ಕೆ.ಆರ್.ಪುರ: ಇಕ್ಕಟ್ಟಾದ ರಸ್ತೆ, ಎಲ್ಲೆಂದರಲ್ಲಿ ಗುಂಡಿಗಳ ದರ್ಶನ, ಸದಾ ಜನಜಂಗುಳಿ ನಡುವೆ ತ್ರಾಸದಾಯಕ ನಡಿಗೆ, ಸಂಚಾರ ದಟ್ಟಣೆಯಿಂದ ರಸ್ತೆಯಲ್ಲಿ ನಿಲ್ಲುವ ವಾಹನಗಳು, ಪಾದಚಾರಿ ಮಾರ್ಗದಲ್ಲಿಯೇ ವ್ಯಾಪಾರ–ವಹಿವಾಟು ಮಾಡುವ ವ್ಯಾಪಾರಿಗಳು...
ಇದು ವೈಟ್‌ಫಿಲ್ಢ್ ಸಮೀಪದ ಪಟ್ಟಂದೂರು ಅಗ್ರಹಾರ-ನಲ್ಲೂರಹಳ್ಳಿ ಮುಖ್ಯರಸ್ತೆಯ ಸಮಸ್ಯೆಗಳು.
ಅಭಿವೃದ್ಧಿ ಹೆಸರಿನಲ್ಲಿ ಚೆನ್ನಾಗಿರುವ ರಸ್ತೆಗಳನ್ನು ಬೆಂಗಳೂರು ಜಲಮಂಡಳಿ ಹಾಗೂ ಪಾಲಿಕೆ ವತಿಯಿಂದ ಅಗೆದು ಹಾಗೆಯೇ ಬಿಡಲಾಗಿದೆ. ಇದರಿಂದ ಐಟಿಪಿಎಲ್, ಪಟ್ಟಂದೂರು ಅಗ್ರಹಾರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಗಳು ಗುಂಡಿಗಳಿಂದ ಕೂಡಿದ್ದು, ಸ್ಥಳೀಯ ನಿವಾಸಿಗಳು, ಟೆಕಿಗಳಿಗೆ ನಿತ್ಯ ದೂಳಿನ ಮಜ್ಜನವಾಗುತ್ತಿದೆ. ಇದರಿಂದ ಆರೋಗ್ಯ ಮೇಲೆ ಪರಿಣಾಮ ಬೀರುತ್ತಿದೆ ಎಂಬುದು ಸ್ಥಳೀಯರ ಆರೋಪ.
ಐಟಿಪಿಎಲ್ ಸುತ್ತ ಮುತ್ತಲಿನ ಪ್ರದೇಶವು ನಿತ್ಯ ಜನಸಂದಣಿಯಿಂದ ಕೂಡಿರುತ್ತದೆ. ಇಲ್ಲಿ ಸಾಫ್ಟ್‌ವೇರ್ ಕಂಪನಿಗಳು, ಆಸ್ಪತ್ರೆಗಳು, ಮಾಲ್‌ಗಳಿವೆ. ಆದರೆ ಸರಿಯಾದ ರಸ್ತೆಗಳಿಲ್ಲದ ಕಾರಣ ಸಂಚಾರವೇ ದುಸ್ತರವಾಗಿದೆ. ಗುಂಡಿಗಳೇ ತುಂಬಿರುವ ರಸ್ತೆಗಳಲ್ಲಿ ವಾಹನ ಚಲಾಯಿಸುವುದು ಸವಾಲಾಗಿದೆ ಎಂದು ಐಟಿ ಉದ್ಯೋಗಿ ನವೀನ್ ಕುಮಾರ್ ದೂರಿದರು.
