ಪಿ. ರಾಜೇಂದ್ರ ಚೋಳನ್
ಬೆಂಗಳೂರು: ಸುಗಮ ಸಂಚಾರಕ್ಕೆ ಅನುವಾಗುವಂತೆ ಜಂಕ್ಷನ್‌ಗಳ ಸುತ್ತಮುತ್ತಲಿನ 200 ಮೀಟರ್ ರಸ್ತೆಗಳು ಸುಸ್ಥಿತಿಯಲ್ಲಿರುವಂತೆ ನಿರ್ವಹಣೆ ಮಾಡಬೇಕು ಎಂದು ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಸೂಚಿಸಿದರು.
ಪ್ರಮುಖ ಜಂಕ್ಷನ್‌ಗಳಲ್ಲಿ ಸುಗಮವಾದ ಸಂಚಾರ ಇರಬೇಕು. ಜಂಕ್ಷನ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ 200 ಮೀಟರ್ ದೂರದವರೆಗೂ ಗುಂಡಿಗಳು ಇರಬಾರದು. ಮೇಲ್ಮೈ ಪದರ ಹಾಳಾಗಿರಬಾರದು ಹಾಗೂ ಯಾವುದೇ ಅಸಮತೋಲನಗಳಿಲ್ಲದಂತೆ ನಿರ್ವಹಣೆ ಮಾಡಬೇಕು ಎಂದು ಬುಧವಾರ ಪರಿಶೀಲನೆ ಸಂದರ್ಭದಲ್ಲಿ ಅಧಿಕಾರಿಗಳಿಗೆ ಆದೇಶಿಸಿದರು.
ಮಿಲ್ಲರ್ ಟ್ಯಾಂಕ್ ಬಂಡ್ ರಸ್ತೆ ಮತ್ತು ಜಸ್ಮಾ ಭವನ ರಸ್ತೆಗಳಲ್ಲಿ ಕಾರು ನಿಲುಗಡೆ ಮಾಡಿರುವುದನ್ನು ಗಮನಿಸಿದ ರಾಜೇಂದ್ರ ಚೋಳನ್, ‘ಇಂತಹ ರಸ್ತೆಗಳ ಪಟ್ಟಿ ಮಾಡಿಕೊಳ್ಳಬೇಕು. ಪೇ ಆ್ಯಂಡ್ ಪಾರ್ಕ್ ವ್ಯವಸ್ಥೆಯನ್ನು ಜಾರಿಗೊಳಿಸಬೇಕು’ ಎಂದರು.
ಜಸ್ಮಾ ಭವನ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್‌ನ ಅಡುಗೆ ಕೋಣೆಗೆ ಭೇಟಿ ನೀಡಿ, ‘ಅಡುಗೆ ಮಾಡುವ ಕಂಟೇನರ್‌ಗಳನ್ನು ನಿತ್ಯ ಮುಚ್ಚಿಡಬೇಕು. ಶುಚಿತ್ವ ಕಾಯ್ದುಕೊಳ್ಳಬೇಕು’ ಎಂದು ಸೂಚನೆ ನೀಡಿದರು.
ತುಂಬಾ ದಿನಗಳಿಂದ ರಸ್ತೆ ಬದಿಯೇ ನಿಂತಿರುವಂತಹ ಅನಾಥ (ವಾರಸುದಾರರಿಲ್ಲದ) ವಾಹನಗಳ ಬಗ್ಗೆ ಸಂಚಾರ ವಿಭಾಗದ ಪೊಲೀಸರ ಗಮನಕ್ಕೆ ತಂದು ತೆರವುಗೊಳಿಸಬೇಕು. ಪಾದಚಾರಿ ಮಾರ್ಗವನ್ನು ಹಾನಿಗೊಳಿಸಿದವರಿಗೆ ದಂಡ ವಿಧಿಸಲು ಹೇಳಿದರು.
