ADVERTISEMENT

ಬೆಂಗಳೂರು: ರಸ್ತೆ ಕತ್ತರಿಸಲು ಪೋರ್ಟಲ್‌ನಲ್ಲಿ ಅನುಮತಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 21:03 IST
Last Updated 4 ಫೆಬ್ರುವರಿ 2026, 21:03 IST
<div class="paragraphs"><p>BBMP </p></div>

BBMP

   

ಬೆಂಗಳೂರು: ರಸ್ತೆ ಕತ್ತರಿಸುವುದು ಮತ್ತು ಇತರೆ ಸೇವೆಗಳಿಗೆ ಹೊಸದಾಗಿ ಅಭಿವೃದ್ಧಿಪಡಿಸಿರುವ ‘ಮಾರ್ಕ್ಸ್‌’ (MARCS) ಪೋರ್ಟಲ್‌ನಲ್ಲೇ ಅರ್ಜಿ ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ನಗರದ ಮೂಲಸೌಕರ್ಯ ಯೋಜನೆಗಳು ಮತ್ತು ಸಂಚಾರ ದಟ್ಟಣೆ ನಿರ್ವಹಣೆಯಲ್ಲಿ ವಿವಿಧ ಇಲಾಖೆಗಳ ನಡುವೆ ಹೆಚ್ಚಿನ ಸಮನ್ವಯ ಸಾಧಿಸಲು ನಗರ ಪಾಲಿಕೆ, ಗೇಲ್, ಸಂಚಾರ ಪೊಲೀಸ್, ಬೆಸ್ಕಾಂ, ಕೆಪಿಟಿಸಿಎಲ್ ಮತ್ತು ಜಲಮಂಡಳಿಯ ಹಿರಿಯ ಅಧಿಕಾರಿಗಳ ಜಂಟಿ ಸಮನ್ವಯ ಸಭೆಯಲ್ಲಿ ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್. ರಮೇಶ ಅವರು ‘ಮಾರ್ಕ್ಸ್‌’ ಕಡ್ಡಾಯಗೊಳಿಸಿರುವ ವಿಷಯ ತಿಳಿಸಿದರು.

ADVERTISEMENT

ಈ ಹಿಂದಿನ ತಂತ್ರಜ್ಞಾನದಲ್ಲಿ ಅರ್ಜಿ ಸಲ್ಲಿಸಿದ್ದರೂ ‘ಮಾರ್ಕ್ಸ್‌’ನಲ್ಲಿ ಹೊಸ ಅರ್ಜಿಗಳನ್ನು ಸಲ್ಲಿಸಬೇಕು. ಪ್ರಸ್ತುತ ಪೋರ್ಟಲ್‌ನಲ್ಲಿ ತಾಂತ್ರಿಕ ದೋಷಗಳು ಇದ್ದರೆ ಶೀಘ್ರವಾಗಿ ಸರಿಪಡಿಸಲಾಗುವುದು ಎಂದರು.

ರಸ್ತೆಗಳ ಸಂಪೂರ್ಣ ವಿವರಗಳನ್ನು ಪಡೆಯಲು ‘ರಸ್ತೆ ಮಾಹಿತಿ ನಿರ್ವಹಣಾ ವ್ಯವಸ್ಥೆ’ ಸಾಫ್ಟ್‌ವೇರ್ ಅನ್ನು ಶೀಘ್ರದಲ್ಲೇ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.

ಇಬ್ಲೂರು ಜಂಕ್ಷನ್ ಅಭಿವೃದ್ಧಿಗೆ ಅಂಡರ್‌ ಪಾಸ್ ಮತ್ತು ಮೇಲ್ಸೇತುವೆ ನಿರ್ಮಾಣದ ಪ್ರಸ್ತಾವಗಳಿವೆ. ಈ ಪ್ರದೇಶದಲ್ಲಿ ವಿವಿಧ ಇಲಾಖೆಗಳು ಕೈಗೊಂಡಿರುವ ಯೋಜನೆಗಳ ಮಾಹಿತಿಯನ್ನು ಒದಗಿಸಬೇಕು. ಗೇಲ್ ಸಂಸ್ಥೆಯು 8 ಇಂಚಿನ ಮಧ್ಯಮ ಒತ್ತಡದ ಪೈಪ್‌ ಲೈನ್ ಅಳವಡಿಸಿದ್ದು, ಜಂಟಿ ಸಮೀಕ್ಷೆ ನಡೆಸಿ ಕಾರ್ಯಸಾಧ್ಯತಾ ವರದಿ ನೀಡಲು ಸೂಚಿಸಿದರು.

