ADVERTISEMENT

ಬೆಂಗಳೂರು: 2030ಕ್ಕೆ ಉಪನಗರ ರೈಲು ಪೂರ್ಣ

2027ರ ಅಂತ್ಯಕ್ಕೆ ಚಿಕ್ಕಬಾಣಾವರ–ಯಶವಂತಪುರ ನಡುವೆ ರೈಲು ಸಂಚಾರ

ಬಾಲಕೃಷ್ಣ ಪಿ.ಎಚ್‌
Published 23 ಜನವರಿ 2026, 23:50 IST
Last Updated 23 ಜನವರಿ 2026, 23:50 IST
ಕೆ–ರೈಡ್‌ನ ಸುದ್ದಿ ಪತ್ರ ‘ಸಂಪರ್ಕ’ವನ್ನು ಕೆ–ರೈಡ್ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ್‌ ಸಿಂಗ್‌ ಅವರು ಅಧಿಕಾರಿಗಳು ಮತ್ತು ನಾಗರಿಕ ಪಾಲುದಾರರೊಂದಿಗೆ ಬುಧವಾರ ಬಿಡುಗಡೆ ಮಾಡಿದರು
ಕೆ–ರೈಡ್‌ನ ಸುದ್ದಿ ಪತ್ರ ‘ಸಂಪರ್ಕ’ವನ್ನು ಕೆ–ರೈಡ್ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ್‌ ಸಿಂಗ್‌ ಅವರು ಅಧಿಕಾರಿಗಳು ಮತ್ತು ನಾಗರಿಕ ಪಾಲುದಾರರೊಂದಿಗೆ ಬುಧವಾರ ಬಿಡುಗಡೆ ಮಾಡಿದರು   

ಬೆಂಗಳೂರು: ಬೆಂಗಳೂರು ಉಪನಗರ ರೈಲು ಯೋಜನೆಯ (ಬಿಎಸ್‌ಆರ್‌ಪಿ) ಎಲ್ಲ ನಾಲ್ಕು ಕಾರಿಡಾರ್‌ಗಳನ್ನು 2030ಕ್ಕೆ ಪೂರ್ಣಗೊಳಿಸುವ ಹೊಸ ಗುರಿಯನ್ನು ಕೆ–ರೈಡ್‌ ಇಟ್ಟುಕೊಂಡಿದೆ. ಎರಡನೇ ಕಾರಿಡಾರ್‌ನಲ್ಲಿ ಚಿಕ್ಕಬಾಣಾವರದಿಂದ ಯಶವಂತಪುರವರೆಗೆ 2027ರ ಡಿಸೆಂಬರ್‌ ಒಳಗೆ ಮೊದಲ ರೈಲು ಸಂಚರಿಸುವ ಸಾಧ್ಯತೆ ಇದೆ.

ಪ್ರಧಾನಿ ನರೇಂದ್ರ ಮೋದಿಯವರು ಈ ಯೋಜನೆಗೆ 2022ರ ಆಗಸ್ಟ್‌ನಲ್ಲಿ ಚಾಲನೆ ನೀಡುವ ಸಮಯದಲ್ಲಿ 40 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದರು. ಈ ಗಡುವು 2025ರ ಡಿಸೆಂಬರ್‌ಗೆ ಮುಗಿದುಹೋಗಿದೆ. ಕಾಯಂ ವ್ಯವಸ್ಥಾಪಕ ನಿರ್ದೇಶಕ ಕೊರತೆ, ತಾಂತ್ರಿಕ ತಜ್ಞರಲ್ಲದವರಿಗೆ ಜವಾಬ್ದಾರಿ ನೀಡಿದ್ದು, ಗುತ್ತಿಗೆ ಪಡೆದ ಕಂಪನಿಗಳು ನಿಗದಿತ ವೇಗದಲ್ಲಿ ಕಾಮಗಾರಿ ನಡೆಸದಿರುವುದು, ಕೊನೆಗೆ ಯೋಜನೆಯಿಂದ ಹಿಂದಕ್ಕೆ ಸರಿದಿದ್ದು ಕೂಡ ತೆವಳಲು ಕಾರಣವಾಗಿತ್ತು.

