ದಾಬಸ್‌ಪೇಟೆ: ಬೇಸಿಗೆಯ ಬಿಸಿ ಏರುತ್ತಿದ್ದಂತೆಯೇ ಸೋಂಪುರ ಹೋಬಳಿಯಾದ್ಯಂತ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಬವಣೆ ಬಿಗಡಾಯಿಸಿದೆ. ಪ್ರತಿದಿನವೂ ಕುಡಿಯುವ ನೀರಿಗಾಗಿ ಕಾಯಬೇಕಾದ ದುಸ್ಥಿತಿ ಎದುರಾಗಿದೆ.
ಮೂರ‍್ನಾಲ್ಕು ದಿನಗಳಿಗೊಮ್ಮೆ ಬಿಡುವ ನೀರಿಗಾಗಿ ಹಗಲಿರುಳು ಕಾಯಬೇಕಾದ ಹಾಗೂ ಕೊಳಾಯಿ ನೀರಿಗೆ ಚರಂಡಿ ನೀರು ಸೇರುತ್ತಿದ್ದರೂ ಅದನ್ನೇ ಸೇವಿಸಬೇಕಾದ ದುಸ್ಥಿತಿ ಇಲ್ಲಿದೆ.ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ್ದರೂ ಅದು ಕೆಟ್ಟು ನಿಂತಿದೆ.
ದಾಬಸ್‌ಪೇಟೆ ಪಟ್ಟಣ ಸೇರಿದಂತೆ ಸುತ್ತಲಿನ ಹಲವು ಗ್ರಾಮಗಳಲ್ಲಿ ಸಾರ್ವಜನಿಕರು ₹500 ರಿಂದ ₹600 ವೆಚ್ಚ ಮಾಡಿ ಟ್ಯಾಂಕರ್ ನೀರು ತರಿಸಿಕೊಳ್ಳುತ್ತಿದ್ದಾರೆ. ತಪ್ಪಲೆ, ಕೊಳಗ, ಡ್ರಮ್‌ಗಳಲ್ಲಿ ನೀರು ಶೇಖರಿಸಿಕೊಳ್ಳುವ ದೃಶ್ಯಗಳು ಎಲ್ಲೆಡೆ ಗೋಚರಿಸುತ್ತವೆ.
ಹೋಬಳಿ ವ್ಯಾಪ್ತಿಯಲ್ಲಿ ಸುಮಾರು 85 ಗ್ರಾಮಗಳಿವೆ. ಎಲ್ಲ ಗ್ರಾಮಗಳಲ್ಲೂ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಕುಡಿಯುವ ನೀರು ಪೂರೈಕೆಯತ್ತ ಸ್ಥಳೀಯಾಡಳಿತ ಗಮನ ವಹಿಸಿದೆಯೇ ಹೊರತು, ಅದರ ಗುಣಮಟ್ಟದ ಕಡೆಗಲ್ಲ. ಶುದ್ಧ ಕುಡಿಯುವ ನೀರಿನ ಘಟಕಗಳು ಹೆಚ್ಚಿನ ಸಂಖ್ಯೆಯಲ್ಲಿಲ್ಲ.
ಆರು ಗ್ರಾಮ ಪಂಚಾಯಿತಿಗಳು ಹೋಬಳಿಗೆ ಒಳಪಟ್ಟಿದ್ದು, ಬಹುತೇಕ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಹಾಗೂ ಸಕಾಲಕ್ಕೆನೀರು ಒದಗಿಸುವುದು ಪಂಚಾಯಿತಿಯ ಜವಾಬ್ದಾರಿ. ಆದರೆ, ಹಲವೆಡೆ ಪಂಚಾಯಿತಿ ಪದಾಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತದೆ.
