ADVERTISEMENT

ಹೋರಾಟದ ಹಕ್ಕು ಕಸಿಯುವ ಪ್ರಯತ್ನ: ಆಕಾರ್‌ ಪಟೇಲ್‌

‘ಸಮಕಾಲೀನ ಭಾರತದಲ್ಲಿ ವಾಕ್‌ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ’ ಕುರಿತು ಸಂವಾದದಲ್ಲಿ ಆಕಾರ್‌ ಪಟೇಲ್‌ ಕಳವಳ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2023, 14:46 IST
Last Updated 8 ಡಿಸೆಂಬರ್ 2023, 14:46 IST
<div class="paragraphs"><p>ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂವಾದದಲ್ಲಿ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾದ ಮಂಡಳಿ ವಕ್ತಾರ ಆಕಾರ್ ಪಟೇಲ್ (ಎಡದಿಂದ ಮೂರನೆಯವರು) ಅವರನ್ನು ವಿಶ್ವವಿದ್ಯಾಲಯದ ಕುಲಪತಿ ಲಿಂಗರಾಜ ಗಾಂಧಿ ಸ್ವಾಗತಿಸಿದರು.</p></div>

ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂವಾದದಲ್ಲಿ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾದ ಮಂಡಳಿ ವಕ್ತಾರ ಆಕಾರ್ ಪಟೇಲ್ (ಎಡದಿಂದ ಮೂರನೆಯವರು) ಅವರನ್ನು ವಿಶ್ವವಿದ್ಯಾಲಯದ ಕುಲಪತಿ ಲಿಂಗರಾಜ ಗಾಂಧಿ ಸ್ವಾಗತಿಸಿದರು.

   

ಬೆಂಗಳೂರು: ‘ನಾಗರಿಕರ ಹೋರಾಟದ ಹಕ್ಕುಗಳನ್ನು ದೇಶದಲ್ಲಿ ಪಕ್ಷಾತೀತವಾಗಿ ಕಸಿದುಕೊಳ್ಳಲಾಗುತ್ತಿದೆ. ಹೋರಾಟಗಳ ಮೇಲೆ ವಿಧಿಸಿರುವ ನಿರ್ಬಂಧ ತೆರವು ಮಾಡಬೇಕು’ ಎಂದು ಆಮ್ನೆಸ್ಟಿ ಇಂಟರ್‌ ನ್ಯಾಷನಲ್ ವಕ್ತಾರ ಆಕಾರ್ ಪಟೇಲ್ ಆಗ್ರಹಿಸಿದರು.

ಬೆಂಗಳೂರು ನಗರ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ,ಇತಿಹಾಸ ಹಾಗೂ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗ ಆಯೋಜಿಸಿದ್ದ ‘ಸಮಕಾಲೀನ ಭಾರತದಲ್ಲಿ ವಾಕ್‌ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ’ ಕುರಿತು ಅವರು ಮಾತನಾಡಿದರು.

ADVERTISEMENT

‘ಉತ್ತರ ಅಮೆರಿಕ ಸೇರಿದಂತೆ ಹಲವು ದೇಶದಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರು ಸಂಘಟನೆ ರಚಿಸಿಕೊಳ್ಳಬಹುದು. ಒಂದೆಡೆ ಸೇರಿಕೊಂಡು ಬೇಕುಬೇಡಗಳ ಕುರಿತು ಚರ್ಚಿಸಬಹುದು. ಆದರೆ, ಭಾರತದಲ್ಲಿ ಆ ಸ್ವಾತಂತ್ರ್ಯ ಇಲ್ಲ. ಅದರಲ್ಲೂ ಬೆಂಗಳೂರಿನಲ್ಲಿ ರ್‍ಯಾಲಿ, ಪ್ರತಿಭಟನೆ ನಡೆಸುವುದಕ್ಕೆ ಪೊಲೀಸರ ಅನುಮತಿ ಬೇಕಿದೆ. ನಮ್ಮ ಪ್ರತಿಭಟನಾ ಹಕ್ಕನ್ನು ಪೊಲೀಸರೇ ನಿರ್ಧರಿಸುತ್ತಿದ್ದಾರೆ. ಬಹುತೇಕ ಸಂದರ್ಭದಲ್ಲಿ ಅವರು ಪ್ರತಿಭಟನೆಗೆ ಅವಕಾಶವನ್ನೇ ನೀಡುತ್ತಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.

