ADVERTISEMENT

ಬೆಂಗಳೂರು | ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆ: ಮಾಹಿತಿ ನಿರಾಕರಿಸಿದ 6 ಲಕ್ಷ ಕುಟುಂಬ

ಜಿಬಿಎ ವ್ಯಾಪ್ತಿಯಲ್ಲಿ ಶೇ 65ರ ಗಡಿ ದಾಟಿದ ಪ್ರಗತಿ

ಜಯಸಿಂಹ ಆರ್.
Published 29 ಅಕ್ಟೋಬರ್ 2025, 0:00 IST
Last Updated 29 ಅಕ್ಟೋಬರ್ 2025, 0:00 IST
<div class="paragraphs"><p>ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ </p></div>

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ

   

ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿ 6 ಲಕ್ಷಕ್ಕೂ ಹೆಚ್ಚು ಕುಟುಂಬದವರು ತಾವು ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆಗೆ ಮಾಹಿತಿ ನೀಡುವುದಿಲ್ಲ ಎಂದಿದ್ದಾರೆ. 

ADVERTISEMENT

ಜಿಬಿಎ ವ್ಯಾಪ್ತಿಯಲ್ಲಿ ಸಮೀಕ್ಷೆ ಆರಂಭವಾದ ದಿನದಿಂದಲೂ ಕೆಲವು ಕುಟುಂಬದವರು ಮಾಹಿತಿ ನೀಡಲು ನಿರಾಕರಿಸುತ್ತಿದ್ದಾರೆ ಎಂದು ವರದಿಯಾಗಿತ್ತು. ಅಂತಹವರ ಮನೆಗಳಿಗೆ ಸೃಜಿಸಲಾಗಿದ್ದ ಯುಎಚ್‌ಐಡಿಯನ್ನು ಖಾಲಿಯೇ ಬಿಡಬೇಕಿದ್ದ ಕಾರಣ, ಸಮೀಕ್ಷೆ ನಡೆಸಿದ ಮನೆಗಳ ಲೆಕ್ಕಕ್ಕೆ ಅವುಗಳನ್ನು ಸೇರಿಸುತ್ತಿರಲಿಲ್ಲ. ಪರಿಣಾಮವಾಗಿ ಸಮೀಕ್ಷಕರು ಹತ್ತಾರು ಮನೆಗಳಿಗೆ ಭೇಟಿ ನೀಡಿದ್ದರೂ, ಮಾಹಿತಿ ನೀಡಿದವರ ಮನೆಗಳ ಲೆಕ್ಕವಷ್ಟೇ ಸಿಗುತ್ತಿತ್ತು.

ಜಿಬಿಎ ವ್ಯಾಪ್ತಿಯಲ್ಲಿ ಸಮೀಕ್ಷೆಯ ಅವಧಿ ಎರಡು ಬಾರಿ ವಿಸ್ತರಣೆ ಆದರೂ, ಇದೇ ಪರಿಸ್ಥಿತಿ ಮುಂದುವರಿದಿತ್ತು. ಆದರೆ, ಮಾಹಿತಿ ನೀಡಲು ನಿರಾಕರಿಸಿದ್ದವರ ಮನೆಗೂ ಭೇಟಿ ನೀಡಿ, ಯುಎಚ್‌ಐಡಿಯನ್ನೂ ದೃಢೀಕರಿಸಿ. ಅವರು ಮಾಹಿತಿ ನೀಡಿಲ್ಲ ಎಂಬುದನ್ನು ದಾಖಲಿಸಿ ಎಂದು ಅಕ್ಟೋಬರ್ 23ರ ನಂತರ ಸಮೀಕ್ಷಕರಿಗೆ ಮತ್ತು ಅವರ ಮೇಲ್ವಿಚಾರಕರಿಗೆ ಸೂಚಿಸಲಾಗಿದೆ.