ಕಳೆದ ಮುಂಗಾರಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಹಿಂಗಾರು ಮಳೆಯೂ ಕೈಕೊಟ್ಟಿದೆ. ಅಕ್ಟೋಬರ್ ಮೊದಲ ವಾರ ಮಳೆಯಾಗಿದ್ದು ಬಿಟ್ಟರೆ, ಆರು ತಿಂಗಳಿಂದ ಮಳೆ ಬಿದ್ದೇ ಇಲ್ಲ. ಕೆರೆಗಳೂ ಬತ್ತಿ ಹೋಗಿದೆ.
ಪ್ರಧಾನಿ, ಮುಖ್ಯಮಂತ್ರಿಗೂ ಅಹವಾಲು
ತಮ್ಮ ಪ್ರದೇಶದ ನೀರಿನ ಸಮಸ್ಯೆಗಳಿಗೆ ಸ್ಪಂದಿಸದ ಸ್ಥಳೀಯಾಡಳಿತದ ಕಾರ್ಯವೈಖರಿಯಿಂದ ಬೇಸತ್ತ ನಿವಾಸಿಗಳು ಪ್ರಧಾನ ಮಂತ್ರಿ ಕಾರ್ಯಾಲಯ ಮತ್ತು ಮುಖ್ಯಮಂತ್ರಿಯ ಜನಸ್ಪಂದನದವರೆಗೂ ನೀರಿನ ಸಮಸ್ಯೆಯನ್ನು ಒಯ್ದಿದ್ದಾರೆ.
ರಾಮಮೂರ್ತಿನಗರ ಬದಿಯ ಹೊಯ್ಸಳನಗರದ 8ನೇ ಮುಖ್ಯರಸ್ತೆಯ ಅಂದಾಜು 600 ಮನೆಗಳ ವಾಸಿಗಳಿಗೆ ಜಲಮಂಡಳಿಯ ನೀರು ಸಿಗುತ್ತಿಲ್ಲ. ಪಾಲಿಕೆಯೂ ನೀರು ಪೂರೈಸುತ್ತಿಲ್ಲ. ಈ ಕುರಿತು ಪಾಲಿಕೆ ಅಧಿಕಾರಿಗಳಿಗೆ ಕೇಳಿದರೆ, ‘ಕೊಳವೆ ಬಾವಿಗಳು ಕೆಟ್ಟುನಿಂತಿವೆ’ ಎಂಬ ಸಿದ್ಧ ಉತ್ತರ ಮಾತ್ರ ಸಿಗುತ್ತಿದೆ.
ಈ ಸಮಸ್ಯೆಯನ್ನು ಸ್ಥಳೀಯರಾದ ಚೇತನ್ ಅವರು ಆನ್‌ಲೈನ್ ಪೋರ್ಟಲ್ ಮೂಲಕ ಪ್ರಧಾನ ಮಂತ್ರಿ ಕಾರ್ಯಾಲಯದ ಗಮನಕ್ಕೆ ತಂದಿದ್ದಾರೆ. ‘ಆದಷ್ಟು ಬೇಗ ನಿಮ್ಮ ಸಮಸ್ಯೆ ನಿವಾರಣೆಗೆ ಗಮನ ಹರಿಸುತ್ತೇವೆ’ ಎಂಬ ಉತ್ತರ ಕಾರ್ಯಾಲಯದಿಂದ ಬಂದಿದೆ. ಹಾಗಾಗಿ ಸಮಸ್ಯೆ ಇನ್ನಾದರೂ ಬಗೆಹರಿದೀತು ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ. ಸದ್ಯಕ್ಕಂತೂ ಟ್ಯಾಂಕರ್ ನೀರನ್ನೇ ಅವಲಂಬಿಸಿದ್ದಾರೆ.
