ADVERTISEMENT

ಬೆಂಗಳೂರು ಕಿರುನಾಟಕೋತ್ಸವದ: ಖಾಲಿರಂಗ, ವೀಕೆಂಡ್ ಥಿಯೇಟರ್‌ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 0:42 IST
Last Updated 13 ಜುಲೈ 2025, 0:42 IST
<div class="paragraphs"><p>ಬಹುಮಾನ ವಿತರಣಾ ಸಮಾರಂಭದಲ್ಲಿ ಹನು ರಾಮಸಂಜೀವ,&nbsp;ನಂದೀಶ್ ದೇವ್,&nbsp;ಸಂಧ್ಯಾ ರಾಣಿ, ಬಿ. ಸುರೇಶ್, ಕೆ.ಎಸ್.ಡಿ.ಎಲ್. ಚಂದ್ರು, ಜಗದೀಶ್ ಜಾಲ, ಪ್ರದೀಪ್ ಚಂದ್ರ ಕುತ್ಪಾಡಿ, ಮಾಲತೇಶ್ ಬಡಿಗೇರ್ ಮತ್ತು&nbsp;ಅತ್ಯುತ್ತಮ ನಾಟಕ ಪ್ರಶಸ್ತಿ ವಿಜೇತ ತಂಡದ ಸದಸ್ಯರಿದ್ದರು</p></div>

ಬಹುಮಾನ ವಿತರಣಾ ಸಮಾರಂಭದಲ್ಲಿ ಹನು ರಾಮಸಂಜೀವ, ನಂದೀಶ್ ದೇವ್, ಸಂಧ್ಯಾ ರಾಣಿ, ಬಿ. ಸುರೇಶ್, ಕೆ.ಎಸ್.ಡಿ.ಎಲ್. ಚಂದ್ರು, ಜಗದೀಶ್ ಜಾಲ, ಪ್ರದೀಪ್ ಚಂದ್ರ ಕುತ್ಪಾಡಿ, ಮಾಲತೇಶ್ ಬಡಿಗೇರ್ ಮತ್ತು ಅತ್ಯುತ್ತಮ ನಾಟಕ ಪ್ರಶಸ್ತಿ ವಿಜೇತ ತಂಡದ ಸದಸ್ಯರಿದ್ದರು

   

ಪ್ರಜಾವಾಣಿ ಚಿತ್ರ

ಬೆಂಗಳೂರು: ಪ್ರವರ ಥಿಯೇಟರ್ ಮತ್ತು ಅಶ್ವಘೋಷ ಥಿಯೇಟರ್ ಟ್ರಸ್ಟ್ ಜಂಟಿಯಾಗಿ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಬೆಂಗಳೂರು ಕಿರುನಾಟಕೋತ್ಸವ’ದ 5ನೇ ಆವೃತ್ತಿಯ ಅಂತಿಮ ಸ್ಪರ್ಧೆಯಲ್ಲಿ ಖಾಲಿರಂಗ ತಂಡದ ‘ಈ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ’ (ತೀರ್ಪುಗಾರರ ಆಯ್ಕೆ) ಹಾಗೂ ಆನೇಕಲ್‌ನ ವೀಕೆಂಡ್ ಥಿಯೇಟರ್‌ನ ‘3/4’ (ಪ್ರೇಕ್ಷಕರ ಆಯ್ಕೆ) ಅತ್ಯುತ್ತಮ ನಾಟಕವಾಗಿ ಹೊರಹೊಮ್ಮಿದವು. 

ADVERTISEMENT

ಈ ತಂಡಗಳು ತಲಾ ₹ 10 ಸಾವಿರ ನಗದು ಹಾಗೂ ಪಾರಿತೋಷಕ ಪಡೆದವು. ನಾಟಕೋತ್ಸವವು ‘ಪ್ರಜಾವಾಣಿ’ ಮಾಧ್ಯಮ ಸಹಯೋಗದಲ್ಲಿ ನಡೆಯಿತು. ‘ಸಮಗ್ರತೆ’ ನಾಟಕೋತ್ಸವದ ವಿಷಯವಾಗಿತ್ತು. ಮೊದಲ ಹಂತದ ಸ್ಪರ್ಧೆಯಲ್ಲಿ 13 ತಂಡಗಳು ಭಾಗವಹಿಸಿದ್ದವು. ಆರು ತಂಡಗಳು ಅಂತಿಮ ಸ್ಪರ್ಧೆಯಲ್ಲಿ ಪ್ರದರ್ಶನ ನೀಡಿದವು. 

ದೃಶ್ಯಕಾವ್ಯ ತಂಡದ ‘ನೀಲಿ-ನೀರು’, ರಂಗಚಿರಂತನ ತಂಡದ ‘ಅಕ್ಕ’, ಖಾಲಿರಂಗ ತಂಡದ ‘ಈ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ’, ವೀಕೆಂಡ್ ಥಿಯೇಟರ್‌ನ ‘3/4’, ರಿ-ವ್ಯೂ ಥಿಯೇಟರ್ ಕಲೆಕ್ಟಿವ್ ತಂಡದ ‘ವಿಧುರ’ ಹಾಗೂ ಸ್ಪಷ್ಟ ಥಿಯೇಟರ್ ತಂಡದ ‘ಪಲ್ಸ್’ ನಾಟಕ ಅಂತಿಮ ಸ್ಪರ್ಧೆಯಲ್ಲಿ ಪ್ರದರ್ಶನ ನೀಡಿ, ಪ್ರೇಕ್ಷಕರನ್ನು ರಂಜಿಸಿದವು.

