‘ಕ್ಷಯರೋಗ ನಿರ್ಮೂಲನೆ ಗುರಿ’
ಬೆಂಗಳೂರು: ಬಿಬಿಎಂಪಿಯನ್ನು 2025ರಲ್ಲಿ ಕ್ಷಯಮುಕ್ತ ಆಗಿಸಲು ಎಲ್ಲರೂ ಶ್ರಮವಹಿಸಿ ಕಾರ್ಯನಿರ್ವಹಿಸಬೇಕು ಎಂದು ಮುಖ್ಯ ಆರೋಗ್ಯಾಧಿಕಾರಿ ಡಾ. ಸೈಯದ್ ಸಿರಾಜುದ್ದಿನ್ ಮದನಿ ಹೇಳಿದರು.
ವಿಶ್ವ ಕ್ಷಯ ರೋಗ ದಿನಾಚರಣೆ ಅಂಗವಾಗಿ ಪಾಲಿಕೆಯ ಆರೋಗ್ಯ ವಿಭಾಗದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.
‘ಕ್ಷಯ ರೋಗ (ಟಿಬಿ) ನಿರ್ಮೂಲನೆ ಆರೋಗ್ಯ ಸಿಬ್ಬಂದಿಯಿಂದ ಮಾತ್ರ ಸಾಧ್ಯವಿಲ್ಲ. ನಾಗರಿಕರು ಕೈ ಜೋಡಿಸಿದರೆ ಮಾತ್ರ ತ್ವರಿತಗತಿಯಲ್ಲಿ ಕ್ಷಯ ರೋಗವನ್ನು ನಿರ್ಮೂಲನೆ ಮಾಡಬಹುದು’ ಎಂದರು.
‘ನಾಗರಿಕರಿಗೆ ಕ್ಷಯ ರೋಗದ ಕುರಿತು ಹೆಚ್ಚು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಕ್ಷಯರೋಗ ಬಂದವರು ಔಷಧಗಳನ್ನು ಸರಿಯಾಗಿ ತೆಗೆದುಕೊಂಡರೆ ಮಾತ್ರ ನಿರ್ಮೂಲನೆ ಆಗಲು ಸಾಧ್ಯ. ಆದ್ದರಿಂದ ಕ್ಷಯ ರೋಗ ಬಂದವರು ಆರು ತಿಂಗಳು ಔಷಧಗಳನ್ನು ತಪ್ಪದೆ ಪಡೆದುಕೊಳ್ಳಬೇಕು. ಈ ಸಂಬಂಧ ನಾಗರಿಕರಲ್ಲಿ ಹೆಚ್ಚು ಅರಿವು ಮೂಡಿಸುವ ಕೆಲಸ ಮಾಡಬೇಕು’ ಎಂದು ಅವರು ಹೇಳಿದರು.
ಅರ್ಚನಾ ವಿಶೇಷ ಡಿ.ಸಿ
ಬೆಂಗಳೂರು: ಬಿಬಿಎಂಪಿ ವಲಯ ಆಯುಕ್ತೆ ಎಂ.ಎಸ್. ಅರ್ಚನಾ ಅವರನ್ನು ಬೆಂಗಳೂರು ನಗರ ಜಿಲ್ಲೆಯ (ಉತ್ತರ) ವಿಶೇಷ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ.
ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕ ಎಂ. ಕೂರ್ಮಾ ರಾವ್ ಅವರನ್ನು ಶಾಲಾ ಶಿಕ್ಷಣ ಇಲಾಖೆಯ ಬಿಸಿಯೂಟ ಯೋಜನೆಯ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಅಧ್ಯಕ್ಷ ಎಚ್. ಬಸವರಾಜೇಂದ್ರ ಅವರಿಗೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ಆಯುಕ್ತರ ಹೆಚ್ಚುವರಿ ಹೊಣೆ ನೀಡಲಾಗಿದೆ.
ಗಮಕ ಫಾಲ್ಗುಣ ಸಮಾರಂಭ
ಬೆಂಗಳೂರು: ನಗರದ ವಿದ್ಯಾಗಣಪತಿ ಗಮಕ ಶಿಕ್ಷಣಾಲಯ ವತಿಯಿಂದ ಗಮಕ ಫಾಲ್ಗುಣ ಸಮಾರಂಭವನ್ನು
ಆಯೋಜಿಸಲಾಗಿತ್ತು.
ಸಿರಿ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ವಿದ್ಯಾ ಗಣಪತಿ ಗಮಕ ಶಿಕ್ಷಣಾಲಯ ಜಂಟಿಯಾಗಿ ಕುಮಾರವ್ಯಾಸ ಮಂಟಪದಲ್ಲಿ ಆಯೋಜಿಸಿದ್ದ ಸಮಾರಂಭವನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ ಜೋಶಿ ಉದ್ಘಾಟಿಸಿದರು.
ಇದೇ ವೇಳೆ ಗಮಕ ಕಲೆಯ ಬೆಳವಣಿಗೆ ಕುರಿತು ಮಾತನಾಡಿದರು. ಶಿಕ್ಷಣಾಲಯದ ಅಧ್ಯಕ್ಷ ಎಚ್.ಎಸ್.
ಬಾಲಸುಬ್ರಹ್ಮಣ್ಯಂ ಅವರನ್ನು ಸನ್ಮಾನಿಸಲಾಯಿತು.
ಗಮಕ ವಿದ್ವಾಂಸರಾದ ಎಂ.ಆರ್.ಸತ್ಯನಾರಾಯಣ, ಜಲಜಾರಾಜು, ಸಾಹಿತಿ ಗೋವಿಂದರಾಜು, ಜೋತಿಷಿ ಎಸ್.ಅಂಬುಜಾ ಪ್ರಕಾಶ್, ಕಾರ್ಯಕ್ರಮ ಸಂಯೋಜಕಿ ಎಂ.ಭಾರತಿ ಪ್ರಕಾಶ್, ಶೈಲಜಾರಾವ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.