ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಸರ್ವಜ್ಞನಗರದ ಗೋವಿಂದಪುರದಲ್ಲಿ ಶುಕ್ರವಾರ ಬೆಳಿಗ್ಗೆ ಚರಂಡಿಗೆ ಬಿದ್ದಿದ್ದ ವಿದ್ಯಾರ್ಥಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಪೋಷಕರ ಜತೆಗೆ ಒಂದನೇ ತರಗತಿಯ ವಿದ್ಯಾರ್ಥಿ ಶುಕ್ರವಾರ ಬೆಳಿಗ್ಗೆ ಶಾಲೆಗೆ ತೆರಳುತ್ತಿದ್ದ. ಪಾದಚಾರಿ ಮಾರ್ಗದಲ್ಲಿ ನಡೆದು ತೆರಳುವಾಗ ಸ್ಲ್ಯಾಬ್ ತೆರೆದು ಹಾಗೆಯೇ ಬಿಡಲಾಗಿದ್ದ ಚರಂಡಿಗೆ ವಿದ್ಯಾರ್ಥಿ ಬಿದ್ದಿದ್ದ. ಅದನ್ನು ಗಮನಿಸಿದ ಸ್ಥಳೀಯರು, ಓಡಿಬಂದು ವಿದ್ಯಾರ್ಥಿಯನ್ನು ರಕ್ಷಿಸಿ, ಅಪಾಯದಿಂದ ಪಾರು ಮಾಡಿದ್ದಾರೆ.
ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ಶಾಲೆಯ ಎದುರು ಕಾಮಗಾರಿ ನಡೆಸಲಾಗುತ್ತಿದೆ. ಅದೇ ಮಾರ್ಗದಲ್ಲಿ ನಡೆದುಕೊಂಡು ಶಾಲೆಗೆ ತೆರಳುವ ವಿದ್ಯಾರ್ಥಿಗಳು ಚರಂಡಿಗೆ ಬೀಳುತ್ತಿದ್ದಾರೆ ಎಂದು ಸ್ಥಳೀಯರು ಹೇಳಿದರು.
ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯ ತಾತಗುಣಿ ಎಂಬಲ್ಲಿ ಜಲಮಂಡಳಿಯ ಕಾವೇರಿ ಐದನೇ ಹಂತದ ಕೊಳವೆ ಮಾರ್ಗದ ಚೇಂಬರ್‌ಗೆ ಬಿದ್ದು 9ನೇ ತರಗತಿಯ ವಿದ್ಯಾರ್ಥಿಯೊಬ್ಬ ಕಳೆದ ವಾರ ಮೃತಪಟ್ಟಿದ್ದ. ಜಲಮಂಡಳಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಆ ಘಟನೆ ಸಂಭವಿಸಿತ್ತು. ಸರ್ವಜ್ಞನಗರದಲ್ಲೂ ಚರಂಡಿಯ ಸ್ಲ್ಯಾಬ್ ತೆರೆದಿದ್ದರೂ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಹಾಗೂ ಸಿಬ್ಬಂದಿ ಅದನ್ನು ಮುಚ್ಚಿಸದೇ ಹಾಗೆಯೇ ಬಿಟ್ಟಿದ್ದರಿಂದ ವಿದ್ಯಾರ್ಥಿ ಚರಂಡಿಗೆ ಬಿದ್ದಿದ್ದ. ಏನಾದರೂ ಅನಾಹುತ ಸಂಭವಿಸಿದ್ದರೆ ಯಾರು ಹೊಣೆ ಎಂದು ಸ್ಥಳೀಯರು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.