಟ್ 1 ಸೆಂ.ಮೀ., ಕೆ.ಆರ್.ಪುರ 1 ಸೆಂ.ಮೀ. ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.