ಪಟ್ಟಂದೂರು ಅಗ್ರಹಾರ ಮುಖ್ಯರಸ್ತೆಯ ಮೂಲಕ ನಲ್ಲೂರಹಳ್ಳಿ, ಸಿದ್ಧಾಪುರ, ವೈಟ್‌ಫಿಲ್ಢ್, ಹೂಡಿ, ಹೋಪ್ ಫಾರಂ ಮುಂತಾದ ಸ್ಥಳಗಳಿಗೆ ತೆರಳಬೇಕಿದೆ. ಕಳೆದ ಕೆಲ ದಿನಗಳಿಂದ ಜಲಮಂಡಳಿ ರಸ್ತೆಗಳನ್ನು ಅಗೆದು ಹಾಗೆಯೇ ಬಿಟ್ಟಿದೆ. ಇದರಿಂದ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಸಂಚಾರಕ್ಕೆ ಸಂಚಕಾರ ಬಂದಿದೆ. ಇಲ್ಲಿ ನಿತ್ಯ ಒಂದಿಲ್ಲೊಂದು ಅಪಘಾತಗಳು ಸಂಭವಿಸುತ್ತಿವೆ ಎಂದು ಪಟ್ಟಂದೂರು ಅಗ್ರಹಾರ ನಿವಾಸಿ ಎಂ. ಮಂಜುನಾಥ್ ಸಮಸ್ಯೆ ಬಿಚ್ಚಿಟ್ಟರು.
‘ರಸ್ತೆಯಲ್ಲಿ ಸಂಚಾರ ಮಾಡದ ಸ್ಥಿತಿಗೆ ತಲುಪಿದ್ದೇವೆ. ಮಳೆ ಬಂದರೆ ಪರಿಸ್ಥಿತಿ ಇನ್ನಷ್ಟು ಬಿಗಾಡಾಯಿಸುತ್ತದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ’ ಎಂದು ಪಟ್ಟಂದೂರು ಅಗ್ರಹಾರ ನಿವಾಸಿ ನಾಗರಾಜ್ ಅಸಮಾಧಾನ ವ್ಯಕ್ತಪಡಿಸಿದರು.
ಎಸ್.ಜೆ. ಆದ್, ಒರಾಕಲ್, ಇಂಟರ್‌ನ್ಯಾಷನಲ್ ಟೆಕ್ ಪಾರ್ಕ್ ಮುಂತಾದ ಸಾಫ್ಟ್‌ವೇರ್ ಕಂಪನಿಗಳಿರುವ, ಶಾಂತಿನಿಕೇತನ್ ಮಾಲ್, ಶ್ರೀಸತ್ಯಸಾಯಿ ಆಸ್ಪತ್ರೆ, ವೈದೇಹಿ ಆಸ್ಪತ್ರೆಗಳಿರುವ ಮಹದೇವಪುರ ಕ್ಷೇತ್ರಕ್ಕೆ ಗುಂಡಿ, ಕೆಸರು ತುಂಬಿರುವ ರಸ್ತೆಗಳೇ ಕಪ್ಪುಚುಕ್ಕೆಯಾಗಿವೆ. ಜನಪ್ರತಿನಿಧಿಗಳು ಮೂಲ ಸೌಕರ್ಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ ಎಂದು ಸ್ಥಳೀಯರು ದೂರಿದರು.
ಹೋರಾಟದ ಎಚ್ಚರಿಕೆ
ಪಟ್ಟಂದೂರು ಅಗ್ರಹಾರ ಮುಖ್ಯರಸ್ತೆಯಲ್ಲಿ ಕೆಲ ದಿನಗಳಿಂದ ಸಮಸ್ಯೆ ಹೆಚ್ಚಾಗಿದ್ದು ಕೂಡಲೇ ರಸ್ತೆ ಸರಿಪಡಿಸಬೇಕು. ದಸರಾ ಹಬ್ಬ ಆಚರಣೆಗೆ ರಸ್ತೆಗಳಿಂದ ತೊಡಕುಂಟಾದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ. ದಸರಾ ಹಬ್ಬದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಉತ್ಸವವು ಪಟ್ಟಂದೂರು ಅಗ್ರಹಾರ ಗ್ರಾಮದಲ್ಲಿ ಅದ್ದೂರಿಯಾಗಿ ನಡೆಯುತ್ತದೆ. ಆದ್ದರಿಂದ ಇಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಡಾಂಬರೀಕರಣ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.