ಕೆ.ಆರ್.ಪುರ: ಬೃಹತ್ ಗಾತ್ರದ ಅರಳಿ ಮರವೊಂದು ಮಂಗಳವಾರ ಬೆಳಿಗ್ಗೆ ಕಲ್ಕೆರೆ ಮುಖ್ಯರಸ್ತೆ ಮತ್ತು ಸರ್ಕಾರಿ ಶಾಲೆಯ ಕಾಂಪೌಂಡ್ ಮೇಲೆ ಉರುಳಿ ಬಿದ್ದಿದೆ.
ಬೆಳಿಗ್ಗೆ 9 ಗಂಟೆ ಸುಮಾರಿಗೆ ಇದ್ದಕ್ಕಿದ್ದಂತೆ ಮರ ಉರುಳಿ ರಸ್ತೆಗೆ ಬಿತ್ತು. ಪಕ್ಕದಲ್ಲಿರುವ ಶಾಲಾ ಕಾಂಪೌಂಡ್‌ಗೆ ಹಾನಿಯಾಗಿದೆ.
ಬೆಳಿಗ್ಗೆ ಶಾಲೆ ಅರಂಭವಾದಾಗ ಮಕ್ಕಳು ಹಾಲು ಸೇವಿಸಿ ಲೋಟ ತೊಳೆಯಲು ಶಾಲೆಯ ಕಾಂಪೌಂಡ್ ಬಳಿ ಬಂದು ವಾಪಸ್ ತರಗತಿಗಳಿಗೆ ಹಿಂದಿರುಗಿದ್ದಾರೆ. ಇದಾದ ಅರೆಕ್ಷಣದಲ್ಲಿ ಮರ ಉರುಳಿ ಬಿದ್ದಿದೆ. ಅದೃಷ್ಟವಷಾತ್ ಮಕ್ಕಳಿಗೆ ಯಾವುದೇ ತೊಂದರೆಯಾಗಿಲ್ಲ.
ರಸ್ತೆಯ ಮೇಲೆ ಮರ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ವಾಹನ ಸವಾರರು ಪರ್ಯಾಯ ಮಾರ್ಗಗಳ ಮೂಲಕ ಸಂಚರಿಸಿದರು. ಬಿಬಿಎಂಪಿ ಸಿಬ್ಬಂದಿ ಯಂತ್ರಗಳ ಮೂಲಕ ಸ್ಥಳಕ್ಕೆ ಬಂದು ಮರ ಕತ್ತರಿಸಿ ತೆರವುಗೊಳಿಸುವ ಕಾರ್ಯ ಮಾಡಿದರು.
‘ಒಂದು ದೊಡ್ಡ ದುರಂತ ತಪ್ಪಿದೆ. ಬಿಬಿಎಂಪಿ ಈ ರೀತಿಯ ಅವಘಡ ಸಂಭವಿಸುವ ಮುನ್ನ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಸ್ಥಳೀಯ ಮುಖಂಡ ಕಲ್ಕೆರೆ ಶ್ರೀನಿವಾಸ್ ಆಗ್ರಹಿಸಿದರು.
ಕಾಂಪೌಂಡ್ ದುರಸ್ತಿಗೆ ಮನವಿ
ಬೃಹತ್ ಮರ ಬಿದ್ದು ನಮ್ಮ ಸರ್ಕಾರಿ ಶಾಲೆಯ ಕಾಂಪೌಂಡ್ ಶೌಚಾಲಯ ಹಾಳಾಗಿದೆ. ನೀರು ಸರಬರಾಜು ಕೊಳವೆಗಳು ವಿದ್ಯುತ್ ತಂತಿಗಳೂ ಹಾನಿಗೊಳಗಾಗಿವೆ. ಶೌಚಾಲಯ ಮತ್ತು ನೀರು ಇಲ್ಲದೆ ವಿದ್ಯಾರ್ಥಿಗಳಿಗೆ ತುಂಬಾ ಕಷ್ಟವಾಗಿದೆ. ಶಾಲೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಯವರೆಗೆ ಓಉತ್ತಿರುವ ಮಕ್ಕಳಿದ್ದಾರೆ. ಮಕ್ಕಳಿಗೆ ಸ್ವಚ್ಛತೆಗೆ ಕೈ ತೊಳೆಯವುದಕ್ಕೆ ಶೌಚಾಲಯಗಳಿಗೆ ನೀರಿಲ್ಲದಂತಾಗಿದೆ. ತುರ್ತಾಗಿ ನೀರು ಸರಬರಾಜು ಕೊಳವೆಗಳು ಮತ್ತು ಶೌಚಾಲಯಗಳನ್ನು ದುರಸ್ತಿಪಡಿಸಬೇಕಿದೆ. ದಯವಿಟ್ಟು ಯಾರಾದರೂ ಸ್ವಯಂ ಸೇವಾ ಸಂಸ್ಥೆಗಳು ಸಹಾಯ ಹಸ್ತ ನೀಡಿ ಎಂದು ಶಾಲೆಯ ಶಿಕ್ಷಕರು ಮನವಿ ಮಾಡಿದ್ದಾರೆ. ಸಂಪರ್ಕಕ್ಕೆ: ಯೋಗೇಶ್(ಶಿಕ್ಷಕರು) 95384 40986.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.