
ರಾಮೋಹಳ್ಳಿ ರೈಲ್ವೆ ಕೆಳ ಸೇತುವೆ ಕಾಮಗಾರಿಗಾಗಿ ರಸ್ತೆ ಬಂದ್ ಮಾಡಿರುವ ಕುರಿತು ಸೂಚನಾ ಫಲಕ ಅಳವಡಿಸಿರುವ ಇಲಾಖೆ.
ಪ್ರಜಾವಾಣಿ ಚಿತ್ರ: ಎಂ.ಎಸ್.ಮಂಜುನಾಥ್
ಬೆಂಗಳೂರು: ಮೈಸೂರು ರಸ್ತೆಯ ರಾಮೋಹಳ್ಳಿ ರೈಲ್ವೆ ಕೇಳಸೇತುವೆ ಕಾಮಗಾರಿಗಾಗಿ ರಸ್ತೆ ಬಂದ್ ಮಾಡಿರುವುದರಿಂದ ಸಾರ್ವಜನಿಕರು ಅತ್ತಿತ್ತ ಸಂಚರಿಸಲು ಸಂಕಷ್ಟ ಪಡುವಂತಾಗಿದೆ. ಈ ನಡುವೆ ಭೀಮನಕುಪ್ಪೆ ಮುಖ್ಯರಸ್ತೆಯ ಮಧ್ಯೆ ಗ್ರಾಮಸ್ಥರು ಮಣ್ಣು ಸುರಿದಿರುವುದರಿಂದ ವಾಹನ ಸವಾರರಿಗೆ ತೊಂದರೆ ಉಂಟಾಗಿದೆ.
2026ರ ನವೆಂಬರ್ ಅಂತ್ಯಕ್ಕೆ ಕೆಳ ಸೇತುವೆ ಕಾಮಗಾರಿ ಮುಕ್ತಾಯಗೊಳ್ಳಲಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ. ರಸ್ತೆ ಬಂದ್ ಆಗಿರುವುದರಿಂದ ಮೈಸೂರು ರಸ್ತೆಯಿಂದ ಬರುವ ವಾಹನಗಳು ಚಲಘಟ್ಟ ಮೂಲಕ ಭೀಮನಕುಪ್ಪೆ ಮಾರ್ಗವಾಗಿ ವಿನಾಯಕನಗರ, ರಾಮೋಹಳ್ಳಿ, ಕೇತೋಹಳ್ಳಿ, ದೊಡ್ಡಆಲದ ಮರ, ಚುಂಚನಕುಪ್ಪೆ, ಚಂದ್ರಪ್ಪ ಸರ್ಕಲ್ ತಲುಪಲು 7–8 ಕಿಲೋ ಮೀಟರ್ ಸುತ್ತು ಹಾಕುವಂತಾಗಿದೆ.
ಅಲ್ಲದೇ ಕುಂಬಳಗೋಡು ಕೈಗಾರಿಕಾ ಪ್ರದೇಶ, ಚಿಕ್ಕಲೂರಿಗೆ ತೆರಳಲು ತೊಂದರೆ ಆಗುತ್ತಿದೆ. ಗೇರು ಪಾಳ್ಯಕ್ಕೆ ಸರಿಯಾದ ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು, ಸಾರ್ವಜನಿಕರು ಪರದಾಡುತ್ತಿದ್ದಾರೆ. ಈ ಮಾರ್ಗದಲ್ಲಿ ಸರಿಯಾದ ರಸ್ತೆಯಿಲ್ಲದ ಕಾರಣ ಮಣ್ಣು ಹಾಕಿ, ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.
ಇದರ ನಡುವೆ ಭಾರಿ ವಾಹನಗಳು ಸಂಚರಿಸದಂತೆ ಭೀಮನಕುಪ್ಪೆ ನಿವಾಸಿಗಳು ಮುಖ್ಯ ರಸ್ತೆಯ ಮಧ್ಯೆಯೇ ಮಣ್ಣು ಸುರಿದಿದ್ದಾರೆ. ಪೊಲೀಸರು ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಅರ್ಧ ಭಾಗ ಮಣ್ಣು ತೆರವು ಮಾಡಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇದರಿಂದ ವಾಹನ ಸಂಚಾರ ನಿಧಾನವಾಗಿ ಸಾಗುತ್ತಿದ್ದು, ನಿಗದಿತ ಸಮಯಕ್ಕೆ ಸ್ಥಳ ತಲುಪುವುದು ದುಸ್ತರವಾಗಿದೆ.