ಸಲಹೆ: ನಗರದಲ್ಲಿ ಹಲವು ಸ್ಥಳಗಳಲ್ಲಿ ಸಂಚಾರ ಸುಗಮಗೊಳಿಸಲು ಸಂಚಾರ ಪೊಲೀಸರು ಸಲಹೆಗಳನ್ನು ನೀಡಿದರು.

ಇಬ್ಲೂರಿನ ಮಣಿಪಾಲ್ ಕೌಂಟಿ ಬಳಿ ಚರಂಡಿ ನಿರ್ಮಾಣ ಮತ್ತು ಅಗರ ಕೆರೆ ಬಳಿಯ ಸರ್ವಿಸ್ ರಸ್ತೆ ಮತ್ತು ಮುಖ್ಯ ರಸ್ತೆ ನಡುವೆ ನೀರಿನ ಹರಿವಿನ ಸಮಸ್ಯೆ ನಿವಾರಿಸಬೇಕು. ಅಗರದಿಂದ ಆನೆಪಾಳ್ಯದವರೆಗೆ ಅಪಘಾತ ವಲಯಗಳಲ್ಲಿ ರಸ್ತೆ ವಿಭಜಕಗಳ ಎತ್ತರ ಹೆಚ್ಚಿಸಬೇಕು. ಕಸವನಹಳ್ಳಿ ರಸ್ತೆಯಲ್ಲಿ ವಿಭಜಕ ಅಳವಡಿಕೆ, ಜೀಬ್ರಾ ಕ್ರಾಸಿಂಗ್, ಸ್ಟಾಪ್ ಲೈನ್ ಮತ್ತು ಸಿಗ್ನಲ್ ಮಾಹಿತಿ ಫಲಕಗಳನ್ನು ಅಳವಡಿಸಬೇಕು ಎಂದು ಸಲಹೆ ನೀಡಲಾಯಿತು.

ಸಿಲ್ಕ್ ಬೋರ್ಡ್ ಜಂಕ್ಷನ್, ಇಬ್ಲೂರು ಮಣಿಪಾಲ್ ಆಸ್ಪತ್ರೆ ಜಂಕ್ಷನ್ ಮತ್ತು ಬನ್ನೇರುಘಟ್ಟ ರಸ್ತೆಯ ರಾಜಕಾಲುವೆಗಳಲ್ಲಿ ತಕ್ಷಣ ಹೂಳೆತ್ತಲು ಸೂಚಿಸಲಾಯಿತು. ಪ್ರತಿ ಉಪ ವಿಭಾಗ ಮಟ್ಟದಲ್ಲಿ ಎಲ್ಲಾ ಇಲಾಖೆಗಳ ಸಮನ್ವಯದೊಂದಿಗೆ ಕಾರ್ಯಪಡೆ ರಚಿಸಿ, ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು ಎಂದು ಆಯುಕ್ತರು ಸೂಚಿಸಿದರು

ಹೆಚ್ಚುವರಿ ಅಭಿವೃದ್ಧಿ ಆಯುಕ್ತ ನವೀನ್ ಕುಮಾರ್ ರಾಜು, ದಕ್ಷಿಣ ಸಂಚಾರ ವಿಭಾಗದ ಡಿಸಿಪಿ ಗೋಪಾಲ್, ಮುಖ್ಯ ಎಂಜಿನಿಯರ್‌ಗಳಾದ ಬಸವರಾಜ ಕಬಾಡೆ, ಕೆ.ವಿ. ರವಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.