ADVERTISEMENT

ಬೆಂಗಳೂರು ಸಮೀಪ 2ನೇ ವಿಮಾನ ನಿಲ್ದಾಣ | ಮುಂದಾಲೋಚನೆಯಿಂದ ಟೆಂಡರ್‌: ಎಂ.ಬಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 15:28 IST
Last Updated 19 ಡಿಸೆಂಬರ್ 2025, 15:28 IST
ಎಂ.ಬಿ. ಪಾಟೀಲ
ಎಂ.ಬಿ. ಪಾಟೀಲ   

ಬೆಂಗಳೂರು: ‘ರಾಜ್ಯ ರಾಜಧಾನಿಯ ಸಮೀಪ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು ‘ಬೆಂಗಳೂರು ಇಂಟರ್‌ ನ್ಯಾಷನಲ್ ಏರ್‌ಪೋರ್ಟ್‌ ಲಿಮಿಟೆಡ್’ನ (ಬಿಐಎಎಲ್) ಅನುಮತಿ ಬೇಕು ಎಂಬ ಅರಿವಿದೆ. ಅದಕ್ಕೆ 2033ರವರೆಗೂ ಕಾಲಾವಕಾಶವಿದೆ. ಹೀಗಾಗಿ ದೂರದೃಷ್ಟಿ ಇಟ್ಟುಕೊಂಡು ಈಗಿನಿಂದಲೇ ಉಳಿದ ಕೆಲಸಗಳನ್ನು ಆರಂಭಿಸಿದ್ದೇವೆ’ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.

ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕುರಿತು ಸಂಸತ್ ಅಧಿವೇಶನದಲ್ಲಿ ಪ್ರಸ್ತಾಪವಾಗಿರುವ ಹಿನ್ನೆಲೆಯಲ್ಲಿ ಅವರು ಶುಕ್ರವಾರ ಪ್ರತಿಕ್ರಿಯಿಸಿದರು.

ದೇವನಹಳ್ಳಿ ಸಮೀಪ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಇದು ಆರಂಭವಾದಾಗಲೇ 2033ರವರೆಗೂ 150 ಕಿ.ಮೀ. ಸುತ್ತಮುತ್ತಲಿನ ಪ್ರದೇಶದಲ್ಲಿ ಮತ್ತೊಂದು ವಿಮಾನ ನಿಲ್ದಾಣ ನಿರ್ಮಿಸಬಾರದೆಂಬ ಷರತ್ತು ವಿಧಿಸಲಾಗಿತ್ತು. ನವದೆಹಲಿ ಮತ್ತು ನವೀ ಮುಂಬೈಗಳಲ್ಲಿ ಇಂತಹ ಷರತ್ತುಗಳನ್ನು ಸಡಿಲಿಸಿ, ಎರಡನೇ ವಿಮಾನ ನಿಲ್ದಾಣಗಳ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದರು.

ADVERTISEMENT

ವಿಮಾನ ನಿಲ್ದಾಣ ನಿರ್ಮಾಣವಾಗಬೇಕಿದ್ದರೆ ಸ್ಥಳದ ಆಯ್ಕೆ, ಅದರ ಪರಿಶೀಲನೆ, ಭೂಸ್ವಾಧೀನ, ಪರಿಹಾರ ವಿತರಣೆ ಮುಂತಾದ ಅಂಶಗಳು ಮುಖ್ಯವಾಗುತ್ತವೆ. ಈ ಪ್ರಕ್ರಿಯೆ ಮುಗಿಯಲು ಐದಾರು ವರ್ಷಗಳು ಬೇಕಾಗುತ್ತವೆ. ಈಗ ಕರ್ನಾಟಕ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಎಸ್ಐಐಡಿಸಿ) ಮೂಲಕ ಸ್ಥಳದ ಅನುಕೂಲ, ತಾಂತ್ರಿಕ ಮತ್ತು ಆರ್ಥಿಕ ಕಾರ್ಯಸಾಧ್ಯತಾ ವರದಿಯ ಉದ್ದೇಶಕ್ಕಾಗಿ ಟೆಂಡರ್ ಕರೆಯಲಾಗಿದೆ ಎಂದು ವಿವರಿಸಿದರು.

ಕಾರ್ಯಸಾಧ್ಯತಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು 5 ತಿಂಗಳ ಕಾಲಾವಕಾಶ ನೀಡಲಾಗುವುದು. ಪ್ರಯಾಣಿಕರ ದಟ್ಟಣೆ, ಕೈಗಾರಿಕೆ ಮತ್ತು ಪ್ರವಾಸೋದ್ಯಮ ಬೆಳವಣಿಗೆಗೆ ಇರುವ ಅವಕಾಶ, ಮೂಲಸೌಕರ್ಯ, ಭೌಗೋಳಿಕ ಲಕ್ಷಣಗಳು, ಮಳೆಯ ಪ್ರಮಾಣ, ಒಳಚರಂಡಿ, ಶಬ್ದ ಮಾಲಿನ್ಯ, ತ್ಯಾಜ್ಯ ನಿರ್ವಹಣೆ ಮುಂತಾದ ಅಂಶಗಳನ್ನು ಪರಿಗಣಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.

‘ಎಎಐ ವರದಿ ಬಳಿಕವೇ ಟೆಂಡರ್‌ ಆಹ್ವಾನಿಸಲಾಗಿದೆ’
‘ಕನಕಪುರ ರಸ್ತೆಯಲ್ಲಿರುವ ಚೂಡಹಳ್ಳಿ ಮತ್ತು ಸೋಮನಹಳ್ಳಿ ಹಾಗೂ ನೆಲಮಂಗಲ-ಕುಣಿಗಲ್ ರಸ್ತೆಯಲ್ಲಿ ಇರುವ ಮತ್ತೊಂದು ಸ್ಥಳವನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ಉನ್ನತ ತಂಡ ಪರಿಶೀಲಿಸಿ ತನ್ನ ವರದಿಯನ್ನು ನಮಗೆ ನೀಡಿದೆ. ಇದಾದ ನಂತರವೇ ಈಗ ಟೆಂಡರ್ ಆಹ್ವಾನಿಸಲಾಗಿದೆ’ ಎಂದು ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.