ಮೂರ್ನಾಲ್ಕು ದಿನಗಳ ಹಿಂದೆ ಗ್ರಾಮದೊಳಗೆ ಭಾರಿ ವಾಹನಗಳು ಸಂಚರಿಸಿದ ಪರಿಣಾಮ ಒಳಚರಂಡಿ ಪೈಪ್‌ಗಳು, ನೀರಿನ ಪೈಪ್‌ಗಳು ಹಾನಿಯಾಗಿದ್ದು, ರಸ್ತೆಗಳು ಗುಂಡಿ ಬಿದ್ದವು. ಆಗ ವಾಹನಗಳು ಊರಿಗೂ ಪ್ರವೇಶಿಸದಂತೆ ಭೀಮನಕುಪ್ಪೆ ನಿವಾಸಿಗಳು ಪ್ರವೇಶ ದ್ವಾರದಲ್ಲೇ ಮಣ್ಣು ಸುರಿದಿದ್ದಾರೆ. ಗ್ರಾಮದೊಳಗೆ ದ್ವಿಚಕ್ರ ವಾಹನಗಳು ತೆರಳಲು ಮಾತ್ರ ಕಿರಿದಾದ ದಾರಿ ಮಾಡಿಕೊಂಡಿದ್ದಾರೆ.
ರಾಮೋಹಳ್ಳಿ ರೈಲ್ವೆ ಕೆಳಸೇತುವೆ ಮೂಲಕ ಕುಂಬಳಗೋಡು ಕೈಗಾರಿಕಾ ಪ್ರದೇಶಕ್ಕೆ ಅಂದಾಜು ಒಂದು ಕಿಲೋ ಮೀಟರ್ ದೂರ. ರಾಮೋಹಳ್ಳಿ ರೈಲ್ವೆ ಗೇಟ್ ರಸ್ತೆ ಬಂದ್ ಆಗಿರುವ ಕಾರಣ ಸುತ್ತು ಹಾಕಿಕೊಂಡು ಹೋಗುವಂತಾಗಿದೆ. ವಿಪರೀತ ದಟ್ಟಣೆಯಿಂದ ವಾಹನ ಸವಾರರು ಪರದಾಡುತ್ತಿದ್ದು, ಸಮಸ್ಯೆ ತೀವ್ರಗೊಂಡಿದೆ.
ಐದಾರು ಕಿಲೋ ಮೀಟರ್ ಸುತ್ತು ಹಾಕಿಕೊಂಡು ಹೋಗಬೇಕಾಗಿರುವುದರಿಂದ ಉದ್ಯೋಗಿಗಳು ನಿಗದಿತ ಸಮಯಕ್ಕೆ ಕಚೇರಿ ತಲುಪಲು ಹಾಗೂ ವಿದ್ಯಾರ್ಥಿಗಳು ಶಾಲಾ–ಕಾಲೇಜಿಗೆ ತೆರಳಲು ಕಷ್ಟವಾಗಿದೆ. ನಿತ್ಯ ಸಾವಿರಾರು ಬಸ್, ಕಾರು, ದ್ವಿಚಕ್ರ ವಾಹನಗಳು ಸಂಚರಿಸುತ್ತವೆ. ದಟ್ಟಣೆ ಜೊತೆಗೆ ದೂಳು ವಾಹನ ಸವಾರರನ್ನು ಹೈರಾಣಾಗಿಸುತ್ತಿದೆ. ದಟ್ಟಣೆ ನಿವಾರಿಸಲು ಸಂಚಾರ ಪೊಲೀಸರು ಹರಸಹಾಸ ಪಡುತ್ತಿದ್ದಾರೆ.
