ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಸರಿಯಾದ ಬೆಂಬಲ ಸಿಗದೇ ಆಮೆಗತಿಯಲ್ಲಿ ಸಾಗುತ್ತಿದ್ದ ಬೆಂಗಳೂರು ಉಪನಗರ ಯೋಜನೆಯ (ಬಿಎಸ್‌ಆರ್‌ಪಿ) ಕಾಮಗಾರಿ ಈಗ ಸ್ಥಗಿತಗೊಂಡಿದೆ. ಕಾಮಗಾರಿ ಆರಂಭಿಸಲು ಗುತ್ತಿಗೆ ಕಂಪನಿ ಮತ್ತು ಕೆ–ರೈಡ್ ನಡುವೆ ಮಾತುಕತೆ ನಡೆಯುತ್ತಿದೆ.
ಜಮೀನು ಹಸ್ತಾಂತರ ಪ್ರಕ್ರಿಯೆಯನ್ನೇ ಸಂಪೂರ್ಣ ಮಾಡಿಲ್ಲ. ಒತ್ತುವರಿ ಮಾಡಿಕೊಂಡವರು, ಖಾಸಗಿ ಜಮೀನಿನ ಮಾಲೀಕರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಹಸ್ತಾಂತರವಾಗಿರುವ ಜಮೀನಿನಲ್ಲಷ್ಟೇ ಕೆಲಸ ಮಾಡಿ, ಮಧ್ಯೆ ಮಧ್ಯೆ ಹಾಗೇ ಬಿಡಬೇಕಿದ್ದರೆ ಕಾಮಗಾರಿ ಪೂರ್ಣಗೊಳಿಸುವುದು ಹೇಗೆ? ಕೆಲಸ ಸ್ಥಗಿತಗೊಳಿಸುವುದು ಬಿಟ್ಟು ಬೇರೆ ದಾರಿ ಇಲ್ಲ ಎಂದು ಗುತ್ತಿಗೆದಾರ ಕಂಪನಿ ‘ಎಲ್ ಆ್ಯಂಡ್ ಟಿ’ಯ ಎಂಜಿನಿಯರ್ ತಿಳಿಸಿದ್ದಾರೆ.
ಭೂ ಹಸ್ತಾಂತರ ವಿಳಂಬ ಸಹಿತ ವಿವಿಧ ಕಾರಣಗಳಿಂದ ಕಂಪನಿಗೆ ನಷ್ಟ ಉಂಟಾಗಿದ್ದು, ₹500 ಕೋಟಿ ಪರಿಹಾರ ನೀಡಬೇಕು ಎಂದು ಎಲ್ ಆ್ಯಂಡ್ ಟಿ ಕಂಪನಿಯು ಕೆ–ರೈಡ್‌ಗೆ ಪತ್ರ ಬರೆದಿದೆ. ಅಲ್ಲದೇ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಮತ್ತು ಯಂತ್ರೋಪಕರಣವನ್ನು ಅಲ್ಲಿಂದ ಸ್ಥಳಾಂತರ ಮಾಡಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ತಿಕ್ಕಾಟವು ಯೋಜನೆಯ ಪ್ರಗತಿಯ ಮೇಲೆ ಅಡ್ಡ ಪರಿಣಾಮ ಉಂಟುಮಾಡಿದೆ. ಸಮಯಕ್ಕೆ ಸರಿಯಾಗಿ ಜಮೀನು ಹಸ್ತಾಂತರ ಆಗದೇ ಇರುವುದಲ್ಲದೇ ಬೇರೆ ಬೇರೆ ಕಾರಣಗಳಿಂದಾಗಿ ಕಾಮಗಾರಿ ವಿಳಂಬವಾಗಿತ್ತು. ತಾಂತ್ರಿಕ ತಜ್ಞರು ವ್ಯವಸ್ಥಾಪಕ ನಿರ್ದೇಶಕರಾಗಬೇಕು ಎಂದು ರೈಲ್ವೆ ಬಯಸಿದರೆ, ಐಎಎಸ್ ಅಧಿಕಾರಿಗಳೇ ಇರಬೇಕು ಎನ್ನುವುದು ರಾಜ್ಯ ಸರ್ಕಾರದ ನಿರ್ಧಾರ. ಇದರಿಂದಾಗಿ ಕೆ–ರೈಡ್‌ಗೆ ಪೂರ್ಣಾವಧಿ ವ್ಯವಸ್ಥಾಪಕ ನಿರ್ದೇಶಕರು ಇಲ್ಲದಂತಾಗಿದೆ. ಕೆ–ರೈಡ್ ಮತ್ತು ನೈರುತ್ಯ ರೈಲ್ವೆ ನಡುವೆ ಸಮನ್ವಯದ ಕೊರತೆ, ತಡವಾಗುತ್ತಿರುವ ನಿರ್ಧಾರ, ಹಣಕಾಸು ಬಿಡುಗಡೆಯಲ್ಲಿ ವಿಳಂಬ ಎಲ್ಲ ಸೇರಿ ಈಗ ಕಾಮಗಾರಿ ಸ್ಥಗಿತಗೊಳ್ಳುವಂತಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಬಿಎಸ್‌ಆರ್‌ಪಿ ಯೋಜನೆ: ಉಪನಗರ ರೈಲು ಯೋಜನೆಯ ಪ್ರಸ್ತಾವ 1985ರಿಂದಲೂ ಇತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲುದಾರಿಕೆಯಲ್ಲಿ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ 2018ರಲ್ಲಿ ನಿರ್ಧರಿಸಿತ್ತು. 2020ರಲ್ಲಿ ಅನುಮೋದನೆ ನೀಡಿತ್ತು. ಕೋವಿಡ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಹೊಂದಾಣಿಕೆ ಕೊರತೆ ಕಾರಣಗಳಿಂದಾಗಿ ಮತ್ತೆರಡು ವರ್ಷ ಕಾಮಗಾರಿ ಆರಂಭವಾಗಿರಲಿಲ್ಲ.
‘40 ವರ್ಷಗಳಿಂದ ಆಗದ ಯೋಜನೆ 40 ತಿಂಗಳಲ್ಲಿ ಪೂರ್ಣಗೊಳ್ಳಲಿದೆ’ ಎಂದು 2022ರಲ್ಲಿ ಬೆಂಗಳೂರಿಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು. ಆನಂತರ ಯೋಜನೆ ವೇಗ ಪಡೆದುಕೊಂಡಿತ್ತು.
ಕಾರಿಡಾರ್–2 (ಚಿಕ್ಕಬಾಣಾವರ–ಬೈಯಪ್ಪನಹಳ್ಳಿ) 2022ರ ಡಿಸೆಂಬರ್‌ನಲ್ಲಿ ಕಾಮಗಾರಿ ಆರಂಭವಾಯಿತು. ಕಾರಿಡಾರ್–4ರ (ಕೆಂಗೇರಿ–ವೈಟ್‌ಫೀಲ್ಡ್) ಟೆಂಡರ್ ಪ್ರಕ್ರಿಯೆ 2023ರ ಡಿಸೆಂಬರ್‌ನಲ್ಲಿ ನಡೆಯಿತು. ಎರಡೂ ಕಾರಿಡಾರ್‌ಗಳನ್ನು ನಿರ್ಮಿಸಲು ಎಲ್ ಆ್ಯಂಡ್ ಟಿ ಕಂಪನಿ ಗುತ್ತಿಗೆ ಪಡೆದಿತ್ತು. ಕಾರಿಡಾರ್–1 (ಬೆಂಗಳೂರು ನಗರ– ದೇವನಹಳ್ಳಿ), ಕಾರಿಡಾರ್–3ಕ್ಕೆ (ಹೀಲಲಿಗೆ–ರಾಜಾನುಕುಂಟೆ) ಚಾಲನೆ ದೊರೆತಿಲ್ಲ. ನಡೆಯುತ್ತಿದ್ದ ಕಾಮಗಾರಿಗಳೂ ನಿಂತುಹೋಗಿವೆ.
‘ನಮಗೇನೂ ಗೊತ್ತಿಲ್ಲ. ಯಾವುದೇ ಮಾಹಿತಿ ಇಲ್ಲ’ ಎಂದು ಕೆ–ರೈಡ್ ಅಧಿಕಾರಿಗಳು ಪ್ರತಿಕ್ರಿಯಿಸುತ್ತಿದ್ದಾರೆ. ಹೆಚ್ಚುವರಿಯಾಗಿ ವ್ಯವಸ್ಥಾಪಕ ನಿರ್ದೇಶಕರಾಗಿರುವ ಎನ್. ಮಂಜುಳಾ ಅವರು ‘ಬ್ಯುಸಿ’ ಇರುವುದಾಗಿ ತಿಳಿಸಿದ್ದು, ಕಾಮಗಾರಿ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.