‘ಅಂತಹ ಮನೆಗಳಿಗೆ ಭೇಟಿ ನೀಡಿ, ‘ಮಾಹಿತಿ ನೀಡಲು ನಿರಾಕರಣೆ’ ಎಂದು ನಮೂದಿಸಲಾಗುತ್ತಿದೆ. ಈ ಕೆಲಸವನ್ನು ಯುದ್ಧೋಪಾದಿಯಲ್ಲಿ ನಡೆಸುವಂತೆ ಸೂಚನೆ ನೀಡಿದ್ದಾರೆ. ಯಾವ ಭಾಗದಲ್ಲಿ ಪ್ರಗತಿ ಕಡಿಮೆ ಇದೆಯೋ ಅಲ್ಲಿ, ಸಮೀಕ್ಷಕರು ಮತ್ತು ಮೇಲ್ವಿಚಾರಕರು ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೂ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ಜಿಬಿಎ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಮಾಹಿತಿ ನಿರಾಕರಿಸುತ್ತಿರುವವರನ್ನೇ ಗುರಿಯಾಗಿಸಿ, ಈಗ ಸಮೀಕ್ಷೆ ನಡೆಸಲಾಗುತ್ತಿದೆ. ಈ ಕಾರಣದಿಂದ ಐದೇ ದಿನಗಳಲ್ಲಿ ಅಂತಹ 6 ಲಕ್ಷಕ್ಕೂ ಹೆಚ್ಚು ಕುಟುಂಬಗಳ ವಿವರ ನಮೂದಿಸಲು ಸಾಧ್ಯವಾಗಿದೆ. ಇವುಗಳ ಜತೆಯಲ್ಲಿ ಸಮೀಕ್ಷೆ ನಡೆಸಲು ಸಾಧ್ಯವಿಲ್ಲದ ಮತ್ತು ಬೀಗ ಹಾಕಿದ ಮನೆಗಳ ವಿವರಗಳನ್ನೂ ನಮೂದಿಸಲಾಗುತ್ತಿದೆ. ಮಾಹಿತಿ ನಿರಾಕರಿಸಿದವರ ಸಂಖ್ಯೆಯು ಸಮೀಕ್ಷೆಯ ಅವಧಿ ಮುಗಿಯುವ ವೇಳೆಗೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ’ ಎಂದು ವಿವರಿಸಿದರು.

ನೀಡಲ್ಲ ಎಂದಿದ್ದವರು ನೀಡಿದರು

ಬೆಂಗಳೂರು ದಕ್ಷಿಣ ಭಾಗದ ಬಡಾವಣೆಯೊಂದರಲ್ಲಿನ ಅಪಾರ್ಟ್‌ಮೆಂಟ್‌ ನಿವಾಸಿಗಳ ಸಂಘದ ಅಧ್ಯಕ್ಷರು, ‘ನಮ್ಮ ಸದಸ್ಯರು ಯಾರೂ ಮಾಹಿತಿ ನೀಡಲು ಸಿದ್ಧರಿಲ್ಲ. ಸಮೀಕ್ಷೆಗೆ ಬರಬೇಡಿ’ ಎಂದು ತಾಕೀತು ಮಾಡಿದ್ದರು. ಆ ಅಪಾರ್ಟ್‌ಮೆಂಟ್‌ನಲ್ಲಿ 450 ಫ್ಲ್ಯಾಟ್‌ಗಳಿದ್ದು, ಮೂವರು ಸಮೀಕ್ಷಕರ ಪ್ರಗತಿ ಶೂನ್ಯದಷ್ಟಿತ್ತು.

ಈ ಬಗ್ಗೆ ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾಗಿತ್ತು. ಅದರ ಬೆನ್ನಲ್ಲೇ ಜಿಬಿಎಯ ಸಹಾಯಕ ಕಂದಾಯ ಅಧಿಕಾರಿಯು ಅಪಾರ್ಟ್‌ಮೆಂಟ್‌ ನಿವಾಸಿಗಳ ಸಂಘದ ಅಧ್ಯಕ್ಷರನ್ನು ಸ್ವತಃ ಭೇಟಿ ಮಾಡಿ, ಸಮೀಕ್ಷೆಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದರು. ಆದರೂ ಸಮೀಕ್ಷೆಗೆ ಅವಕಾಶ ಸಿಕ್ಕಿರಲಿಲ್ಲ.

‘ಈಗ ಮಾಹಿತಿ ನೀಡಲು ನಿರಾಕರಿಸುವವರ ವಿವರವನ್ನೂ ನಮೂದಿಸಬೇಕು ಎಂಬ ಸೂಚನೆಯ ಆಧಾರದಲ್ಲಿ ಸಮೀಕ್ಷಕರು ಅಪಾರ್ಟ್‌ಮೆಂಟ್‌ಗೆ ಪ್ರವೇಶ ಪಡೆದಿದ್ದಾರೆ. ಜತೆಗೆ 450 ಫ್ಲ್ಯಾಟ್‌ಗಳಿಗೂ ಭೇಟಿ ನೀಡಿ, ಯುಎಚ್‌ಐಡಿ ಸೃಜಿಸಿದ್ದಾರೆ. ‘ಮಾಹಿತಿ ನೀಡಲು ನಿರಾಕರಣೆ’ ಎಂದು ವಿವರ ದಾಖಲಿಸಿದ್ದಾರೆ. ಈ ವೇಳೆ ಹಲವು ಕುಟುಂಬದವರು ಸಮೀಕ್ಷೆಯಲ್ಲಿ ಭಾಗವಹಿಸಿ, ಅಗತ್ಯ ವಿವರಗಳನ್ನು ಒದಗಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.