ಭಾರತೀಯ ರೈಲ್ವೆ ಸೇವೆಯ ಎಂಜಿನಿಯರ್‌ (ಐಆರ್‌ಎಸ್‌ಇ) ಲಕ್ಷ್ಮಣ್ ಸಿಂಗ್ ಅವರು ಕಾಯಂ ವ್ಯವಸ್ಥಾಪಕ ನಿರ್ದೇಶಕರಾಗಿ ಬಂದ ಬಳಿಕ ನಿರೀಕ್ಷೆ ಹುಟ್ಟಿಸಿದ್ದಾರೆ. ಕಾಮಗಾರಿಗಳ ಪ್ರಗತಿ ಪರಿಶೀಲಿಸಿದ್ದಲ್ಲದೇ ಅಧಿಕಾರಿಗಳೊಂದಿಗೆ, ಸಾರ್ವಜನಿಕರೊಂದಿಗೆ ಚರ್ಚಿಸುತ್ತಿದ್ದಾರೆ ಎಂದು ಯೋಜನಾ ಆಸಕ್ತರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

ಕಾರಿಡಾರ್–2 ಚಿಕ್ಕಬಾಣಾವರ–ಬೆನ್ನಿಗಾನಹಳ್ಳಿ ಯೋಜನೆಯನ್ನು 2029ಕ್ಕೆ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಈ ಕಾರಿಡಾರ್‌ನಲ್ಲಿಯೇ ಮೊದಲ 7 ಕಿ.ಮೀ. ಮುಂದಿನ ವರ್ಷದ ಕೊನೆಗೆ ಆರಂಭಿಸುವ ಮೂಲಕ ಜನರಲ್ಲಿ ಬಿಎಸ್‌ಆರ್‌ಪಿ ಬಗ್ಗೆ ಭರವಸೆ ಮೂಡಿಸುವುದಾಗಿ ಆಸಕ್ತ ಸಾರ್ವಜನಿಕ ಸಭೆಯಲ್ಲಿ ವ್ಯವಸ್ಥಾಪಕ ನಿರ್ದೇಶಕರು ಹೇಳಿದ್ದಾರೆ. 2030ರ ವೇಳೆಗೆ ಎಲ್ಲ ಕಾರಿಡಾರ್‌ಗಳು ಪೂರ್ಣಗೊಳ್ಳುವಂತೆ ಕೆ–ರೈಡ್‌ ಕಾರ್ಯನಿರ್ವಹಿಸಲಿರುವುದಾಗಿಯೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. 

‘ಮೊದಲು ನಿಗದಿಪಡಿಸಿದ್ದ ಗಡುವಿನ ಅವಧಿಯೂ ಕಡಿಮೆ ಇತ್ತು. ಬೇರೆ ಬೇರೆ ಕಾರಣಗಳಿಂದ ಕಾಮಗಾರಿಯೂ ವಿಳಂಬವಾಗಿತ್ತು. ಸ್ವಲ್ಪ ಹೆಚ್ಚಿನ ಅವಧಿಯನ್ನು ತೆಗೆದುಕೊಂಡು ಕಾಮಗಾರಿಗಳನ್ನು ಪೂರ್ಣಗೊಳಿಸುವ ಸವಾಲು ನಮ್ಮೆದುರು ಇದೆ. ಕೆ-ರೈಡ್‌ನ ಕಾರ್ಯವು ರೈಲು ಮೂಲಸೌಕರ್ಯವನ್ನು ನಿರ್ಮಿಸುವುದಕ್ಕಷ್ಟೇ ಸೀಮಿತವಾಗಿಲ್ಲ. ಪಾರದರ್ಶಕತೆ, ಹೊಣೆಗಾರಿಕೆ ಮತ್ತು ನಾಗರಿಕರೊಂದಿಗೆ ನಿರಂತರ ಸಂಪರ್ಕದ ಮೂಲಕ ಸಾರ್ವಜನಿಕ ವಿಶ್ವಾಸವನ್ನು ಬೆಳೆಸಬೇಕಿದೆ. ದೀರ್ಘಕಾಲೀನ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಕೆ–ರೈಡ್‌ ಪ್ರಮುಖ ಪಾತ್ರ ವಹಿಸಲಿದೆ’ ಎಂದು ಲಕ್ಷ್ಮಣ್‌ ಸಿಂಗ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಸಂಪರ್ಕ’ ಬಿಡುಗಡೆ