ಬೇಗೂರಿನ ವಿಟ್ಟಸಂದ್ರದ ನಿವಾಸಿಗಳು ಕುಡಿಯುವ ನೀರು ಪೂರೈಸುವಂತೆ ಕಳೆದ ಆಗಸ್ಟ್‌ನಲ್ಲಿ ಮುಖ್ಯಮಂತ್ರಿಯ ಜನಸ್ಪಂದನ ಕಾರ್ಯಕ್ರಮದಲ್ಲೂ ಪ್ರಸ್ತಾಪಿಸಿದ್ದರು. ಈ ಸಮಸ್ಯೆಯನ್ನು ಬೇಗ ಪರಿಹರಿಸಬೇಕೆಂಬ ಹಿಂಬರಹ ಈ ವಲಯದ ಜಂಟಿ ಆಯುಕ್ತರ ಕಚೇರಿ ತಲುಪಿದೆ.
‘ಸ್ಥಳೀಯ ಅಧಿಕಾರಿಗಳು ಇಲ್ಲಿನ 300 ಮನೆಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲು ಈ ವರೆಗೂ ವ್ಯವಸ್ಥೆಯೇ ಮಾಡಿಲ್ಲ. ಮುಖ್ಯಮಂತ್ರಿ ಮಾತಿಗೂ ಅಧಿಕಾರಿಗಳು ಬೆಲೆ ಕೊಡುತ್ತಿಲ್ಲ’ ಎಂಬುದು ಸ್ಥಳೀಯರಾದ ನಾಗರಾಜು ಅವರ ಅಳಲು.
ಟ್ಯಾಂಕರ್ ನೀರಿಗೆ ದರ ನಿಗದಿ?
ಬೆಂಗಳೂರು: ಬೇಸಿಗೆಯ ಕಾವೇರುತ್ತಿದ್ದಂತೆಯೇ ಕುಡಿಯುವ ನೀರಿಗೆ ಹೆಚ್ಚುತ್ತಿರುವ ಬೇಡಿಕೆಯನ್ನೇ ಬಂಡವಾಳ ಮಾಡಿಕೊಂಡು ದುಪ್ಪಟ್ಟು ದರಕ್ಕೆ ಮಾರಾಟ ಮಾಡುತ್ತಿರುವ ಟ್ಯಾಂಕರ್ ನೀರು ಮಾರಾಟಗಾರರಿಗೆ ಕಡಿವಾಣ ಹಾಕಲು ಬಿಬಿಎಂಪಿ ಮತ್ತು ಜಲಮಂಡಳಿ ನಿರ್ಧರಿಸಿವೆ.
ನಿರ್ದಿಷ್ಟ ಲೀಟರ್ ಸಾಮರ್ಥ್ಯದ ಟ್ಯಾಂಕರ್ ನೀರಿಗೆ ನಿಗದಿತ ಮೊತ್ತ ನಿಗದಿ ಪಡಿಸುವ ಕುರಿತು ಪಾಲಿಕೆಯ ಆಯುಕ್ತರು ಮತ್ತು ಜಲಮಂಡಳಿಯ ಅಧ್ಯಕ್ಷರು ಚರ್ಚೆ ನಡೆಸಿದ್ದಾರೆ. ಒಂದೆರಡು ದಿನಗಳಲ್ಲಿ ದರಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ.
ಜಲಮಂಡಳಿಯ 6,000 ಲೀ. ಸಾಮರ್ಥ್ಯದ ಟ್ಯಾಂಕರ್ ನೀರಿನ ದರ ₹ 540 ಇದೆ. ‘ಪಾಲಿಕೆಯು ಖಾಸಗಿ ಟ್ಯಾಂಕರ್ ನೀರಿನ ದರವನ್ನು ₹ 550 ರಿಂದ ₹ 750ರೊಳಗೆ ನಿಗದಿ ಪಡಿಸುವ ಸಾಧ್ಯತೆ ಇದೆ’ ಎಂದು ಮೂಲಗಳು ತಿಳಿಸಿವೆ.
***
ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ವರ್ಷವೇ ಕಳೆದಿದೆ. ದುರಸ್ತಿ ಮಾಡಿಸುವ ಗೋಜಿಗೆ ಯಾರೂ ಹೋಗಿಲ್ಲ.
–ರುದ್ರಮ್ಮ, ದಾಸೇನಹಳ್ಳಿ.