ನಾಲ್ಕು ಕಾರಿಡಾರ್‌ಗಳನ್ನು ಮುಗಿಸಲು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ 40 ತಿಂಗಳ ಗಡುವಿನಲ್ಲಿ 35 ತಿಂಗಳು ಮುಗಿದಿದೆ. ಐದು ತಿಂಗಳಷ್ಟೇ ಉಳಿದಿದೆ. ನಾಲ್ಕರಲ್ಲಿ ಒಂದು ಕಾರಿಡಾರ್ ಕೂಡ ಪೂರ್ಣಗೊಳ್ಳುವುದಿಲ್ಲ. 2026ರಲ್ಲಿ ಎರಡನೇ ಕಾರಿಡಾರ್‌ನಲ್ಲಿ ಚಿಕ್ಕಬಾಣಾವರದಿಂದ ಯಶವಂತಪುರದವರೆಗೆ ರೈಲು ಸಂಚರಿಸುವಂತೆ ಮಾಡುವ ಗುರಿಯನ್ನು ಕೆ–ರೈಡ್ ಇಟ್ಟುಕೊಂಡಿತ್ತು. ಅದೂ ನೆರವೇರುವ ಲಕ್ಷಣ ಕಾಣಿಸುತ್ತಿಲ್ಲ. ಸಂಸದರಾದ ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ, ಪಿ.ಸಿ. ಮೋಹನ್, ಕೆ. ಸುಧಾಕರ್, ಸಿ.ಎನ್. ಮಂಜುನಾಥ್ ಅವರ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಈ ಯೋಜನೆ ಇದೆ. ಇವರಲ್ಲಿ ಯಾರೂ ಬಿಎಸ್ಆರ್‌ಪಿಯನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಪ್ರಗತಿ
ಪರಿಶೀಲನಾ ಸಭೆ ನಡೆಸಿಲ್ಲ. ರಾಜ್ಯ ಸರ್ಕಾರವೂ ನಿರ್ಲಕ್ಷಿಸಿದೆ. ಬೆನ್ನತ್ತಿ ಕೆಲಸ ಮಾಡಿಸುವ ಜನಪ್ರತಿನಿಧಿಗಳು, ಅಧಿಕಾರಿಗಳು ಇಲ್ಲದೇ ಇರುವುದರಿಂದ ಈಗ ಕಾಮಗಾರಿಯೇ ಸ್ಥಗಿತಗೊಂಡಿದೆ.
-ರಾಜಕುಮಾರ್ ದುಗರ್, ‘ಸಿಟಿಜನ್ಸ್ ಫಾರ್ ಸಿಟಿಜನ್ಸ್’ ಸಂಸ್ಥಾಪಕ
ಪೂರ್ಣಾವಧಿ ವ್ಯವಸ್ಥಾಪಕ ನಿರ್ದೇಶಕರನ್ನು ರಾಜ್ಯ ಸರ್ಕಾರ ನೀಡಿಲ್ಲ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಇತ್ತೀಚೆಗೆ ದೂರಿದ್ದರು. ಆದರೆ, ಅವರದ್ದೇ ರೈಲ್ವೆಯಿಂದ ಜಮೀನು ಹಸ್ತಾಂತರ ವಿಳಂಬವಾಗಿದೆ.
ಒಬ್ಬರಿಗೊಬ್ಬರು ಹೊಣೆಗಾರಿಕೆಯಿಂದ ಜಾರಿಕೊಳ್ಳಲು ಆರೋಪಿಸುತ್ತಾ ಇದ್ದಾರೆಯೇ ಹೊರತು, ಹೇಗೆ ಕಾಮಗಾರಿ ಪೂರ್ಣಗೊಳಿಸುವುದು ಎಂದು ಚಿಂತನೆ ನಡೆಸುತ್ತಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಈ ಕೆಸರೆರಚಾಟದ ನಡುವೆ ಯೋಜನೆ ಅನುಷ್ಠಾನಗೊಳಿಸಬೇಕಾದ ಕೆ–ರೈಡ್ ಬಡವಾಗಿದೆ. ಈಗಿನ ಸ್ಥಿತಿ ನೋಡಿದರೆ ನನ್ನ ಜೀವಿತಾವಧಿಯಲ್ಲಿ ಉಪನಗರ ರೈಲು ಸಂಚರಿಸುವುದನ್ನು ನೋಡುವ ಅವಕಾಶ ಸಿಗುವುದು ಅನುಮಾನ.
-ಕೆ.ಎನ್. ಕೃಷ್ಣಪ್ರಸಾದ್, ರೈಲ್ವೆ ಹೋರಾಟಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.