ಬೆಂಗಳೂರು: ಬಟ್ಟೆ ಮಳಿಗೆಯೊಂದರಲ್ಲಿ ಸೀರೆ ಕಳವು ಮಾಡಿ ಪರಾರಿಯಾಗಿದ್ದ ಆರೋಪದ ಮೇಲೆ ಮಹಿಳೆಗೆ ಶೂ ಧರಿಸಿದ್ದ ಕಾಲಿನಿಂದ ಒದ್ದಿದ್ದ ಅಂಗಡಿ ಮಾಲೀಕ ಹಾಗೂ ಸಿಬ್ಬಂದಿಯನ್ನು ಕೆ.ಆರ್.ಮಾರುಕಟ್ಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಪೇಟೆಯ ಅವೆನ್ಯೂ ರಸ್ತೆ ಬಟ್ಟೆ ಅಂಗಡಿ ಮಾಲೀಕ ಉಮೇದ್ ರಾಮ್, ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹೇಂದ್ರ ಸೀರ್ವಿ ಬಂಧಿತರು.
ಆಂಧ್ರಪ್ರದೇಶದ ಹಂಪಮ್ಮ ಹಲ್ಲೆಗೊಳಗಾಗಿದ್ದ ಮಹಿಳೆ.
ಮಹಿಳೆಗೆ ಆರೋಪಿಯು ಬೂಟು ಕಾಲಿನಿಂದ ಒದ್ದಿದ್ದರು. ಹಲ್ಲೆ ನಡೆಸುತ್ತಿರುವ ಈ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ಹಲ್ಲೆ ನಡೆಸಿದವರನ್ನು ಬಂಧಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದರು.
ಆರೋಪಿ ಉಮೇದ್ ಕುಮಾರ್ ಚಿಕ್ಕಪೇಟೆಯ ಅವೆನ್ಯೂ ರಸ್ತೆಯಲ್ಲಿ ಬಟ್ಟೆ ಅಂಗಡಿ ಹೊಂದಿದ್ದರು. ಸೆ.21ರಂದು ಬಟ್ಟೆ ಅಂಗಡಿ ಬಳಿ ಪುತ್ರನ ಜೊತೆಗೆ ಬಂದಿದ್ದ ಹಂಪಮ್ಮ, ಅಂಗಡಿಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ ಅಂಗಡಿಯಲ್ಲಿದ್ದ 50ಕ್ಕೂ ಹೆಚ್ಚು ಸೀರೆಯಿರುವ ಬಂಡಲ್ ಸಮೇತ ಕಳವು ಮಾಡಿದ್ದರು. ಮಹಿಳೆ ಸೀರೆ ಕಳ್ಳತನ ಮಾಡುತ್ತಿರುವ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ದೃಶ್ಯಾವಳಿ ಗಮನಿಸಿದ್ದ ಅಂಗಡಿ ಮಾಲೀಕ ಹಾಗೂ ಸಿಬ್ಬಂದಿ ದೃಶ್ಯವನ್ನು ವಿವಿಧ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಕಳುಹಿಸಿದ್ದರು. ಈ ನಡುವೆ ಚಿಕ್ಕಪೇಟೆಯ ಅಂಗಡಿಯೊಂದರ ಎದುರು ಆ ಮಹಿಳೆ ಕಾಣಿಸಿಕೊಂಡಿದ್ದರು. ಇದನ್ನು ಗಮನಿಸಿದ್ದ ಸ್ಥಳೀಯರು ಉಮೇದ್‌ಗೆ ಮಾಹಿತಿ ನೀಡಿದ್ದರು. ಅಲ್ಲಿಗೆ ತೆರಳಿದ್ದ ಉಮೇದ್ ಅವರು ಮಹಿಳೆ ಎದೆಗೆ ಒದ್ದು ಹಲ್ಲೆ ಮಾಡಿದ್ದರು. ಇದಕ್ಕೆ ಅಂಗಡಿ ಸಿಬ್ಬಂದಿ ಮಹೇಂದ್ರ ಸೀರ್ವಿ ಸಾಥ್ ನೀಡಿದ್ದರು. ಬಳಿಕ, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕಳ್ಳತನ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮಹಿಳೆ ಹಂಪಮ್ಮ ಅವರನ್ನು ಬಂಧಿಸಿದ್ದರು.
ಮಹಿಳೆ ಮೇಲೆ ಹಲ್ಲೆ ಮಾಡುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಮೇಲೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಉಮೇದ್ ರಾಮ್, ಮಹೇಂದ್ರ ಸೀರ್ವಿ ಅವರನ್ನು ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.