ADVERTISEMENT

ಬೆಂಗಳೂರು ಉಪನಗರ ರೈಲು ಯೋಜನೆ: ವಾರದೊಳಗೆ ಸಭೆ; ವಿ.ಸೋಮಣ್ಣ

ಯಶವಂತಪುರ ಕೋಚಿಂಗ್ ಡಿಪೋ ಪರಿಶೀಲಿಸಿದ ಸಚಿವ ವಿ. ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 22:30 IST
Last Updated 30 ಅಕ್ಟೋಬರ್ 2025, 22:30 IST
ಯಶವಂತಪುರ ಕೋಚಿಂಗ್ ಡಿಪೋವನ್ನು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಗುರುವಾರ ಪರಿಶೀಲನೆ ನಡೆಸಿದ ಬಳಿಕ ಬೋಗಿ ಸ್ವಚ್ಛಗೊಳಿಸಲು ನೀರು ಹಾಯಿಸಿದರು
ಯಶವಂತಪುರ ಕೋಚಿಂಗ್ ಡಿಪೋವನ್ನು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಗುರುವಾರ ಪರಿಶೀಲನೆ ನಡೆಸಿದ ಬಳಿಕ ಬೋಗಿ ಸ್ವಚ್ಛಗೊಳಿಸಲು ನೀರು ಹಾಯಿಸಿದರು   

ಬೆಂಗಳೂರು: ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್‌ಆರ್‌ಪಿ) ಚುರುಕುಗೊಳಿಸಲಾಗುವುದು. ಬಿಎಸ್‌ಆರ್‌ಪಿ ಕಾಮಗಾರಿಗೆ ಮರು ಟೆಂಡರ್ ಕರೆಯುವ ಸಂಬಂಧ ಇನ್ನೊಂದು ವಾರದಲ್ಲಿ ಸಭೆ ಕರೆಯಲಾಗುವುದು ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.

ಯಶವಂತಪುರ ಕೋಚಿಂಗ್ ಡಿಪೊವನ್ನು ಗುರುವಾರ ಪರಿಶೀಲನೆ ನಡೆಸಿದ ಬಳಿಕ ಅವರು ಮಾತನಾಡಿದರು.

ಗುತ್ತಿಗೆದಾರರು ಹಿಂದೆ ಸರಿದಿರುವುದರಿಂದ ಬಿಎಸ್‌ಆರ್‌ಪಿ ಸದ್ಯ ಸ್ಥಗಿತಗೊಂಡಿದೆ. ಮರು ಟೆಂಡರ್‌ ಕರೆದು ಕಾಮಗಾರಿ ಮುಂದುವರಿಸಲಾಗುವುದು ಎಂದು ಹೇಳಿದರು.

ADVERTISEMENT

ಮೆಟ್ರೊವನ್ನು ಕನಕಪುರ, ತುಮಕೂರಿಗೆ ವಿಸ್ತರಣೆ ಮಾಡುವ ಯೋಜನೆಯಿದೆ. ಕೆಲವೆಡೆ ರೈಲು ಹಳಿ ದ್ವಿಪಥಗೊಳ್ಳಲಿದೆ ಎಂದರು.

ಯಶವಂತಪುರ ಕೋಚಿಂಗ್ ಡಿಪೊದಲ್ಲಿ 400ಕ್ಕೂ ಅಧಿಕ ತಾಂತ್ರಿಕ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಂದು ದಿನಕ್ಕೆ 400ಕ್ಕೂ ಅಧಿಕ ಕೋಚ್‌ಗಳನ್ನು ಸ್ವಚ್ಛತೆ ಮಾಡಲಾಗುತ್ತದೆ. ಗಾಲಿಗಳಿಂದ ಹಿಡಿದು ರೈಲಿನಲ್ಲಿನ ಪ್ರತಿಯೊಂದನ್ನೂ ಪರಿಶೀಲನೆ ಮಾಡಿ, ಸರಿಪಡಿಸಲಾಗುತ್ತದೆ. ಈ ವರ್ಷ ಇ–ತ್ಯಾಜ್ಯ ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗಿದೆ. ಇದರಿಂದ ಬರುವ ಹಣ ಸ್ವಚ್ಛತೆಗೆ ವೆಚ್ಚ ಮಾಡಲಾಗುತ್ತದೆ ಎಂದು ವಿವರಿಸಿದರು.

ದೇಶದಲ್ಲಿ ಒಟ್ಟು 65 ಸಾವಿರ ರೈಲ್ವೆ ಪೊಲೀಸರಿದ್ದಾರೆ. ಆರ್‌ಪಿಎಫ್‌ ಜೊತೆಗೆ ಸ್ಥಳೀಯ ಪೊಲೀಸರೂ ಇರುತ್ತಾರೆ. 4000 ರೈಲ್ವೆ ಪೊಲೀಸರ ಕೊರತೆ ಇದ್ದು, ನೀಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಹೊರ ವರ್ತುಲ ರೈಲು ಅಸಾಧ್ಯ

ಬೆಂಗಳೂರು ಹೊರ ವರ್ತಲ ರೈಲ್ವೆ ಯೋಜನೆ ಅನುಷ್ಠಾನಗೊಳ್ಳುವುದು ಅಸಾಧ್ಯ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು. ಯೋಜನೆಗೆ ₹65 ಸಾವಿರ ಕೋಟಿ ಆಗಬಹುದು ಎಂದು ಅಂದಾಜಿಸಲಾಗಿತ್ತು. ಪ್ರಸ್ತುತ ಭೂಸ್ವಾಧೀನ ಸೇರಿ ₹1 ಲಕ್ಷ ಕೋಟಿ ಬೇಕಾಗುತ್ತದೆ ಎಂಬ ಮಾಹಿತಿ ಬಂದಿರುವುದರಿಂದ ಯೋಜನೆ ಕಾರ್ಯಗತಗೊಳ್ಳುವುದು ಕಷ್ಟ ಎಂದು ಸ್ಪಷ್ಟಪಡಿಸಿದರು.

ಜಿದ್ದಿಗೆ ಬಿದ್ದಿದ್ದಾರೆ ಡಿಸಿಎಂ

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸುರಂಗ ರಸ್ತೆ ಮಾಡುವ ಜಿದ್ದಿಗೆ ಬಿದಿದ್ದಾರೆ. ಸಚಿವರು ಇದನ್ನು ಸ್ವ ಪ್ರತಿಷ್ಠೆಯ ವಿಷಯವಾಗಿ ತೆಗೆದುಕೊಳ್ಳದೆ ಸಾರ್ವಜನಿಕರ ಹಿತವನ್ನು ಕಾಪಾಡುವುದಕ್ಕೆ ಆದ್ಯತೆ ನೀಡಬೇಕು ಎಂದು ವಿ. ಸೋಮಣ್ಣ ಸಲಹೆ ನೀಡಿದ್ದಾರೆ. ಸುರಂಗ ಯೋಜನೆಯಿಂದ ಆಗುವ ತೊಂದರೆಗಳ ಬಗ್ಗೆಯೂ ವೈಜ್ಞಾನಿಕವಾಗಿ ಅಧ್ಯಯನ ಮಾಡಬೇಕು. ಸಂಸದ ತೇಜಸ್ವಿ ಸೂರ್ಯ ಅವರ ನೀಡಿದ ಸಲಹೆಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಬೇಕು ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.