ADVERTISEMENT

ರಾಜರಾಜೇಶ್ವರಿನಗರ | ರಾಮಪ್ಪನ ಕೆರೆ: ತ್ಯಾಜ್ಯ ತೆರವಿಗೆ ಆಗ್ರಹ

ಕಲುಷಿತಗೊಂಡ ನೀರು: ನಾಗರಿಕರ ಆತಂಕ

​ಪ್ರಜಾವಾಣಿ ವಾರ್ತೆ
Published 30 ಮೇ 2024, 22:34 IST
Last Updated 30 ಮೇ 2024, 22:34 IST
ರಾಮಪ್ಪನ ಕೆರೆ ಅಂಗಳದಲ್ಲಿ ತ್ಯಾಜ್ಯ ಸುರಿದಿರುವ ದೃಶ್ಯ
ರಾಮಪ್ಪನ ಕೆರೆ ಅಂಗಳದಲ್ಲಿ ತ್ಯಾಜ್ಯ ಸುರಿದಿರುವ ದೃಶ್ಯ   

ರಾಜರಾಜೇಶ್ವರಿನಗರ: ಬೆಂಗಳೂರು ದಕ್ಷಿಣ ತಾಲ್ಲೂಕಿನ ಪುನುಗುಮಾರನಹಳ್ಳಿಯ ರಾಮಪ್ಪನ ಕೆರೆಯಲ್ಲಿ ಬಿರು ಬೇಸಿಗೆಯಲ್ಲೂ ನೀರು ಸಂಗ್ರಹವಾಗಿದ್ದು, ಸುತ್ತಲಿನ ಅಂತರ್ಜಲ ಹೆಚ್ಚಲು ಕಾರಣವಾಗಿದೆ.

ಸಮೃದ್ಧ ಜಲರಾಶಿಯಿರುವ ಈ ಕೆರೆಯ ಒಂದು ಬದಿಯಲ್ಲಿ ಘನ ತ್ಯಾಜ್ಯ, ಕಸ ಕಡ್ಡಿ, ನರ್ಸರಿಯಲ್ಲಿ ಉಪಯೋಗಕ್ಕೆ ಬಾರದ ಮಣ್ಣು, ಕಲ್ಲು ಸುರಿಯುತ್ತಿದ್ದಾರೆ‘ ಎಂದು ನಾಗರಿಕರು ಬೇಸರ ವ್ಯಕ್ತಪಡಿಸುತ್ತಾರೆ.

ರಾಮಪ್ಪನ ಕೆರೆಗೆ, ಪುನುಗುಮಾರನಹಳ್ಳಿ. ಗಣಪತಿಹಳ್ಳಿ. ಬಸಪ್ಪನಪಾಳ್ಯ. ಕೇತೋಹಳ್ಳಿ ಭಾಗದಿಂದ ನೀರುಗಾಲುವೆ ಮೂಲಕ ಮಳೆ ನೀರು ಹರಿದು ಬರುತ್ತದೆ. ಹೀಗಾಗಿ ಎರಡ್ಮೂರು ವರ್ಷಗಳ ಹಿಂದೆ ತುಂಬಿದ ಕೆರೆಯಲ್ಲಿ ಈಗಲೂ ನೀರಿದೆ. ಆದರೆ, ಇತ್ತೀಚೆಗೆ ಕೆರೆ ಸುತ್ತ ತ್ಯಾಜ್ಯ ಸುರಿಯುತ್ತಿದ್ದು, ಇದರಿಂದ ಕೆರೆ ನೀರು ಕಲುಷಿತಗೊಂಡು, ಪರಿಸರವೂ ಹಾಳಾಗುತ್ತದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಾರೆ.

