ಬೆಂಗಳೂರು: ಪರಪ್ಪನ ಅಗ್ರಹಾರದ ಜಿ.ಎಸ್. ಪಾಳ್ಯದ ರಾಜಕಾಲುವೆ ಬಳಿ ಮಂಗಳವಾರ ಸಿಕ್ಕಿದ ತಲೆಬುರುಡೆ ಹಾಗೂ ಮೂಳೆಗಳಿಂದ ಆತಂಕ ಸೃಷ್ಟಿಯಾಗಿತ್ತು.
ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ಅಧ್ಯಯನಕ್ಕೆಂದು ಬಳಸಿದ್ದ ಬುರುಡೆ ಹಾಗೂ ಮೂಳೆಗಳವು ಎಂಬುದು ಅರಿವಾದ ಬಳಿಕ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ಜಿ.ಎಸ್. ಪಾಳ್ಯದ ರಾಜಕಾಲುವೆ ಸಮೀಪ ಮಂಗಳವಾರ ಬೆಳಿಗ್ಗೆ ಮೂಳೆಗಳು ಹಾಗೂ ಬುರುಡೆ ಕಂಡ ಸ್ಥಳೀಯರು ಪೊಲೀಸ್ ಸಹಾಯವಾಣಿ 112ಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಬುರುಡೆ ಹಾಗೂ ಮೂಳೆಗಳನ್ನು ಪರಿಶೀಲನೆ ನಡೆಸಿದರು.
ಸ್ಥಳಕ್ಕೆ ಪೊಲೀಸರು ಬಂದಿರುವುದನ್ನು ಗಮನಿಸಿದ ನಿವಾಸಿ ರಾಜಶೇಖರ್ ಅವರು ಬುರುಡೆ ರಹಸ್ಯ ಬಿಚ್ಚಿಟ್ಟರು.
ರಾಜಶೇಖರ್ ಅವರ ಪುತ್ರಿ ಎರಡನೇ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದು, ಪ್ರಾಯೋಗಿಕ ಅಧ್ಯಯನದ ಸಲುವಾಗಿ ಬುರುಡೆ ಹಾಗೂ ಮೂಳೆಗಳನ್ನು ಕಾಲೇಜಿನ ಪ್ರಯೋಗಾಲಯದಿಂದ ಮನೆಗೆ ತಂದಿದ್ದರು. ಅಧ್ಯಯನ ಮುಗಿದ ಬಳಿಕ ಮೂಳೆ ಹಾಗೂ ಬುರುಡೆಯನ್ನು ರಾಜಕಾಲುವೆ ಬಳಿ ಎಸೆಯಲಾಗಿತ್ತು. ಈ ವಿಚಾರ ತಿಳಿಯದೇ ಆತಂಕಕ್ಕೆ ಕಾರಣವಾಗಿತ್ತು.
‘ರಾಜಶೇಖರ್, ಅವರ ಪುತ್ರಿ ಹಾಗೂ ಕಾಲೇಜು ಆಡಳಿತ ಮಂಡಳಿಯವರಿಂದ ಮಾಹಿತಿ ಪಡೆಯಲಾಗಿದೆ. ಲಿಖಿತವಾಗಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಅಧ್ಯಯನ ಸಲುವಾಗಿಯೇ ಅವುಗಳನ್ನು ಕಾನೂನಾತ್ಮಕವಾಗಿ ಬಳಸುತ್ತಿದ್ದರು ಎಂಬುದು ದೃಢಪಟ್ಟಿದ್ದರಿಂದ ಯಾವುದೇ ಪ್ರಕರಣ ದಾಖಲಿಸಿಲ್ಲ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.