ಯಲಹಂಕ: ರಾಜಾನುಕುಂಟೆ–ಮಧುರೆ ರಸ್ತೆಯ ಸೀತಕೆಂಪನಹಳ್ಳಿ ಗೇಟ್ ಬಳಿ ಕಾರು ಹಾಗೂ ದ್ವಿಚಕ್ರ ವಾಹನ ನಡುವೆ ಸಂಭವಿಸಿದ್ದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪತ್ರಿಕಾ ವಿತರಕಿ ಅಶ್ವಿನಿ (33) ಅವರು ಮೃತಪಟ್ಟಿದ್ದಾರೆ.
ಸೆ.3ರಂದು ಬೆಳಗಿನ ಜಾವ ಪತ್ರಿಕೆ ವಿತರಣೆ ಮಾಡಲು ದ್ವಿಚಕ್ರ ವಾಹನದಲ್ಲಿ ವಿತರಕ ವಿಜಿಕುಮಾರ್ ಅವರ ಪತ್ನಿ ಅಶ್ವಿನಿ ಅವರು ತೆರಳುತ್ತಿದ್ದರು. ದಿಬ್ಬೂರು ಕಡೆಯಿಂದ ವೇಗವಾಗಿ ಬಂದ ಕಾರು, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಯಲಹಂಕದ ಸ್ಪರ್ಶ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಸೋಮವಾರ (ಸೆ.8) ಮೃತಪಟ್ಟಿದ್ದಾರೆ.
ದಂಪತಿಗೆ 12 ಹಾಗೂ 10 ವರ್ಷದ ಇಬ್ಬರು ಮಕ್ಕಳಿದ್ದಾರೆ. ವಿಜಿಕುಮಾರ್ ಅವರು ಈ ಭಾಗದ ಹತ್ತಾರು ಹಳ್ಳಿಗಳಿಗೆ ಪತ್ರಿಕೆ ವಿತರಣೆ ಮಾಡುತ್ತಿದ್ದಾರೆ. ಅಶ್ವಿನಿ ಅವರೂ ದ್ವಿಚಕ್ರ ವಾಹನದಲ್ಲಿ ಸುತ್ತಮುತ್ತಲ ಮನೆಗಳಿಗೆ ಪತ್ರಿಕೆಗಳನ್ನು ವಿತರಣೆ ಮಾಡುತ್ತಿದ್ದರು ಎಂದು ಯಲಹಂಕ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ವೀರಭದ್ರ ಹಾಗೂ ಯಲಹಂಕ ಮಾಧ್ಯಮ ಕೇಂದ್ರದ ಪದಾಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.