ADVERTISEMENT

ನಾಲ್ಕು ವರ್ಷಗಳ ಹಿಂದೆ ಹೀಗೆ ತ್ಯಾಜ್ಯಗಳಿಂದ ತುಂಬಿ ಹೋಗಿ, ಕೆರೆಗೆ ಮಳೆ ನೀರು ಹರಿಯುವ ನೀರುಗಾಲುವೆಗಳು ಮುಚ್ಚಿ ಹೋಗಿದ್ದವು. ಮಳೆ ಬಂದಾಗ ಕೆರೆ ಸೇರುತ್ತಿದ್ದ ಅಲ್ಪಸ್ವಲ್ಪ ಮಳೆ ನೀರು ಡಿಸೆಂಬರ್‌ ವೇಳೆಗೆ ಖಾಲಿಯಾಗುತ್ತಿತ್ತು. ಕೆರೆಯ ಪರಿಸ್ಥಿತಿ ಗಮನಿಸಿದ್ದ ಯುದ್ಧ ಭೂಮಿ ಹೋರಾಟ ಸೇನೆ ರಾಜ್ಯ ಘಟಕದ ಅಧ್ಯಕ್ಷ ಹೇಮಂತ್ ರಾಜ್, 2019ರಲ್ಲಿ ಕೆರೆ ಸ್ವಚ್ಛತೆಗೆ ಮುಂದಾದರು. ಕಂದಾಯ ಇಲಾಖೆಯ ಅನುಮತಿಯೊಂದಿಗೆ, ಸ್ವಂತ ಹಣದಿಂದ ಜೆಸಿಬಿ, ಟ್ರ್ಯಾಕ್ಟರ್‌‌ಗಳನ್ನು ಬಳಸಿ. ಕೆರೆ ಸ್ವಚ್ಛಗೊಳಿಸಿದರು. ನೀರುಗಾಲುವೆಗಳ ಒತ್ತುವರಿ ತೆರವುಗೊಳಿಸಿ, ಮಳೆ ನೀರು ಸರಾಗವಾಗಿ ಹರಿಯುವಂತೆ ಮಾಡಿದರು. 2020ರಲ್ಲಿ ಉತ್ತಮ ಮಳೆ ಬಂತು ಕೆರೆ ಭರ್ತಿಯಾಯಿತು. ಸ್ವಚ್ಛಗೊಂಡ ಕೆರೆಗೆ ಕಂದಾಯ ಇಲಾಖೆ ಕೆರೆಯ ಸುತ್ತ ತಂತಿ ಬೇಲಿ ನಿರ್ಮಿಸಿತ್ತು. 

‘ಈಗ ಮತ್ತೆ ಕೆರೆಗೆ ತ್ಯಾಜ್ಯ ತುಂಬುವ ಕೆಲಸವಾಗುತ್ತಿದೆ. ಕೆರೆಯ ಸುತ್ತ ಹಾಕಿದ ತಂತಿ ಬೇಲಿ ಕಿತ್ತುಹಾಕಲಾಗಿದೆ. ಸಂಬಂಧಪಟ್ಟವರು ಇದನ್ನು ತಡೆದು ಕರೆಯನ್ನು ರಕ್ಷಿಸಬೇಕು‘ ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ಕೆರೆಯ ಒಂದು ಭಾಗದಲ್ಲಿ ತಂತಿ ಬೇಲಿಯ ಕಲ್ಲು ಕಟ್ಟಡ ಮುರಿದು ಹಾಕಿರುವುದು
ಬೇಸಿಗೆಯಲ್ಲೂ ರಾಮಪ್ಪನ ಕೆರೆಯಲ್ಲಿ ನೀರು

ಕೆರೆ ರಕ್ಷಿಸಿ

‘ರಾಮಪ್ಪನಕೆರೆ ರಾಮೋಹಳ್ಳಿ ಕೆರೆಗಳಲ್ಲಿ ಬೇಸಿಗೆಯಲ್ಲೂ ನೀರಿದ್ದರಿಂದ ಸುತ್ತಲಿನ ಕೊಳವೆಬಾವಿಗಳಲ್ಲಿ ನೀರು ಬತ್ತಿ ಹೋಗಲಿಲ್ಲ. ಇದರಿಂದ ಜನ ಜಾನುವಾರುಗಳಿಗೆ ಪಶುಪಕ್ಷಿಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗಲಿಲ್ಲ.‌ ಕೃಷಿ ನರ್ಸರಿ ಚಟುವಟಿಕೆಗಳಿಗೂ ತೊಂದರೆಯಾಗಲಿಲ್ಲ. ಕೆರೆಗಳನ್ನು ರಕ್ಷಿಸುವ ಅಗತ್ಯವಿದೆ‘ ಎಂದು ಪುನುಗುಮಾರನಹಳ್ಳಿಯ ನರ್ಸರಿ ಮಾಲೀಕ ರೇವಣ್ಣ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.