ಯೋಜನೆಯ ಪ್ರಗತಿ ಪ್ರಮುಖ ಮೈಲುಗಲ್ಲುಗಳ ಬಗ್ಗೆ ಮಾಹಿತಿ ನೀಡುವ ಕೆ–ರೈಡ್‌ನ ಸುದ್ದಿ ಪತ್ರ ‘ಸಂಪರ್ಕ’ವು ಪ್ರಕಟವಾಗುವುದೇ ನಿಂತು ಹೋಗಿತ್ತು. ಸುಮಾರು ಒಂದು ವರ್ಷದ ಬಳಿಕ ಬುಧವಾರ ಬಿಡುಗಡೆಗೊಂಡಿದೆ. https://kride.in/samparka-newsletterನಲ್ಲಿ ಮಾಹಿತಿ ದೊರೆಯಲಿದ್ದು ಇದರ ಮುದ್ರಿತ ಪ್ರತಿಯನ್ನು ಕೆ–ರೈಡ್ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ್‌ ಸಿಂಗ್ ಬಿಡುಗಡೆ ಮಾಡಿದರು. ಕೆ-ರೈಡ್‌ ನಿರ್ದೇಶಕರಾದ ರಾಜೇಶ್ ಕುಮಾರ್ ಸಿಂಗ್ ಅವದೇಶ್ ಮೆಹ್ತಾ ವಿವಿಧ ಸಂಘಟನೆಗಳ ರಾಜಕುಮಾರ್‌ ದುಗಾರ್‌ ಕೆ.ಎನ್‌. ಕೃಷ್ಣಪ್ರಸಾದ್‌ ಪ್ರಕಾಶ್‌ ಮಂಡೋತ್‌ ಕರ್ಣಂ ರಮೇಶ್‌ ಸಂಜೀವ್‌ ದ್ಯಾಮಣ್ಣನವರ್‌ ಟಿ.ಪಿ. ಲೋಕೇಶ್‌ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಎರಡನೇ ಹಂತದ ಯೋಜನೆಗೆ ಬೇಡಿಕೆ

ಮೊದಲ ಹಂತದಲ್ಲಿ ನಾಲ್ಕು ಕಾರಿಡಾರ್‌ಗಳ ನಿರ್ಮಾಣ ಕಾರ್ಯ ವಿಳಂಬವಾಗಿದೆ. ಆದರೆ ಮೆಟ್ರೊ ಇನ್ನಿತರ ಸಾರಿಗೆ ಸಂಪರ್ಕ ಇರುವುದರಿಂದ ಅಷ್ಟಾಗಿ ಸಮಸ್ಯೆ ಕಾಡಿಲ್ಲ. ಬೆಂಗಳೂರಿಗೆ ಸಮೀಪ ಇರುವ ಕೋಲಾರ ಬಂಗಾರಪೇಟೆ ತುಮಕೂರು ಮಾಗಡಿ ಹೊಸೂರು ಗೌರಿಬಿದನೂರಿಗೆ ವಿಸ್ತರಿಸುವ ಯೋಜನೆಯನ್ನು ಈಗಲೇ ಕೈಗೆತ್ತಿಕೊಳ್ಳಬೇಕು. ಆಗ ಜನರಿಗೆ ಅನುಕೂಲ ಆಗುತ್ತದೆ. ಅಲ್ಲದೇ ವಸತಿ ಜನ ಸಂಚಾರ  ಉಪನಗರಗಳಿಗೆ ವಿಸ್ತರಣೆಗೊಳ್ಳುವುದರಿಂದ ಇಲ್ಲಿ ಸಮಸ್ಯೆ ಕಡಿಮೆಯಾಗಲಿದೆ ಎಂದು ಸಭೆಯಲ್ಲಿ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಬಿಎಸ್‌ಆರ್‌ಪಿ ಕಾರಿಡಾರ್‌ಗಳ ನಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.