
ಬೆಂಗಳೂರು: ನಗರದಲ್ಲಿ ಈವರೆಗೆ 15 ಸಾವಿರ ಗುಂಡಿಗಳನ್ನು ಮುಚ್ಚಲಾಗಿದ್ದು, ಇನ್ನೆರಡು ದಿನಗಳಲ್ಲಿ ಬಹುತೇಕ ಎಲ್ಲ ರಸ್ತೆಗಳಲ್ಲೂ ದುರಸ್ತಿ ಕಾರ್ಯ ಮುಗಿಯಲಿದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದ ಗಡುವು ಅ.31ಕ್ಕೆ ಮುಗಿದಿದ್ದು, ಎಲ್ಲ ಗುಂಡಿಗಳನ್ನು ಮುಚ್ಚಲಾಗಿದೆಯೇ’ ಎಂಬ ಸುದ್ದಿಗಾರರ ಪ್ರಶ್ನೆಗೆ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ‘ಮುಖ್ಯಮಂತ್ರಿಯವರ ಸೂಚನೆಯಂತೆ ಐದೂ ನಗರ ಪಾಲಿಕೆಗಳಲ್ಲಿ ಕ್ಷಿಪ್ರಗತಿಯಲ್ಲಿ ಕೆಲಸ ಮಾಡಿದ್ದೇವೆ. ಮಳೆ ಬಂದಿದ್ದರಿಂದ ಸಮಸ್ಯೆಯಾಯಿತು. ಇನ್ನೆರಡು ದಿನದಲ್ಲಿ ಎಲ್ಲ ಕಡೆ ರಸ್ತೆ ಗುಂಡಿ ಮುಚ್ಚಲಾಗುತ್ತದೆ’ ಎಂದರು.
‘ಎಲ್ಲ ನಗರ ಪಾಲಿಕೆಗಳ ಅಧಿಕಾರಿಗಳು ಆಯಾ ವ್ಯಾಪ್ತಿಯಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಎಲ್ಲ ರಸ್ತೆಗಳ ಗುಂಡಿಗಳನ್ನೂ ಮುಚ್ಚಲಾಗಿಲ್ಲ ಎಂಬುದರ ಅರಿವಿದೆ. ಅತಿಹೆಚ್ಚು ವಾಹನ ಸಂಚಾರವಿರುವ ಕೆಲವು ರಸ್ತೆಗಳಲ್ಲಿ ಸಮಸ್ಯೆ ಇದೆ. ಅವುಗಳನ್ನು ಪರಿಹರಿಸಲಾಗುತ್ತದೆ. ಗುಂಡಿ ಮುಚ್ಚಿದ ತಕ್ಷಣ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವುದರಿಂದ ಮತ್ತೆ ಗುಂಡಿಯಾಗುವ ಸಾಧ್ಯತೆ ಇದೆ’ ಎಂದು ಹೇಳಿದರು.
ಹೊಸಕೆರೆ ಹಳ್ಳಿ ಜಂಕ್ಷನ್‌ನಲ್ಲಿ ಮೇಲ್ಸೇತುವೆ ಕಾಮಗಾರಿ ಬಹುತೇಕ ಮುಗಿದಿದ್ದು, ವಾಹನ ಸಂಚಾರಕ್ಕೆ ಅತಿ ಶೀಘ್ರವೇ ಅವಕಾಶ ಮಾಡಿಕೊಡಲಾಗುತ್ತದೆ ಎಂದರು. ಜಿಬಿಎ ವ್ಯಾಪ್ತಿ ಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಶೇ 100ಕ್ಕಿಂತ ಹೆಚ್ಚಾಗಿದೆ. ಸುಮಾರು 47 ಲಕ್ಷ ಕುಟುಂಬಗಳ ಸಮೀಕ್ಷೆ ಮುಗಿದಿದೆ. ಶೇ 20ರಷ್ಟು ಸಮೀಕ್ಷಕರನ್ನು ಸಮೀಕ್ಷೆಯಿಂದ ಬಿಡು ಗಡೆ ಮಾಡಲಾಗಿದೆ. ನಗರ ಪಾಲಿಕೆ ಆಯುಕ್ತರು ಅಂತಿಮ ಕಾರ್ಯದಲ್ಲಿದ್ದು, ಸೋಮವಾರದ ವೇಳೆಗೆ ಅಂಕಿ–ಅಂಶ ನೀಡಲಿದ್ದಾರೆ ಎಂದು ತಿಳಿಸಿದರು.