‘ಮಣ್ಣಿನ ರಸ್ತೆ ನಿರ್ಮಿಸುತ್ತಿರುವುದರಿಂದ ರಸ್ತೆ ತುಂಬಾ ದೂಳು ಆವರಿಸಿದೆ. ವಾಹನದ ಚಕ್ರಗಳು ಮಣ್ಣಿನಲ್ಲಿ ಹೂತು ಹೋಗುತ್ತಿದ್ದು, ಸಂಚಾರಕ್ಕೂ ಅಡ್ಡಿಯಾಗುತ್ತಿದೆ. ಜೆಸಿಬಿ ಯಂತ್ರದ ಸಹಾಯದಿಂದ ಮಣ್ಣಿನಲ್ಲಿ ಸಿಲುಕಿಕೊಂಡಿದ್ದ ವಾಹನಗಳನ್ನು ಮೇಲಕ್ಕೆ ಎತ್ತಲಾಗುತ್ತಿದೆ. ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳಿಂದಾಗಿ ಸಂಚಾರ ನರಕವಾಗಿ ಪರಿವರ್ತನೆಗೊಂಡಿದೆ. ಯಾವುದೇ ಸಿದ್ಧತೆ ಇಲ್ಲದೆ ರೈಲ್ವೆ ಇಲಾಖೆ ಕೆಳಸೇತುವೆ ಕಾಮಗಾರಿ ಕೈಗೊಂಡಿದೆ. ವಾಹನ ಸಂಚಾರಕ್ಕೆ ಪರ್ಯಾಯ ರಸ್ತೆಯ ವ್ಯವಸ್ಥೆ ಮಾಡಿರಲಿಲ್ಲ’ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.
‘ಸಂಪರ್ಕ ಕಲ್ಪಿಸುವ ರಸ್ತೆಗಳು ಗುಂಡಿಗಳಿಂದ ಕೂಡಿದ್ದು, ನಿವಾಸಿಗಳು, ವಾಹನ ಸವಾರರಿಗೆ ದೂಳಿನ ಮಜ್ಜನವಾಗುತ್ತಿದೆ. ಇದರಿಂದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಗುಂಡಿ ಬಿದ್ದ ರಸ್ತೆಗಳಲ್ಲಿ ಸಂಚರಿಸಲು ತೆರಿಗೆ ಪಾವತಿಸಬೇಕೇ’ ಎಂದು ಅವರು ಪ್ರಶ್ನಿಸಿದರು.
ವಿದ್ಯುತ್ ಕಂಬ ಮನೆಗೆ ಹಾನಿ
‘ಭಾರಿ ಗಾತ್ರದ ವಾಹನ ಸೇರಿ ಸಾವಿರಾರು ವಾಹನಗಳು ಭೀಮನಕುಪ್ಪೆ ಗ್ರಾಮದೊಳಗೆ ಸಂಚರಿಸಿದ ಪರಿಣಾಮ ನೀರಿನ ಪೈಪ್‌ಗಳು ಒಡೆದು ಕುಡಿಯುವ ನೀರಿಗೆ ತೊಂದರೆ ಆಗಿದೆ. ಜತೆಗೆ ರಸ್ತೆ ಗುಂಡಿಗಳು ನಿರ್ಮಾಣವಾಗುತ್ತಿವೆ. ಕುಡಿಯುವ ನೀರಿಗೆ ಒಳಚರಂಡಿ ನೀರು ಮಿಶ್ರಣವಾಗಿ ಕುಡಿಯಲು ಆಗದ ಪರಿಸ್ಥಿತಿ ಇದೆ. ಇದರಿಂದ ಭೀಮನ ಕುಪ್ಪೆ ಗ್ರಾಮದ ಜನರು ಬೇಸತ್ತು ವಾಹನಗಳು ಬಾರದಂತೆ ಮಣ್ಣು ಸುರಿದಿದ್ದಾರೆ’ ಎಂದು ರಾಮೋಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಮಹೇಶ್ ತಿಳಿಸಿದರು. ‘ಭಾರಿ ಗಾತ್ರದ ವಾಹನಗಳು ತಿರುವು ಪಡೆಯುವ ವೇಳೆ ಮನೆಗಳಿಗೆ ಡಿಕ್ಕಿ ಹೊಡೆದು ಹಾನಿ ಉಂಟು ಮಾಡುತ್ತಿವೆ. ಮಾರ್ಗದ ಸೂಚನಾ ಫಲಕ ಅಳವಡಿಸದ ಕಾರಣ ಗ್ರಾಮದೊಳಗೆ ವಾಹನಗಳು ಬರುತ್ತಿದ್ದು ವಿದ್ಯುತ್ ಕಂಬ ಮನೆಯ ಕಾಂಪೌಂಡ್‌ಗಳಿಗೆ ಹಾನಿಯಾಗುತ್ತಿದೆ. ಮಕ್ಕಳು ವೃದ್ಧರು ಹಾಗೂ ಮಹಿಳೆಯರು ಮನೆಯ ಹೊರಗೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ದೂರಿದರು.
