ಬೆಂಗಳೂರು: ನಗರದಲ್ಲಿ 2,400 ಚದರಡಿ ಮತ್ತು ಅದಕ್ಕಿಂತ ಮೇಲ್ಪಟ್ಟ ವಿಸ್ತೀರ್ಣವಿರುವ ಎಲ್ಲ ಕಟ್ಟಡಗಳಿಗೆ ಮಳೆ ನೀರು ಸಂಗ್ರಹ ವಿಧಾನವನ್ನು ಜಲಮಂಡಳಿ ಕಡ್ಡಾಯಗೊಳಿಸಿದ್ದರೂ ನಗರದಲ್ಲಿ 40 ಸಾವಿರಕ್ಕೂ ಹೆಚ್ಚು ಮನೆಗಳಲ್ಲಿ ಈ ವಿಧಾನಗಳನ್ನು ಅಳವಡಿಸಿಕೊಂಡಿಲ್ಲ.
ಮಳೆ ನೀರು ಸಂಗ್ರಹ ಅಳವಡಿಸಿಕೊಳ್ಳಲು ನಿರಾಸಕ್ತಿ ತೋರುತ್ತಿರುವ ನಾಗರಿಕರಿಗೆ ಕಾಯ್ದೆ ಪ್ರಕಾರ ದಂಡ ವಿಧಿಸಲಾಗಿದ್ದು, ಕಳೆದ ವರ್ಷ ಪ್ರತಿ ತಿಂಗಳು ₹2.7 ಕೋಟಿಯಂತೆ, ವಾರ್ಷಿಕ ಸುಮಾರು ₹32.40 ಕೋಟಿಯಷ್ಟು ದಂಡ ವಿಧಿಸಿದೆ. 2023ರಲ್ಲಿ ₹21 ಕೋಟಿಯಷ್ಟು ದಂಡವನ್ನು ಸಂಗ್ರಹಿಸಿದೆ.
ನಗರದಲ್ಲಿ ದಿನೇ ದಿನೇ ನೀರಿನ ಬೇಡಿಕೆ ಹೆಚ್ಚುತ್ತಿದೆ. ಬೇಡಿಕೆ ಪೂರೈಸುವುದಕ್ಕಾಗಿ 100 ಕಿ.ಮೀ ದೂರದಿಂದ ಕಾವೇರಿ ನೀರನ್ನು ನಗರಕ್ಕೆ ಪೂರೈಸಲಾಗುತ್ತಿದೆ. ದೀರ್ಘಕಾಲದಲ್ಲಿ ಈ ಅವಲಂಬನೆ ಕಷ್ಟವಾಗಿದ್ದು, ಇದಕ್ಕೆ ಪರಿಹಾರವಾಗಿ ಕಟ್ಟಡಗಳಿಗೆ ಮಳೆ ನೀರು ಸಂಗ್ರಹ ಪದ್ಧತಿ ಅಳವಡಿಕೆಯನ್ನು ಜಲಮಂಡಳಿ ಕಡ್ಡಾಯಗೊಳಿಸಿದೆ.
ಜಲಮಂಡಳಿಯ ಕಾಯ್ದೆ 72ಎ ಪ್ರಕಾರ, ಬಿಬಿಎಂಪಿ ವ್ಯಾಪ್ತಿಯಲ್ಲಿರುವ 2,400 ಚದರ ಅಡಿ ಮತ್ತು ಅದಕ್ಕಿಂತ ಹೆಚ್ಚು ವಿಸ್ತೀರ್ಣದ ನಿವೇಶನದಲ್ಲಿ, ಈಗಾಗಲೇ ನಿರ್ಮಾಣಗೊಂಡಿರುವ ಕಟ್ಟಡಗಳಲ್ಲಿ ಹಾಗೂ ನೂತನವಾಗಿ ನಿರ್ಮಿಸುವ 1,200 ಚದರ ಅಡಿ ಮತ್ತು ಅದಕ್ಕಿಂತ ಹೆಚ್ಚು ವಿಸ್ತೀರ್ಣದ ಎಲ್ಲ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸುವುದು ಕಡ್ಡಾಯ. 2009ರ ಆಗಸ್ಟ್‌ನಿಂದ ಈ ಕಾನೂನು ಜಾರಿಯಲ್ಲಿದೆ.
ಪ್ರಸ್ತುತ ನಗರದಲ್ಲಿ 11.09 ಲಕ್ಷ ಮನೆಗಳಿಗೆ ಕಾವೇರಿ ನೀರು ಪೂರೈಸಲಾಗುತ್ತಿದೆ. ಈವರೆಗೆ 2,08,994 ಮನೆಗಳಿಗೆ ಮಳೆ ನೀರು ಸಂಗ್ರಹ ವಿಧಾನ ಅಳವಡಿಸಿಕೊಳ್ಳಲಾಗಿದೆ. ಇದರಲ್ಲಿ 2,08,727 ಖಾಸಗಿ ಆಸ್ತಿಗಳು ಮತ್ತು 267 ಸರ್ಕಾರಿ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಇದೆ. 42,234 ಮನೆಗಳಿಗೆ ಮಳೆ ನೀರಿನ ಸಂಗ್ರಹ ವ್ಯವಸ್ಥೆ ಇಲ್ಲದ್ದರಿಂದ ಅವರಿಗೆ ದಂಡ ವಿಧಿಸಲಾಗುತ್ತಿದೆ.