ಶೀಘ್ರ ಪೂರ್ಣಗೊಳಿಸಿ: ಪಣತ್ತೂರು ಎಸ್. ಕ್ರಾಸ್ ಹಾಗೂ ಬಳಗೆರೆ ರಸ್ತೆಯಲ್ಲಿ ಬಾಕಿಯಿರುವ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿನ ವಿವಿಧ ಸ್ಥಳಗಳಲ್ಲಿ ಶುಕ್ರವಾರ ಪರಿಶೀಲನೆ ನಡೆಸಿದ ವೇಳೆ ಅವರು, ಪಣತ್ತೂರು ರಸ್ತೆಯ ಎರಡೂ ಬದಿಯ ಪಾದಚಾರಿ ಮಾರ್ಗಗಳ ಒತ್ತುವರಿಯನ್ನು ಗುರುತಿಸಿ ತೆರವುಗೊಳಿಸಬೇಕು. ಬಳಗೆರೆ ರಸ್ತೆಯ ಸುಮಾರು 700 ಮೀಟರ್ ರಸ್ತೆಗೆ ವೈಟ್ ಟಾಪಿಂಗ್ ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಭಾಗದಲ್ಲಿ ವೆಟ್ ಮಿಕ್ಸ್ ಹಾಕಲಾಗಿದೆ. ಅಲ್ಲಿ ಕೂಡಲೇ ಡಾಂಬರೀಕರಣ ಮಾಡುವಂತೆ ಸೂಚಿಸಿದರು.
ಜಿಬಿಎ ವ್ಯಾಪ್ತಿಯಲ್ಲಿ ವೈಟ್ ಟಾಪಿಂಗ್ ನಡೆಯುತ್ತಿರುವ 28 ರಸ್ತೆಗಳಲ್ಲಿ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು. ವಿಳಂಬ ಮಾಡುತ್ತಿರುವ ಗುತ್ತಿಗೆದಾರರಿಗೆ ನೋಟಿಸ್ ಜಾರಿ ಮಾಡಿ ಎಂದು ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ವೈಟ್ ಟಾಪಿಂಗ್ ಪ್ರಗತಿಯಲ್ಲಿರುವ ರಸ್ತೆಗಳಲ್ಲಿ ಜಲಮಂಡಳಿಯಿಂದ ರಸ್ತೆ ಪುನರ್ ಸ್ಥಾಪನೆ ಕಾರ್ಯ ಒಳಚರಂಡಿ ಸೋರುವಿಕೆ ಒಳಚರಂಡಿ ಚೇಂಬರ್‌ಗಳನ್ನು ಎತ್ತರಿಸುವುದು ಒಳಚರಂಡಿಯಿಂದ ಕೊಳಚೆ ನೀರು ರಸ್ತೆ ಮೇಲೆ ಹರಿಯುವುದು ಕತ್ತರಿಸಿರುವ ಭಾಗಗಳನ್ನು ದುರಸ್ತಿಪಡಿಸುವುದು ಸಂಚಾರಿ ಪೊಲೀಸ್ ವಿಭಾಗದಿಂದ ಅನುಮತಿ ಪಡೆಯುವುದು ಸೇರಿದಂತೆ ಹಲವು ಸಮಸ್ಯೆಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಿ ಕಾಮಗಾರಿ ಪ್ರಾರಂಭಿಸಲು ಹೇಳಿದರು.
ವೈಟ್ ಟಾಪಿಂಗ್ ನಡೆಯುತ್ತಿರುವ ರಸ್ತೆ ಹಾಗೂ ಹೈ-ಡೆನ್ಸಿಟಿ ಕಾರಿಡಾರ್ ರಸ್ತೆಗಳಲ್ಲಿ ಯಾವುದೇ ಗುಂಡಿಗಳು ಇರದಂತೆ ನೋಡಿಕೊಳ್ಳಬೇಕು. ಜಲಮಂಡಳಿಯಿಂದ ಕೆಲಸ ಪೂರ್ಣಗೊಂಡಿರುವ ಸ್ಥಳಗಳಲ್ಲಿ ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳಬೇಕೆಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಒಎಫ್‌ಸಿ ಸೇವಾ ಸಂಸ್ಥೆಗಳೊಂದಿಗೆ ಸಭೆ ನಡೆಸಿ ಪಾದಚಾರಿ ಮಾರ್ಗ ಹಾಗೂ ವಿದ್ಯುತ್ ಕಂಬಗಳ ಮೇಲೆ ಅನಧಿಕೃತವಾಗಿ ನೇತಾಡುತ್ತಿರುವ ಒಎಫ್‌ಸಿ ಕೇಬಲ್‌ಗಳನ್ನು ತೆರವುಗೊಳಿಸಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.