‘ಸಾವಿರಾರು ಕಾರ್ಮಿಕರಿಗೆ ತೊಂದರೆ’
‘ರೈಲ್ವೆ ಇಲಾಖೆ ಕೆಳ ಸೇತುವೆ ಕಾಮಗಾರಿ ಕೈಗೊಂಡಿರುವುದರಿಂದ ಕುಂಬಳಗೋಡು ಕೈಗಾರಿಕಾ ಪ್ರದೇಶಕ್ಕೆ ಕಾರ್ಮಿಕರು ಬರಲು ತೊಂದರೆ ಆಗುತ್ತಿದೆ. ಈ ಭಾಗದಲ್ಲಿ ಐನೂರಕ್ಕೂ ಹೆಚ್ಚು ಕೈಗಾರಿಕೆಗಳಿವೆ. ಸಾವಿರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಐದಾರು ಕಿಲೋ ಮೀಟರ್ ಸುತ್ತು ಹಾಕಿಕೊಂಡು ಬರಬೇಕು. ಸರಿಯಾದ ಸಮಯಕ್ಕೆ ಬಸ್ ಸಿಗುವುದಿಲ್ಲ’ ಎಂದು ಕುಂಬಳಗೋಡು ಇಂಡಸ್ಟ್ರೀಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಕಮಲೇಶ್ ಮೆಹ್ತಾ ಅಲವತ್ತುಕೊಂಡರು. ‘ನಿಯಮದ ಪ್ರಕಾರ 60 ಅಡಿ ಅಗಲ ರಸ್ತೆ ನಿರ್ಮಿಸಬೇಕು. ಆದರೆ ಕೆಳಸೇತುವೆ ರಸ್ತೆಯು 32 ಅಡಿ ಅಗಲವಿದೆ. ಭಾರಿ ಗಾತ್ರದ ವಾಹನಗಳು ಸಂಚರಿಸುವುದರಿಂದ ಇತರೆ ವಾಹನಗಳಿಗೆ ತೊಂದರೆ ಆಗುತ್ತದೆ. ಈ ಬಗ್ಗೆ ಪೊಲೀಸ್ ಲೋಕೋಪಯೋಗಿ ಕೆಐಎಡಿಬಿ ರೈಲ್ವೆ ಇಲಾಖೆ ಕುಂಬಳಗೋಡು ಗ್ರಾಮ ಪಂಚಾಯಿತಿಗೂ ಮನವಿ ಮಾಡಲಾಗಿದೆ’ ಎಂದು ತಿಳಿಸಿದರು.
‘ಮಣ್ಣು ತೆರವಿಗೆ ಯತ್ನ’
‘ಗ್ರಾಮಕ್ಕೆ ವಾಹನಗಳು ಬಾರದಂತೆ ಗ್ರಾಮಸ್ಥರು ಮಣ್ಣು ಸುರಿದಿರುವ ಬಗ್ಗೆ ಮಾಹಿತಿ ಇದೆ. ಆದರೆ ಗ್ರಾಮದೊಳಗೆ ವಾಹನಗಳು ಸಂಚರಿಸಿದ ಪರಿಣಾಮ ಮನೆ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಇದರಿಂದಾಗಿ ಜನರಿಗೂ ತೊಂದರೆ ಆಗಿದೆ. ಹಾಗಾಗಿ ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಟ್ಟು ಮಣ್ಣು ತೆರವು ಮಾಡಲಾಗುವುದು’ ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.