ADVERTISEMENT

ನವೆಂಬರ್‌ನಲ್ಲಿ ಬೆಂಗಳೂರು ಟೆಕ್‌ ಶೃಂಗಸಭೆ: ಪ್ರಿಯಾಂಕ್‌ ಖರ್ಗೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 0:21 IST
Last Updated 12 ಆಗಸ್ಟ್ 2025, 0:21 IST
ಪ್ರಿಯಾಂಕ್‌ ಖರ್ಗೆ
ಪ್ರಿಯಾಂಕ್‌ ಖರ್ಗೆ   

ಬೆಂಗಳೂರು: ಬೆಂಗಳೂರಿನ 28ನೇ ಟೆಕ್‌ ಶೃಂಗಸಭೆ ನವೆಂಬರ್‌ 18ರಿಂದ ಮೂರು ದಿನ ನಡೆಯಲಿದೆ. ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆಯು ಭವಿಷ್ಯೋದಯ ಎನ್ನುವ ಪರಿಕಲ್ಪನೆಯೊಂದಿಗೆ ಶೃಂಗಸಭೆಯನ್ನು ಮೊದಲ ಬಾರಿಗೆ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಅಯೋಜಿಸಲಿದೆ.


ಬೆಂಗಳೂರು ತಂತ್ರಜ್ಞಾನ ವಲಯದಲ್ಲಿ ರೂಪಿಸಿಕೊಂಡಿರುವ ನಾವಿನ್ಯತೆ ಹಾಗೂ ಸಹಭಾಗಿತ್ವಗಳನ್ನು ಜಗತ್ತಿನ ಪ್ರಮುಖ ದೇಶಗಳ ಎದುರು ತೆರೆದಿಡುವ ಹಾಗೂ ಮುಂದಿನ ಹೆಜ್ಜೆಗಳನ್ನು ಗಟ್ಟಿಯಾಗಿ ರೂಪಿಸುವ ಭಾಗವಾಗಿ ಟೆಕ್‌ ಶೃಂಗಸಭೆ ಆಯೋಜಿಸುತ್ತಾ ಬಂದಿದೆ. ಈ ವರ್ಷವೂ ಹೊಸ ಪರಿಕಲ್ಪನೆಗಳೊಂದಿಗೆ ಸಭೆ ನಡೆಯಲಿದೆ.


20,000ಕ್ಕೂ ಹೆಚ್ಚಿನ ಸ್ಟಾರ್ಟಪ್‌ಗಳ ಸಂಸ್ಥಾಪಕರು, 1000ಕ್ಕೂ ಅಧಿಕ ಹೂಡಿಕೆದಾರರು, 15,000 ಪ್ರತಿನಿಧಿಗಳು, 600 ಭಾಷಣಕಾರರು ಮತ್ತು 1,200 ಪ್ರದರ್ಶಕರು ಸೇರಿದಂತೆ 1,00,000ಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. 

ADVERTISEMENT

ಬಿಟಿಎಸ್ ಹಿನ್ನೆಲೆಯಲ್ಲಿ 200ಕ್ಕೂ ಅಧಿಕ ಐಟಿ ಕಂಪೆನಿಗಳ ಮುಖ್ಯಸ್ಥರು, ಸಿಇಒಗಳೊಂದಿಗೆ ಬೆಂಗಳೂರಿನಲ್ಲಿ ಸೋಮವಾರ ನಡೆದ  ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಐಟಿ, ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ, ಬೆಂಗಳೂರು ಟೆಕ್‌ ಶೃಂಗ ಸಭೆ 1998ರಿಂದ ಅರಮನೆ ಮೈದಾನದಲ್ಲಿ ನಡೆಯುತ್ತಿತ್ತು. ಹೆಚ್ಚುತ್ತಿರುವ ಬೇಡಿಕೆ ಕಾರಣದಿಂದ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರಕ್ಕೆ (ಬಿಐಇಸಿ) ಸ್ಥಳಾಂತರಿಸಲಾಗುತ್ತಿದೆ. ಇಲ್ಲಿ ವಿಶ್ವ ದರ್ಜೆಯ ಮೂಲಸೌಕರ್ಯ, ವಿಸ್ತಾರವಾದ ಪ್ರದರ್ಶನ ಸಭಾಂಗಣಗಳು, ಅತ್ಯಾಧುನಿಕ ಸಮ್ಮೇಳನ ಸೌಲಭ್ಯಗಳು ಇರಲಿವೆ. 55 ದೇಶಗಳ ಪ್ರತಿನಿಧಿಗಳು ಟೆಕ್‌ ಶೃಂಗಸಭೆಗೆ ಆಗಮಿಸಲಿದ್ದಾರೆ ಎಂದು ತಿಳಿಸಿದರು.


ಇಲಾಖೆ ಕಾರ್ಯದರ್ಶಿ ಡಾ.ಏಕರೂಪಕೌರ್‌ ಮಾತನಾಡಿ, ಕಳೆದ ವರ್ಷ ಕರ್ನಾಟಕದ ಐಟಿ- ಬಿಟಿ ವಲಯದ ವಹಿವಾಟು ಪ್ರಮಾಣ ₹4.1 ಲಕ್ಷ ಕೋಟಿ. ಶೇ 64ರಷ್ಟು ವಹಿವಾಟಿನಲ್ಲಿ ಹೆಚ್ಚಳವಾಗಿರುವುದು ವಿಶೇಷ. ಅಮೆರಿಕದಿಂದ ಶೇ 70ರಷ್ಟು ಕಂಪನಿಗಳು ಕರ್ನಾಟಕಕ್ಕೆ ಬಂದಿವೆ. ಶೇ 50ರಷ್ಟು ದೊಡ್ಡ ಕಂಪನಿಗಳು ಕರ್ನಾಟಕದಲ್ಲಿ ಹೂಡಿಕೆ ಮಾಡಿದ್ದು. ಸಾಕಷ್ಟು ಉದ್ಯೋಗವೂ ಲಭಿಸಿದೆ. ಈ ಬಾರಿಯೂ ರಕ್ಷಣೆ ಸೇರಿ ನಾಲ್ಕು ವಲಯಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.

ಬೆಂಗಳೂರು ಟೆಕ್‌ ಶೃಂಗ ಸಭೆ 2025ರಲ್ಲಿ ಸ್ಟ್ರಾರ್ಟ್‌ ಅಪ್‌ ಪ್ರಶಸ್ತಿಯನ್ನು ಈ ಬಾರಿ ನೀಡಲಾಗುತ್ತಿದೆ
ಪ್ರಿಯಾಂಕ್‌ ಖರ್ಗೆ, ಐಟಿ ಬಿಟಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.