‘ಅಪಾರ ಸಂಖ್ಯೆಯಲ್ಲಿ ಜನರು ರಸ್ತೆಗಿಳಿದು ಹೋರಾಟ ನಡೆಸಿದರೆ ದೊಡ್ಡ ಬದಲಾವಣೆ ಕಾಣಲು ಸಾಧ್ಯವಿದೆ. ಮಹಾತ್ಮ ಗಾಂಧಿ ಅವರ ನೇತೃತ್ವದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಹೋರಾಡಿದ್ದರ ಪ್ರತಿಫಲವಾಗಿಯೇ ಸ್ವಾತಂತ್ರ್ಯ ಲಭಿಸಿತು. ಹರಿಯಾಣ, ಪಂಜಾಬ್‌ ರೈತರು ಯಾವುದೇ ಅನುಮತಿ ಪಡೆಯದೆ ಹೋರಾಟ ನಡೆಸಿದ್ದರು. ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ ಕೃಷಿಕರಿಗೆ ಮಾರಕವಾಗಿದ್ದ ಕಾಯ್ದೆಗಳನ್ನು ವಾಪಸ್‌ ಪಡೆದಿತ್ತು. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ, ದೇಶದಾದ್ಯಂತ ಮುಸ್ಲಿಮರು ದೊಡ್ಡ ಸಂಖ್ಯೆಯಲ್ಲಿ ಪ್ರತಿಭಟಿಸಿದ್ದರು. ಆಗಲೂ ಸರ್ಕಾರ ಮಣಿಯಿತು. ಹೋರಾಟಕ್ಕೆ ಆ ತಾಕತ್ತಿದೆ’ ಎಂದು ಹೇಳಿದರು.

‘ಸರ್ಕಾರ ಅಥವಾ ಒಂದು ಗುಂಪು ಜನರ ಸ್ವಾತಂತ್ರ್ಯ ಕಸಿದುಕೊಳ್ಳುತ್ತಲೇ ಇದೆ. ಸಾಮಾಜಿಕ ಕಳಕಳಿಯಿಂದ ಮಾತನಾಡಿದರೆ ಹೋರಾಟಗಾರರ ಮನೆ ಎದುರಿಗೆ ಬಂದು ಬೆದರಿಕೆ ಹಾಕಲಾಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಬ್ರಿಟಿಷರ ಕಾಲದ ಕಾನೂನುಗಳು ಮತ್ತು ಪೋಲೀಸ್ ಬಲವನ್ನು ಬಳಸಿ ಭಿನ್ನಮತವನ್ನು ಹತ್ತಿಕ್ಕುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಂಚಕಾರ ತಂದೊಡ್ಡಲಾಗಿದೆ. ಬಡತನ, ನಿರುದ್ಯೋಗ, ಅಸಮಾನತೆ ಹಾಗೂ ಭಯದ ವಾತಾವರಣವನ್ನು ಹಿಮ್ಮೆಟ್ಟಿಸಿ ಭಾರತದ ಪ್ರಜಾಪ್ರಭುತ್ವವನ್ನು ಅರ್ಥಪೂರ್ಣಗೊಳಿಸಲು ನಾಗರಿಕ ಸಮಾಜ, ಪ್ರತಿಪಕ್ಷಗಳು ಹಾಗೂ ನ್ಯಾಯಾಂಗ ಪ್ರಯತ್ನಿಸಬೇಕು’ ಎಂದು ಕರೆ ನೀಡಿದರು.

‘ಹಲವು ರಾಜ್ಯಗಳಲ್ಲಿ ಗೋಮಾಂಸ, ಹಿಜಾಬ್‌, ತಲಾಖ್‌ ವಿಚಾರದಲ್ಲಿ ಒಂದು ಧರ್ಮದ ಜನರನ್ನು ಗುರಿಯಾಗಿಸಿ ದೌರ್ಜನ್ಯ ಎಸಗಲಾಗುತ್ತಿದೆ. ಗುಜರಾತ್‌ನಲ್ಲಿ ವಿದೇಶಿಯರು ಬೇಕಾದರೆ ಆಸ್ತಿ ಖರೀದಿಸಲು ಸಾಧ್ಯವಿದೆ. ಅದೇ ಗುಜರಾತ್‌ ಮುಸ್ಲಿಮರಿಗೆ ಅ ಅವಕಾಶವಿಲ್ಲ. ಇದು ಯಾವ ನಿಯಮ’ ಎಂದು ಪ್ರಶ್ನಿಸಿದರು.

ಕಾರ್ಯಕ್ರಮದಲ್ಲಿ ವಿ.ವಿ ಕುಲಪತಿ ಲಿಂಗರಾಜ ಗಾಂಧಿ, ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ.ಎನ್‌.ನರಸಿಂಹಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.