ADVERTISEMENT

ಬೆಂಗಳೂರು: ಒಂದು ಕಿ.ಮೀ. ದೂರಕ್ಕೆ ಆಟೊ ದರ ₹425!

ಆ್ಯಪ್‌ ಆಧಾರಿತ ಕಂಪನಿ ಬಗ್ಗೆ ಆಕ್ರೋಶ * ವ್ಯಂಗ್ಯವಾಗಿ ತಿವಿದ ನೆಟ್ಟಿಗರು

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2025, 15:52 IST
Last Updated 24 ಆಗಸ್ಟ್ 2025, 15:52 IST
ಆಟೊ ದರದ ಸ್ಕ್ರೀನ್‌ಶಾಟ್
ಆಟೊ ದರದ ಸ್ಕ್ರೀನ್‌ಶಾಟ್   

ಬೆಂಗಳೂರು: ಮಳೆಯ ಸಮಯದಲ್ಲಿ ಒಂದು ಕಿ.ಮೀ. ಸಂಚರಿಸಲು ‘ಉಬರ್‌’ ಆ್ಯಪ್‌ನಲ್ಲಿ ₹425 ತೋರಿಸಿದ್ದನ್ನು ‘ರೆಡಿಟ್‌’ನಲ್ಲಿ ಆರ್‌/ಬೆಂಗಳೂರು ಎಂಬ ಖಾತೆದಾರ ಹಂಚಿಕೊಂಡಿದ್ದಾರೆ. ದರ ನೋಡಿ ದಿಗ್ಭ್ರಮೆ ಉಂಟಾಯಿತು ಎಂದು ದರದ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾರೆ.

ಶುಕ್ರವಾರ ರಾತ್ರಿ ಹೊಸೂರು ರಸ್ತೆಯಲ್ಲಿ ಈ ರೀತಿ ಆಗಿದೆ. ಈ ರೀತಿ ವಿಪರೀತ ದರ ವಸೂಲಿ ಮಾಡುತ್ತಿರುವುದರ ವಿರುದ್ಧ ಅನೇಕ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರೆ, ಕೆಲವರು ಹಾಸ್ಯಮಯವಾಗಿ ತಿವಿದಿದ್ದಾರೆ.‌

‘ನನ್ನ ಸ್ನೇಹಿತ ಊರಿಗೆ ಹೊರಟಿದ್ದ. ಮಳೆ ಬರುತ್ತಿದ್ದುದರಿಂದ ಉಬರ್‌ ಆ್ಯಪ್‌ನಲ್ಲಿ ಆಟೊ ಬುಕ್‌ ಮಾಡಲು ಹೋಗಿದ್ದ. 3 ನಿಮಿಷದ ಪ್ರಯಾಣಕ್ಕೆ ₹425.11 ತೋರಿಸಿತ್ತು. ಕಾರಲ್ಲಿ ಹೋಗುವುದಿದ್ದರೆ ₹364 ತೋರಿಸುತ್ತಿತ್ತು. 1.ಕಿ.ಮೀ.ಗೆ ಇದು ದುಬಾರಿಯಾಗಿತ್ತು. ಸ್ನೇಹಿತ ಆಟೊದಲ್ಲಿ ಹೋಗುವ ಯೋಚನೆಯನ್ನೇ ಕೈಬಿಟ್ಟು, ಛತ್ರಿ ಹಿಡಿದು ನಡೆದುಕೊಂಡು ಹೋದ’ ಎಂದು ಬರೆದುಕೊಂಡಿದ್ದಾರೆ.

ADVERTISEMENT

ಬೆಂಗಳೂರಿನಲ್ಲಿ ಕ್ಯಾಬ್‌ ದರಗಳು ವಿಶ್ವದರ್ಜೆಗೇರಿವೆ. ಜರ್ಮನಿಯಲ್ಲಿ ಬೆಂಜ್ ಟ್ಯಾಕ್ಸಿಯಲ್ಲಿ ಈ ದೂರಕ್ಕೆ, ಇಷ್ಟೇ ಬೆಲೆ ಆಗುತ್ತದೆ ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. ಅಮೆರಿಕದಲ್ಲಿ ಉಬರ್‌/ಲಿಫ್ಟ್‌ ಕ್ಯಾಬ್‌ಗಳ ದರದಷ್ಟೇ ಬೆಂಗಳೂರಿನಲ್ಲಿ ಇರುವುದು ತಮಾಷೆಯಾಗಿದೆ ಎಂದು ಇನ್ನೊಬ್ಬರು ಹೇಳಿದ್ದರೆ, ಆಟೊ ಖರೀದಿಸಲು ಇಲ್ಲವೇ ಛತ್ರಿ ಖರೀದಿಸಲು ಇದು ಸಕಾಲ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಹತ್ತಿರ ಇದ್ದರೆ ನಡೆದುಕೊಂಡು ಹೋಗಬೇಕು ಎಂದು ಒಬ್ಬರು ಸಲಹೆ ನೀಡಿದ್ದಾರೆ. ಲಗೇಜು ಇದ್ದಿದ್ದರಿಂದ ಆಟೊ ಬುಕ್ ಮಾಡಲು ಹೋಗಿದ್ದು, ಇಲ್ಲದೇ ಇದ್ದರೆ ನಡೆಯುವುದೇ ನಮ್ಮ ಆಯ್ಕೆ ಎಂದು ಅದಕ್ಕೆ ಆರ್‌/ಬೆಂಗಳೂರು ಪ್ರತಿಕ್ರಿಯೆ ನೀಡಿದ್ದಾರೆ.

‘ಅವರು ಛತ್ರಿ ತೆಗೆದುಕೊಂಡು ಏಕೆ ನಡೆಯಲಿಲ್ಲ ಎಂದು ನಾನು ಹೇಳಲು ಹೊರಟಿದ್ದೆ. ರಸ್ತೆಗಳು ಮತ್ತು ಮೂಲಸೌಕರ್ಯಗಳು ಕೆಟ್ಟದಾಗಿವೆ ಎಂದು ನನಗೆ ತಿಳಿದಿದೆ, ಆದರೆ ನಾವು ಕಡಿಮೆ ದೂರ ನಡೆಯಲು ಅಥವಾ ಸೈಕ್ಲಿಂಗ್ ಮಾಡಲು ಪ್ರಾರಂಭಿಸುವ ಸಮಯ ಇದು’ ಎಂದು ಒಬ್ಬರು ಸಲಹೆ ನೀಡಿದ್ದಾರೆ.

ಉಬರ್‌ಗಿಂತ ಬೇರೆ ಅಗ್ರಿಗೇಟರ್‌ ಕಂಪನಿಗಳ ಆ್ಯಪ್‌ನಲ್ಲಿ ದರ ಕಡಿಮೆ ಇದೆ ಎಂಬ ಬಗ್ಗೆಯೂ ಗಮನ ಸೆಳೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.