*
ಮೂರು ತಿಂಗಳಿಂದ ನಲ್ಲಿಯಲ್ಲಿ ನೀರು ಬರುತ್ತಿಲ್ಲ. ಈ ಬಗ್ಗೆ ಪಂಚಾಯಿತಿಗೆ ದೂರು ನೀಡಿದ್ದೇವೆ. ಅವರು ಸಮಸ್ಯೆ ಪರಿಹರಿಸುವ ಭರವಸೆ ನೀಡುತ್ತಾರೆಯೇ ಹೊರತು, ಈ ತನಕ ಕ್ರಮ ಕೈಗೊಂಡಿಲ್ಲ
–ಶಕೀರಾ, ಹೆಗ್ಗುಂದ
*
ಮೂರ್ನಾಲ್ಕೂ ದಿವಸಕ್ಕೊಮ್ಮೆ ನೀರು ಬಿಡುತ್ತಾರೆ. ನೀರಿಗಾಗಿ ಕಾದು ಕಾದು ಜೀವ ಹೈರಾಣಾಗಿದೆ.
–ಹನುಮಕ್ಕ,ಬೆಣಚನಹಳ್ಳಿ
*
ಎಲ್ಲೆಲ್ಲಿದೆ ನೀರಿನ ಸಮಸ್ಯೆ?
ವಿನಾಯಕನಗರ, ಬೊಮ್ಮನಹಳ್ಳಿ: ಕಾವೇರಿ ನೀರು ಪೂರೈಕೆಯ ಕೊಳವೆ ಜೋಡಣಾ ಕಾರ್ಯ ಮುಗಿದಿದ್ದರೂ, ಮನೆಗಳಿಗೆ ನೀರಿನ ಸಂಪರ್ಕ ಸಿಕ್ಕಿಲ್ಲ. ನಾವು ಟ್ಯಾಂಕರ್ ನೀರಿನ ಮೇಲೆ ಅವಲಂಬಿತರಾಗಿದ್ದೇವೆ. ವರ್ಷದ ಅಂತ್ಯದೊಳಗೆ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ.
– ಚಂದನ್
*
ಶಿವರಾಮ ಕಾರಂತ ನಗರ, ಎಂಸಿಇಸಿಎಚ್‌ಎಸ್ ಬಡಾವಣೆ
ಈ ಬಡಾವಣೆಗೆ ಕಾವೇರಿ ನೀರು ಪೂರೈಕೆಯ ಮಾರ್ಗವನ್ನು ಆರು ತಿಂಗಳ ಹಿಂದೆ ಉದ್ಘಾಟಿಸಲಾಗಿತ್ತು. ಈವರೆಗೂ ಒಂದು ಬಕೆಟ್ ನೀರು ಬಡಾವಣೆಯ ಮನೆಗಳಿಗೆ ಬಂದಿಲ್ಲ. ಅದರಲ್ಲೂ ಬಡಾವಣೆಯ 8, 9 ಮತ್ತು 10 ಅಡ್ಡರಸ್ತೆಯಲ್ಲಿ ನೀರಿನ ಸಮಸ್ಯೆ ಹೆಚ್ಚಿದೆ.
–ಎಂ.ಕಿಟ್ಟೇಶ್
*
ಮಧುರಾನಗರ, ವರ್ತೂರು
ನಮ್ಮ ಪ್ರದೇಶ ಪಂಚಾಯಿತಿ ವ್ಯಾಪ್ತಿಯಲ್ಲಿದ್ದಾಗ ಚೆನ್ನಾಗಿತ್ತು. ಪಾಲಿಕೆ ವ್ಯಾಪ್ತಿಗೆ ಸೇರಿದ ಬಳಿಕ ಸಮಸ್ಯೆಗಳು ಹೆಚ್ಚುತ್ತಿವೆ. ಕೊಳವೆ ಜೋಡಣೆಗೆ ರಸ್ತೆಗಳನ್ನು ಅಗೆದು ಹಾಳುಮಾಡಿದ್ದಾರೆ. ಪ್ರದೇಶದ ಒಂದು ಕಡೆ ಕಾವೇರಿ ನೀರು ತಲುಪಿಲ್ಲ, ಮತ್ತೊಂದು ಕಡೆ ಕಾವೇರಿ ನೀರು ವ್ಯರ್ಥವಾಗಿ ಹರಿಯುತ್ತದೆ. ಕೊಳವೆ ಬಾವಿ ಕೊರೆಸಿದರೂ ಇಲ್ಲಿ ನೀರು ಸಿಗುತ್ತಿಲ್ಲ.
