ಬೆಂಗಳೂರು: ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಶೇ 50ರ ರಿಯಾಯಿತಿ ಅಡಿ ದಂಡ ಪಾವತಿಸಲು ರಾಜ್ಯ ಸರ್ಕಾರವು ಅವಕಾಶ ಕಲ್ಪಿಸಿದ್ದು, ನಾಲ್ಕು ದಿನಗಳಲ್ಲಿ (ಆಗಸ್ಟ್ 23ರಿಂದ 26ರವರೆಗೆ) ಒಟ್ಟು 5,25,551 ಪ್ರಕರಣಗಳು ಇತ್ಯರ್ಥಗೊಂಡಿವೆ. ₹14.80 ಕೋಟಿ ದಂಡ ಸಂಗ್ರಹವಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು.
ಪೊಲೀಸ್ ಇಲಾಖೆಯಲ್ಲಿ ಸಂಚಾರ ಇ–ಚಲನ್‌ನಲ್ಲಿ ದಾಖಲಾದ ಪ್ರಕರಣಗಳಿಗೆ ದಂಡ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಪ್ರಕರಣಗಳಲ್ಲಿ ದಂಡ ಪಾವತಿಸಲು ರಿಯಾಯಿತಿ ನೀಡಿ ಸರ್ಕಾರವು ಆದೇಶಿಸಿತ್ತು. ಈ ಆದೇಶವು ಆ.23ರಿಂದ ಜಾರಿಗೆ ಬಂದಿದ್ದು ಸೆ.12ರ ವರೆಗೆ ರಿಯಾಯಿತಿ ಅಡಿ ದಂಡ ಪಾವತಿಸಬಹುದಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು.
ಬಿಟಿಪಿ ಅಸ್ತ್ರಂ, ಕರ್ನಾಟಕ ರಾಜ್ಯ ಪೊಲೀಸ್(ಕೆಎಸ್ಪಿ) ಆ್ಯಪ್, ಬೆಂಗಳೂರು ಸಂಚಾರ ಪೊಲೀಸ್ ಅಥವಾ ಕರ್ನಾಟಕ ಒನ್ ವೆಬ್‌ಸೈಟ್‌ನಲ್ಲಿ ವಾಹನದ ನೋಂದಣಿ ಸಂಖ್ಯೆ ನಮೂದಿಸಿ ಸಂಚಾರ ಉಲ್ಲಂಘನೆ ಪ್ರಕರಣಗಳನ್ನು ತಿಳಿದುಕೊಳ್ಳಬಹುದು. ಬಳಿಕ, ಪಾವತಿಸಲು ಇಚ್ಛಿಸುವ ದಂಡದ ಮೊತ್ತವನ್ನು ಆಯ್ಕೆ ಮಾಡಿದರೆ, ರಿಯಾಯಿತಿ ಮೊತ್ತದ ಪಾವತಿಯ ಆಯ್ಕೆ ಲಭ್ಯವಾಗುತ್ತದೆ. ನಂತರ, ದಂಡದ ಮೊತ್ತ ಪಾವತಿಸಬಹುದು ಎಂದು ಸಂಚಾರ ಪೊಲೀಸರು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.