ಮುಖ್ಯ ಎಂಜಿನಿಯರ್ ವಿಜಯ್ ಕುಮಾರ್ ಹರಿದಾಸ್ ಉಪಸ್ಥಿತರಿದ್ದರು.
ಹೆಬ್ಬಾಳ ಮೇಲ್ಸೇತುವೆಯ ವಿಮಾನ ನಿಲ್ದಾಣ ಮಾರ್ಗದ ಡೌನ್ ರ‍್ಯಾಂಪ್ ಬಳಿ ಜಲಾವೃತವಾಗದಂತೆ ಕಾಮಗಾರಿ ನಡೆಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನಿಲ್ ಕುಮಾರ್ ಅವರು ಸೂಚಿಸಿದರು.
ದಾಸರಹಳ್ಳಿ ವ್ಯಾಪ್ತಿಯಲ್ಲಿ ಆಟೊ ಟಿಪ್ಪರ್ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ, ಸ್ವಚ್ಛತಾ ಸಿಬ್ಬಂದಿಗೆ ಶೂಗಳನ್ನು ವಿತರಿಸಿದರು.
ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ, ರಿಜಿಸ್ಟರ್ ಪುಸ್ತಕವನ್ನು ಪರಿಶೀಲಿಸಿದರು. ಆಹಾರದ ಗುಣಮಟ್ಟ ಕಾಪಾಡಿಕೊಂಡು, ಕ್ಯಾಂಟೀನ್ ಸುತ್ತಲೂ ಸ್ವಚ್ಛತೆ ಕಾಪಾಡಿಕೊಳ್ಳಲು ಸೂಚಿಸಿದರು.
ಕೆರೆ ಒತ್ತುವರಿ ತೆರವಿಗೆ ಸೂಚನೆ
ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ 46 ಕೆರೆಗಳ ಒತ್ತುವರಿಯನ್ನು ತೆರವುಗೊಳಿಸುವ ಕಾರ್ಯಾಚರಣೆ ಆರಂಭಿಸಬೇಕು ಎಂದು ಆಯುಕ್ತ ಡಿ.ಎಸ್. ರಮೇಶ್ ಸೂಚಿಸಿದರು.
‘ಬೃಹತ್ ನೀರುಗಾಲುವೆಗಳು ಎಲ್ಲೆಲ್ಲಿ ಒತ್ತುವರಿಯಾಗಿವೆ ಎಂಬುದನ್ನು ಪಟ್ಟಿ ಮಾಡಿಕೊಂಡು ಭೂಮಾಪನ ಇಲಾಖೆ ಅಧಿಕಾರಿಗಳ ಸಹಯೋಗದೊಂದಿಗೆ ಸಮೀಕ್ಷೆ, ಮಾರ್ಕಿಂಗ್ ಮಾಡಿ ಹಾಗೂ ನೋಟೀಸ್ ನೀಡಿ ಒತ್ತುವರಿ ತೆರವು ಕಾರ್ಯವನ್ನು ಪರಿಣಾಮಕಾರಿಯಾಗಿ ನಡೆಸಬೇಕು’ ಎಂದು ಹೇಳಿದರು. ಪೂರ್ವ ಪಾಲಿಕೆಯ ವ್ಯಾಪ್ತಿಯಲ್ಲಿ ತೋಟಗಾರಿಕಾ ವಿಭಾಗಕ್ಕೆ 38 ಉದ್ಯಾನಗಳು ಬರಲಿವೆ. ಜೊತೆಗೆ ರಸ್ತೆ ಮಧ್ಯಭಾಗದಲ್ಲಿ ಸಸಿಗಳನ್ನು ನೆಟ್ಟು ಪೋಷಣೆ ಮಾಡಬೇಕು ಎಂದರು. ವಲಯ ಜಂಟಿ ಆಯುಕ್ತೆ
ಡಾ. ದಾಕ್ಷಾಯಿಣಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.