– ನಾರಾಯಣಸ್ವಾಮಿ
*
ಎಲ್‌ಬಿಎಸ್ ನಗರ, ಯಲಹಂಕ
ಕೆಲವು ಕಡೆ ನೀರು ವ್ಯರ್ಥವಾಗಿ ಹೋಗುತ್ತದೆ. ಇನ್ನೂ ನೂರಾರು ಮನೆಗಳಿಗೆ ಕಾವೇರಿ ನೀರಿನ ಸಂಪರ್ಕ ಸಿಕ್ಕಿಲ್ಲ. ಯಥೇಚ್ಛ ನೀರು ಪಡೆಯುವವರು ಬೇಕಾಬಿಟ್ಟಿಯಾಗಿ ಬಳಸುತ್ತಿದ್ದಾರೆ.
–ಶಿವಣ್ಣ
**
ಅಟ್ಟೂರು
ಸಂಭ್ರಮ ಕಾಲೇಜು ಸುತ್ತಮುತ್ತಲಿನ ಸಾಯಿನಗರ, ಸೋಮೇಶ್ವರ ಬಡಾವಣೆ, ಮುನಿಸ್ವಾಮಪ್ಪ ಬಡಾವಣೆ, ಬೆಸ್ಟ್‌ಕೌಂಟಿ ಬಡಾವಣೆಗಳಲ್ಲಿ ವಾರಕ್ಕೆ ಎರಡು ಬಾರಿ ನೀರು ಬಿಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಬಿಗಡಾಯಿಸುವ ಮೊದಲ ಜನಪ್ರತಿನಿಧಿಗಳು, ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು.
–ಕೆ.ಟಿ.ಸೋಮಶೇಖರ್.
**
ಸುವರ್ಣನಗರ, ಎಚ್‌ಎಂಟಿ ಬಡಾವಣೆ ಹತ್ತಿರ, ನಾಗಸಂದ್ರ
ಪಾಲಿಕೆಯ ಕೊಳವೆಬಾವಿಗಳು ಬತ್ತಿವೆ. 1,200 ಅಡಿ ಕೊಳವೆ ಕೊರಿಸಿದರೂ ನೀರು ಸಿಗುತ್ತಿಲ್ಲ. ಕಾವೇರಿ ನೀರು ಈ ಕಡೆ ಬರಲ್ಲ. ಟ್ಯಾಂಕರ್ ನೀರೇ ನಮಗೆ ಗತಿ. ಬಾಡಿಗೆ ಮನೆ ಪಡೆದಿರುವವರಿಗೆ ನೀರು ತರಿಸಿಕೊಡಲು ತಿಂಗಳಿಗೆ ₹ 7,000 ಖರ್ಚು ಮಾಡುತ್ತಿದ್ದೇವೆ. – ಶ್ರೀಧರ್
*
ಸುಶ್ರುತಿ ನಗರ, ಬಸಾಪುರ
ಈ ಪ್ರದೇಶದಲ್ಲಿ 1,300 ಅಡಿಗಳಷ್ಟು ಆಳಕ್ಕೆ ಕೊಳವೆಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಕೊಳವೆಗಳ ಸಂಪರ್ಕವಿದ್ದರೂ ಕಾವೇರಿ ನೀರು ಬರುತ್ತಿಲ್ಲ.
–ಪ್ರಕಾಶ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.