ರಂಗಕರ್ಮಿಗಳಾದ ಕೆ.ಎಸ್.ಡಿ.ಎಲ್. ಚಂದು, ಪ್ರದೀಪ್ ಚಂದ್ರ ಕುತ್ಪಾಡಿ ಮತ್ತು ಲೇಖಕಿ ಸಂಧ್ಯಾರಾಣಿ ಅವರು ಅಂತಿಮ ಹಂತದ ಸ್ಪರ್ಧೆಯ ತೀರ್ಪುಗಾರರಾಗಿದ್ದರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಂಗಕರ್ಮಿ ಬಿ. ಸುರೇಶ್, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾದ ಜಿಪಿಒ ಚಂದ್ರು, ಜಗದೀಶ್ ಜಾಲ ಹಾಗೂ ರಂಗಕರ್ಮಿ ಮಾಲತೇಶ್ ಬಡಿಗೇರ್ ಅವರು ಅತಿಥಿಗಳಾಗಿ ಭಾಗವಹಿಸಿ, ‍ಪ್ರದರ್ಶನಗೊಂಡ ನಾಟಕಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಂಗಳೂರು ಕಿರುನಾಟಕೋತ್ಸವದ ಕಲಾತ್ಮಕ ನಿರ್ದೇಶಕರಾದ ಹನು ರಾಮಸಂಜೀವ ಮತ್ತು ನಂದೀಶ್ ದೇವ್, ತಾಂತ್ರಿಕ ನಿರ್ದೇಶಕರಾದ ಮಂಜು ನಾರಾಯಣ್ ಉಪಸ್ಥಿತರಿದ್ದರು.

ಪ್ರಶಸ್ತಿಗಳು: ‘ಅಕ್ಕ’ ನಾಟಕಕ್ಕೆ ಬೇಲೂರು ರಘುನಂದನ್ ಅವರು ಆರ್ .ನಾಗೇಶ್ ಹೆಸರಿನಲ್ಲಿ ನೀಡುವ ‘ಅತ್ಯುತ್ತಮ ನಿರ್ದೇಶನ’ ಪ್ರಶಸ್ತಿ ಪಡೆದರು. ‘ವಿಧುರ’ ನಾಟಕದ ಪಾತ್ರಕ್ಕೆ ರಾಜ್‌ ಅವರು ಸಂಚಾರಿ ವಿಜಯ್ ಹೆಸರಿನಲ್ಲಿ ನೀಡುವ ‘ಅತ್ಯುತ್ತಮ ನಟ’ ಪ್ರಶಸ್ತಿ, ‘ನೀಲಿ–ನೀರು’ ನಾಟಕದ ಪಾತ್ರಕ್ಕೆ ರಾಣಿ ವಿಶ್ವನಾಥ್ ಅವರು ಉಮಾಶ್ರೀ ಹೆಸರಿನಲ್ಲಿ ನೀಡುವ ‘ಅತ್ಯುತ್ತಮ ನಟಿ’ ಪ್ರಶಸ್ತಿಗೆ ಭಾಜನರಾದರು. 

‘ಚನ್ನಕೇಶವ. ಜಿ’ ಅತ್ಯುತ್ತಮ ನಿರ್ವಹಣೆ ಫಲಕಕ್ಕೆ ರಂಗಚಿರಂತನ ತಂಡ, ‘ಟಿ. ಪಿ.ಕೈಲಾಸಂ’ ಅತ್ಯುತ್ತಮ ನಾಟಕ ರಚನೆಗೆ ಮದನ್ ರಂಗಭೂಮಿ, ಅತ್ಯುತ್ತಮ ನಾಟಕ ವಿನ್ಯಾಸ ಫಲಕಕ್ಕೆ ಬೇಲೂರು ರಘುನಂದನ್, ಅತ್ಯುತ್ತಮ ಭಿತ್ತಿಪತ್ರ ವಿನ್ಯಾಸ ಫಲಕಕ್ಕೆ ಗಗನ್ ಪ್ರಸಾದ್ (ಪಲ್ಸ್ ನಾಟಕ) ಹಾಗೂ ‘ಗೋಕುಲ ಸಹೃದಯ’ ಅತ್ಯುತ್ತಮ ಬಾಲ ರಂಗಪ್ರತಿಭೆ ಫಲಕಕ್ಕೆ ತೇಜು.ಡಿ (3/4 ನಾಟಕ) ಭಾಜನರಾದರು. ಈ ಪ್ರಶಸ್ತಿಗಳು ತಲಾ ₹ 2,500 ನಗದು ಒಳಗೊಂಡಿದ್ದವು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.