
ಬೆಂಗಳೂರು: ನಾಯಿಯನ್ನು ಮುದ್ದು ಮಾಡುವ ನೆಪದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಜ್ಞಾನಭಾರತಿ ಠಾಣಾ ವ್ಯಾಪ್ತಿಯ ಉಪಕಾರ್ ಲೇಔಟ್‌ನಲ್ಲಿ ನಡೆದಿದೆ.
25 ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ಅಪರಿಚಿತ ವ್ಯಕ್ತಿಯ ವಿರುದ್ಧ ಹಲ್ಲೆ, ಲೈಂಗಿಕ ಕಿರುಕುಳ, ಕಳ್ಳತನ ಮತ್ತು ಉದ್ದೇಶಪೂರ್ವಕವಾಗಿ ಗಾಯಗೊಳಿಸುವಿಕೆ ಆರೋಪದಡಿ ಪ್ರಕರಣ ದಾಖಲಾಗಿದೆ.
ನವೆಂಬರ್ 7ರ ರಾತ್ರಿ 10.30ರಲ್ಲಿ ದೂರುದಾರ ಯುವತಿ ತಮ್ಮ ಸಾಕುನಾಯಿಯನ್ನು ಮನೆ ಸಮೀಪದಲ್ಲೇ ವಾಕಿಂಗ್ಗೆಂದು ಕರೆದುಕೊಂಡು ಬಂದಿದ್ದರು. ಅದೇ ಸಮಯಕ್ಕೆ ಅಲ್ಲಿಗೆ ಬಂದ ಅಪರಿಚಿತ ವ್ಯಕ್ತಿಯೊಬ್ಬ, ‘ನಿಮ್ಮ ನಾಯಿಯನ್ನು ಮುಟ್ಟಬಹುದೇ?’ ಎಂದು ಕೇಳುತ್ತಾ ನಾಯಿಯನ್ನು ಮುದ್ದಿಸಲು ಆರಭಿಸಿದ. ನಂತರ ಯುವತಿ ಮನೆಗೆ ತೆರಳಲು ಮುಂದಾದಾಗ ಏಕಾಏಕಿ ಆಕೆಯ ದೇಹ ಸ್ಪರ್ಶಿಸಿದ್ದಾನೆ.
ಗಾಬರಿಗೊಂಡ ಯುವತಿ ಆರೋಪಿಯನ್ನು ತಳ್ಳುವ ಮೂಲಕ ಪ್ರತಿರೋಧವೊಡ್ಡಿದ್ದರು. ಮತ್ತೆ ಆರೋಪಿ ಕಿರುಕುಳ ನೀಡಲು ಯತ್ನಿಸಿದಾಗ ಕಪಾಳಕ್ಕೆ ಬಾರಿಸಿದ್ದರು. ಯುವತಿ ಜೋರಾಗಿ ಕಿರುಚಲಾರಂಭಿಸಿದಾಗ, ಕೆಳಕ್ಕೆ ಬಿದ್ದ ಅವರ ಸ್ಮಾರ್ಟ್ಫೋನ್ ತೆಗೆದುಕೊಂಡು ಆರೋಪಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲ್ಲೆ ನಡೆಸಿ, ಲೈಂಗಿಕ ಕಿರುಕುಳ ನೀಡಿ ಮೊಬೈಲ್ ಕಳ್ಳತನ ಮಾಡಿರುವ ಆರೋಪಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಯುವತಿ ದೂರಿನಲ್ಲಿ ಮನವಿ ಮಾಡಿದ್ದಾರೆ.
ಘಟನೆ ನಡೆದ ಸ್ಥಳದ ಸುತ್ತಮುತ್ತಲ ಸಿ.ಸಿ.ಟಿ.ವಿ. ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದ್ದು, ಆರೋಪಿಗೆ ಹುಡುಕಾಟ ನಡೆಯುತ್ತಿದೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.