
ಬೆಂಗಳೂರು: ನಗರದಲ್ಲಿ ನ.18ರಿಂದ ‘ಬೆಂಗಳೂರು ಟೆಕ್ ಶೃಂಗಸಭೆ’ ಆರಂಭವಾಗುತ್ತಿದೆ. ಹೀಗಾಗಿ ಕಾಂಗ್ರೆಸ್ ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು, ಪ್ರಪಂಚದ ತಂತ್ರಜ್ಞಾನ ಲೋಕದ ದಿಗ್ಗಜರು ಬೆಂಗಳೂರಿಗೆ ಬರುವ ಮುನ್ನ ಇಲ್ಲಿನ ರಸ್ತೆಗಳನ್ನು ಸರಿಪಡಿಸಲಿ ಎಂದು ಬಿಜೆಪಿ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ‘ಸಚಿವ ಪ್ರಿಯಾಂಕ್ ಖರ್ಗ ಅವರು ಆರ್‌ಎಸ್‌ಎಸ್ ಬಗ್ಗೆ ಟೀಕಿಸುವ ಹೊರತಾಗಿಯೂ ತಮಗೆ ಒಂದು ಖಾತೆಯ ಜವಾಬ್ದಾರಿ ಇದೆ ಎಂದು ಕಡೆಗೂ ನೆನಪಿಸಿಕೊಂಡಿದ್ದಕ್ಕೆ ಸಂತೋಷ. ಈಗಲಾದರೂ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದು, ಬೆಂಗಳೂರು ಟೆಕ್ ಸಮ್ಮಿಟ್ ಗೆ ಆಗಮಿಸುವ ಜಾಗತಿಕ ಪ್ರತಿನಿಧಿಗಳು ಪ್ರಯಾಣಿಸಬೇಕಾದ ಗುಂಡಿ ಬಿದ್ದ, ಹೊಂಡ ತುಂಬಿದ, ಕಸದಿಂದ ತುಂಬಿ ತುಳುಕುವ ರಸ್ತೆಗಳನ್ನು ಸರಿಪಡಿಸಲು ಮನವಿ ಮಾಡುವರೇ?. ಬೆಂಗಳೂರು ಟೆಕ್ ಶೃಂಗಸಭೆ (Bengaluru Tech Summit) ನಮ್ಮ ಬೆಂಗಳೂರು ನಗರಕ್ಕೆ ಮತ್ತೊಂದು ಜಾಗತಿಕ ಮುಜುಗರವಾಗುವುದಿಲ್ಲ ಎಂದು ಕಾಂಗ್ರೆಸ್ ಸರ್ಕಾರ ಗ್ಯಾರೆಂಟಿ ನೀಡುತ್ತದೆಯೇ?’ ಎಂದು ಕೇಳಿದ್ದಾರೆ.
‘ಕಳೆದ 2.5 ವರ್ಷಗಳಿಂದ, ಈ ನಾಲಾಯಕ್ ಕಾಂಗ್ರೆಸ್ ಸರ್ಕಾರ ಬೆಂಗಳೂರಿನ ಮೂಲಸೌಕರ್ಯವನ್ನು ಹಾಳು ಮಾಡಿದೆ, ಟ್ರಾಫಿಕ್ ಸಮಸ್ಯೆ ಉಲ್ಬಣಗೊಳಿಸಿದೆ, ಹೂಡಿಕೆದಾರರನ್ನು ಮತ್ತು ಸ್ಟಾರ್ಟ್‌ಅಪ್‌ಗಳನ್ನು ಹೆದರಿಸಿ, ಬೆದರಿಸಿ, ಅವಮಾನ ಮಾಡಿ ಬೆಂಗಳೂರಿನ ವರ್ಚಸ್ಸಿಗೆ, ಜಾಗತಿಕ ಬ್ರ್ಯಾಂಡ್‌ಗೆ ಧಕ್ಕೆ ತಂದಿದೆ’ ಎಂದು ಆರೋಪಿಸಿದ್ದಾರೆ.
‘ಕಾಂಗ್ರೆಸ್ ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು, ಬೆಂಗಳೂರು ಟೆಕ್ ಸಮ್ಮಿಟ್ ನಲ್ಲಿ ಭಾಗಿಯಾಗಲು ಪ್ರಪಂಚದ ತಂತ್ರಜ್ಞಾನ ಲೋಕದ ದಿಗ್ಗಜರು ಬೆಂಗಳೂರಿಗೆ ಬರುವ ಮುನ್ನ ಇಲ್ಲಿನ ರಸ್ತೆಗಳನ್ನು ಸರಿಪಡಿಸಿ, ನಮ್ಮ ನಗರವನ್ನು ಮತ್ತೊಂದು ಸುತ್ತಿನ ಅವಮಾನದಿಂದ ಉಳಿಸಲಿ ಎನ್ನುವುದೇ ಜನರ ನಿರೀಕ್ಷೆ’ ಎಂದು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.