ಬೆಂಗಳೂರಿಗೆ ವರ್ಷಕ್ಕೆ 19 ಟಿಎಂಸಿ ಅಡಿ ನೀರು ಪೂರೈಕೆಯಾಗುತ್ತಿದೆ. ನಗರದಲ್ಲಿ ಮಳೆ ನೀರು ಸಂಗ್ರಹ ಪದ್ಧತಿಯನ್ನು ಅಳವಡಿಸಿಕೊಂಡರೆ, ಸುಮಾರು 15 ಟಿಎಂಸಿ ಅಡಿಯಷ್ಟು ನೀರು ನಗರದಲ್ಲಿಯೇ ಸಿಗಲಿದೆ ಎಂಬುದು ತಜ್ಞರ ಅಭಿಮತ. ಇದೇ ಕಾರಣಕ್ಕೇ ಮಳೆ ನೀರು ಸಂಗ್ರಹ ಅಳವಡಿಕೆಯನ್ನು ಮಂಡಳಿ ಕಡ್ಡಾಯಗೊಳಿಸಿದೆ.
ನಗರದಲ್ಲಿ ಮಳೆ ನೀರು ಸಂಗ್ರಹಕ್ಕೆ ಸಾಕಷ್ಟು ಅವಕಾಶವಿದೆ. ಆದರೆ, ಒಂದು ಕಡೆ ಜನರ ನಿರಾಸಕ್ತಿ, ಇನ್ನೊಂದೆಡೆ, ಮಳೆ ನೀರು ಹಿಡಿದರೆ ಅದನ್ನು ಸಂಗ್ರಹಿಸಿಕೊಂಡು ಬಳಸುವ, ಹೆಚ್ಚಾದ್ದನ್ನು ಇಂಗಿಸಲು ಸ್ಥಳಾವಕಾಶದ ಕೊರತೆಯಿಂದ ಈ ವಿಧಾನ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಹೀಗಾಗಿ, ಕೆಲವರು ದಾಖಲಾತಿಗಾಗಿಯಷ್ಟೇ ಮಳೆ ನೀರು ಸಂಗ್ರಹ ವಿಧಾನ ಅಳವಡಿಸಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ದಂಡ ಕಟ್ಟಿ ಸುಮ್ಮನಾಗುತ್ತಿದ್ದಾರೆ.
Quote - ಮಳೆ ನೀರು ಸಂಗ್ರಹ ವಿಧಾನ ಅಳವಡಿಸಿಕೊಳ್ಳುವುದು ಸುಲಭ ಹಾಗೂ ಸರಳ. ಎಲ್ಲರೂ ಮಳೆ ನೀರು ಸಂಗ್ರಹ ವಿಧಾನ ಅಳವಡಿಸಿಕೊಳ್ಳಿ. ಕಾವೇರಿ ನೀರು ಪೂರೈಕೆ ಮೇಲಿನ ಒತ್ತಡವನ್ನು ತಗ್ಗಿಸಿ. ಜಲಸಂರಕ್ಷಣೆಗೆ ಸಹಕರಿಸಿ. –ರಾಮ್‌ಪ್ರಸಾತ್ ಮನೋಹರ್ ಅಧ್ಯಕ್ಷ ಜಲಮಂಡಳಿ
ದಂಡ ಎಷ್ಟು ಹೇಗೆ ?
ನೀರಿನ ಬಳಕೆಯ ಶುಲ್ಕ ₹100 ಇದ್ದರೆ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಿಕೊಳ್ಳದ ಕಟ್ಟಡಗಳ ಮಾಲೀಕರಿಗೆ ಮೊದಲ ಮೂರು ತಿಂಗಳು ತಲಾ ₹25 (ಶೇ 25) ದಂಡ ಹಾಕಲಾಗುತ್ತದೆ. ನಾಲ್ಕರಿಂದ ಆರು ತಿಂಗಳವರೆಗೆ ಶೇ 50ರಷ್ಟು ಏಳರಿಂದ ಒಂಬತ್ತನೇ ತಿಂಗಳವರೆಗೆ ಶೇ 75ರಷ್ಟು ದಂಡ ವಿಧಿಸಲಾಗುತ್ತದೆ. ನಂತರವೂ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಿಕೊಳ್ಳದಿದ್ದರೆ ದಂಡದ ಪ್ರಮಾಣ ಹೆಚ್ಚುತ್ತಾ ಹೋಗುತ್ತದೆ.
‘ಸುಗ್ಗಿ ಕೇಂದ್ರ’ದಲ್ಲಿ ಮಾಹಿತಿ
ಜಯನಗರದ ಸರ್ ಎಂ. ವಿಶ್ವೇಶ್ವರಯ್ಯ ಮಳೆ ನೀರು ಸುಗ್ಗಿ ಕೇಂದ್ರದಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆಯ 21 ಮಾದರಿಗಳು ಇವೆ. ವ್ಯವಸ್ಥೆಯ ಬಗ್ಗೆ ಸಂಪೂರ್ಣ ಮತ್ತು ಸಮಗ್ರ ಮಾಹಿತಿ ಪಡೆಯಬಹುದು. ಮಾಹಿತಿಗೆ 080–26653666 ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.