ಬೆಂಗಳೂರು: ಖಾಸಗಿ ಕಂಪನಿಗಳ ವಿಮೆ ಯೋಜನೆಗಳಡಿಯೂ ವೈದ್ಯಕೀಯ ಚಿಕಿತ್ಸೆ ಸೇವೆ ಒದಗಿಸಲು ನಗರದ ಸರ್ಕಾರಿ ವೈದ್ಯಕೀಯ ಸಂಸ್ಥೆಗಳು ಮುಂದಾಗಿವೆ. ವಿಶೇಷ ವಾರ್ಡ್‌ಗಳಲ್ಲಿ 5 ರಿಂದ 7 ಹಾಸಿಗೆಗಳನ್ನು ಮೀಸಲಿಡಲು ನಿರ್ಧರಿಸಿವೆ.
‘ಆಯುಷ್ಮಾನ್ ಭಾರತ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ’, ‘ಯಶಸ್ವಿನಿ’ ಸೇರಿ ವಿವಿಧ ಯೋಜನೆಗಳಡಿ ಉಚಿತ, ರಿಯಾಯಿತಿ ದರದಲ್ಲಿ ಈ ಆಸ್ಪತ್ರೆಗಳು ಚಿಕಿತ್ಸೆ ಒದಗಿಸುತ್ತಿವೆ. ಖಾಸಗಿಗೆ ಹೋಲಿಸಿದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರಗಳು ಮೂರನೇ ಒಂದರಷ್ಟು ಇರಲಿವೆ.
ಬಿಪಿಎಲ್ ಕಾರ್ಡ್ ಹೊಂದಿರದ ಹಾಗೂ ಸರ್ಕಾರಿ ವಿಮೆ ಯೋಜನೆಗಳಿಂದ ಹೊರಗಿರುವವರು ಆರೋಗ್ಯ ರಕ್ಷಣೆಗೆ ದುಬಾರಿ ಪ್ರೀಮಿಯಂ ಪಾವತಿಸಿ, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಮೊರೆ ಹೋಗುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ದಟ್ಟಣೆ ಇರುವುದೂ ಇದಕ್ಕೆ ಕಾರಣ. ಈಗ ಸರ್ಕಾರಿ ಆಸ್ಪತ್ರೆಗಳೂ ಖಾಸಗಿ ಕಂಪನಿಗಳ ವಿಮೆ ಯೋಜನೆಗಳ ಅಳವಡಿಕೆಗೆ ಆಸಕ್ತಿ ತೋರಿದ್ದು, ವಿಮೆ ಕಂಪನಿಗಳೂ ಸರ್ಕಾರಿ ಆಸ್ಪತ್ರೆಗಳನ್ನು ಸಂಪರ್ಕಿಸಲಾರಂಭಿಸಿವೆ.
ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಪ್ಯಾಕೇಜ್ ದರ ಹೆಚ್ಚಿದ್ದು, ₹ 5 ಲಕ್ಷ ಹಾಗೂ ಅದಕ್ಕಿಂತ ಹೆಚ್ಚಿನ ಮೌಲ್ಯದ ವಿಮೆ ಯೋಜನೆ ಖರೀದಿಸಬೇಕಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಪ್ಯಾಕೇಜ್‌ಗಳ ದರ ಕಡಿಮೆ ಇದೆ. ಕಡಿಮೆ ಪ್ರೀಮಿಯಂನ ವಿಮೆ ಖರೀದಿಸಿಯೂ, ಚಿಕಿತ್ಸೆ ಪಡೆಯಬಹುದಾಗಿದೆ. ಈಗ ಇರುವ ವಿಶೇಷ ವಾರ್ಡ್‌ಗಳನ್ನೇ ಚಿಕಿತ್ಸೆಗೆ ಬಳಸಲಾಗುತ್ತದೆ.
ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯ ವಿಕ್ಟೋರಿಯಾ ಆಸ್ಪತ್ರೆ, ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ (ಪಿಎಂಎಸ್‌ಎಸ್‌ವೈ) ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ, ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ, ಸಂಜಯ ಗಾಂಧಿ ಟ್ರಾಮಾ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆ, ರಾಜೀವ್ ಗಾಂಧಿ ಎದೆರೋಗಗಳ ಸಂಸ್ಥೆ, ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ಸೇರಿ ವಿವಿಧ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಖಾಸಗಿ ವಿಮೆ ಅಳವಡಿಕೆಗೆ ಮುಂದಾಗಿವೆ.
