
ಬಂಧನ
(ಸಾಂದರ್ಭಿಕ ಚಿತ್ರ)
ಬೆಂಗಳೂರು: ಹಳೇ ದ್ವೇಷದ ಕಾರಣಕ್ಕೆ ರೌಡಿಶೀಟರ್, ನಿವೃತ್ತ ಎಎಸ್‌ಐ ಪುತ್ರನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಆರೋಪಿಗಳನ್ನು ಬಂಡೇಪಾಳ್ಯ ಠಾಣೆ ಪೊಲೀಸರು ಬಂಧಿಸಿದಾರೆ.
ಹೊಸರೋಡ್ ನಿವಾಸಿ ಶಬ್ಬೀರ್ (29) ಕೊಲೆಯಾಗಿದ್ದ ರೌಡಿ ಶೀಟರ್. ಕೃತ್ಯವೆಸಗಿದ ಮಂಗಮ್ಮನಪಾಳ್ಯ ನಿವಾಸಿಗಳಾದ ನೂರುಲ್ಲಾ ಅಲಿಯಾಸ್ ಸೈುಲ್ಲಾ (33), ನದೀಮ್ (34), ಸಲ್ಮಾನ್ ಖಾನ್ (27), ಮೊಹಮ್ಮದ್ ಅಲಿ (29), ಸೈಯದ್ ಇಸ್ಮಾಯಿಲ್ ಅಲಿಯಾಸ್ (30),ಮೊಹಮ್ಮದ್ ಸಿದ್ದೀಕ್ (30), ಸೈಯದ್ ಕಲೀಮ್ (32) ಹಾಗೂ ಉಮ್ರೇಜ್ ರೆಹಮಾನ್ (26) ಬಂಧಿತರು.
ನಗರದ ಮಂಗಮ್ಮನಪಾಳ್ಯದ ಮುಖ್ಯರಸ್ತೆಯಲ್ಲಿ ಜನವರಿ 12ರಂದು ತಡರಾತ್ರಿ ಘಟನೆ ನಡೆದಿತ್ತು. ಮೃತ ಶಬ್ಬೀರ್ ತಂದೆ ಕೆಎಸ್‌ಆರ್‌ಪಿಯಲ್ಲಿ ಎಎಸ್‌ಐ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾಗಿದ್ದರು. ಶಬ್ಬೀರ್ ಹೊಸರೋಡ್‌ನ ಮನೆ ಸಮೀಪದಲ್ಲೇ ಗುಜರಿ ಅಂಗಡಿ ಇಟ್ಟುಕೊಂಡಿದ್ದ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಂಬಂಧಿಯೊಬ್ಬರು ಚಿಕಿತ್ಸೆಗೆ ದಾಖಲಾಗಿದ್ದರಿಂದ ಅವರನ್ನು ನೋಡಿಕೊಂಡು ತಡರಾತ್ರಿ 11 ಗಂಟೆ ಸುಮಾರಿಗೆ ಸ್ನೇಹಿತರ ಜತೆ ಆಟೊದಲ್ಲಿ ಮನೆಗೆ ಹೋಗುತ್ತಿದ್ದ. ಅದೇ ವೇಳೆ ಎಂಟು ಮಂದಿ ಗುಂಪು ಆಟೊ ನಿಲ್ಲಿಸಿ ಶಬ್ಬಿರ್ ಕಣ್ಣಿಗೆ ಕಾರದ ಪುಡಿ ಎರಚಿ, ಮಂಗಮ್ಮನಪಾಳ್ಯ ಮುಖ್ಯರಸ್ತೆಯ ಪೆಟ್ರೋಲ್ ಬಂಕ್ ಮಾರಕಾಸ್ತ್ರಗಳಿಂದ ಭೀಕರವಾಗಿ ಹಲ್ಲೆ ನಡೆಸಿ, ಹತ್ಯೆಗೈದು ಪರಾರಿಯಾಗಿತ್ತು.
ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಡಿಸಿಪಿ ಎಂ.ನಾರಾಯಣ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಆರೋಪಿಗಳನ್ನು ಮಂಗಳವಾರ ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.