ವಿಮಾ ಕಂಪನಿಗಳು ಪಾವತಿಸಿದ ಹಣವನ್ನು ಸೌಲಭ್ಯಗಳ ಬಲವರ್ಧನೆಗೆ ಬಳಸಲು ನಿರ್ಧರಿಸಿವೆ. ಈ ಕ್ರಮದಿಂದ ಸಂಸ್ಥೆಯ ಆರ್ಥಿಕ ಸಂಪನ್ಮೂಲವೂ ಹೆಚ್ಚಲಿದೆ.
‘ಖಾಸಗಿ ವಿಮೆಯಡಿ ಚಿಕಿತ್ಸೆ ಒದಗಿಸುವುದರಿಂದ ಆಸ್ಪತ್ರೆಯ ಆರ್ಥಿಕ ಸಂಪನ್ಮೂಲ ವೃದ್ಧಿಯಾಗಿ, ಇನ್ನಷ್ಟು ಸೌಕರ್ಯಗಳನ್ನು ಒದಗಿಸಬಹುದು. ಸದ್ಯ, ವಿಶೇಷ ವಾರ್ಡ್‌ನ ಐದು ಹಾಸಿಗೆಗಳನ್ನು ಮೀಸಲಿಡಲು ನಿರ್ಧರಿಸಿದ್ದೇವೆ’ ಎಂದು ಪಿಎಂಎಸ್‌ಎಸ್‌ವೈ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವಿಶೇಷಾಧಿಕಾರಿ ಡಾ. ದಿವ್ಯಪ್ರಕಾಶ್ ಎಂ. ತಿಳಿಸಿದರು.
ಜಯದೇವ ಹೃದ್ರೋಗ ಸಂಸ್ಥೆ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ ಗ್ಯಾಸ್ಟ್ರೋ ಎಂಟರಾಲಜಿ ಸೈನ್ಸಸ್ ಆ್ಯಂಡ್ ಆರ್ಗನ್ ಟ್ರಾನ್ಸ್‌ಪ್ಲಾಂಟ್ ಸಂಸ್ಥೆಯಲ್ಲಿ (ಐಗಾಟ್) ಖಾಸಗಿ ವಿಮೆಯಡಿ ಚಿಕಿತ್ಸೆ ನೀಡಲಾಗುತ್ತಿದೆ. ಉತ್ತಮ ಸ್ಪಂದನೆ ಸಿಕ್ಕಿರುವ ಕಾರಣ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳು ಉಳಿದ ಆಸ್ಪತ್ರೆಗಳ ಪ್ರತಿನಿಧಿಗಳ ಜತೆಗೆ ಸಭೆ ನಡೆಸಿ ಖಾಸಗಿ ವಿಮೆಯಡಿಯೂ ಚಿಕಿತ್ಸೆ ಒದಗಿಸುವಂತೆ ಸೂಚಿಸಿದ್ದಾರೆ.
‘ಈಗ ಒಂದು ಖಾಸಗಿ ವಿಮೆ ಕಂಪನಿ ಜತೆಗೆ ಚರ್ಚಿಸಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ₹ 3 ಲಕ್ಷ ತಗಲುವ ಶಸ್ತ್ರಚಿಕಿತ್ಸೆಗಳನ್ನು ₹ 80 ಸಾವಿರದಿಂದ ₹ 70 ಸಾವಿರಕ್ಕೆ ನಡೆಸಲಾಗುತ್ತಿದೆ. ವಿಮೆ ಮೌಲ್ಯ ಒಂದು ಲಕ್ಷ ರೂಪಾಯಿ ಇದ್ದರೂ ಇಲ್ಲಿ ಚಿಕಿತ್ಸೆ ಸಾಧ್ಯವಾಗಲಿದೆ. ಇದರಿಂದ ಬಡವರಿಗೆ ಚಿಕಿತ್ಸೆ ಪಡೆಯಲು ಸಮಸ್ಯೆಯಾಗದು’ ಎಂದು ಸಂಜಯ ಗಾಂಧಿ ಟ್ರಾಮ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆಯ ನಿರ್ದೇಶಕ ಡಾ. ಮದನ್ ಬಲ್ಲಾಳ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.