ADVERTISEMENT

ಬೆಂಗಳೂರು | ಪಿಸ್ತೂಲ್‌ನಿಂದ ಹಾರಿದ ಗುಂಡು: ಮಹಿಳೆಯ ಮೂತ್ರಪಿಂಡಕ್ಕೆ ಹಾನಿ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 18:43 IST
Last Updated 30 ಜುಲೈ 2025, 18:43 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

– ಎ.ಐ ಚಿತ್ರ

ಬೆಂಗಳೂರು: ಹೊರಮಾವು ಬಡಾವಣೆಯ ಆಶೀರ್ವಾದ ಕಾಲೊನಿಯ ಮನೆಯೊಂದರಲ್ಲಿ ಪಿಸ್ತೂಲ್‌ನಿಂದ ಆಕಸ್ಮಿಕವಾಗಿ ಗುಂಡು ಹಾರಿ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ADVERTISEMENT

ಕಾಕ್ಸ್‌ಟೌನ್‌ ನಿವಾಸಿ ರೇಚೆಲ್‌(32) ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರೇಚಲ್‌ ಅವರ ಸ್ನೇಹಿತ ನಿಖಿಲ್ ನಾಯಕ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 2023ರ 125ಬಿ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯ 25 (1ಬಿ), 27, 30ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ಕಾಕ್ಸ್ ಟೌನ್‌ನ ನಿವಾಸಿ ರೇಚಲ್ ಅವರು ಜುಲೈ 28ರಂದು ರಾತ್ರಿ ಹೊರಮಾವು ಸಮೀಪದ ಆಶೀರ್ವಾದ ಕಾಲೊನಿಯಲ್ಲಿ ಇರುವ ನಿಖಿಲ್ ನಾಯಕ್‌ ಅವರ ಮನೆಗೆ ತೆರಳಿದ್ದರು. ನಿಖಿಲ್ ನಾಯಕ್ ಅವರು ಶೌಚಾಲಯಕ್ಕೆ ಹೋಗಿದ್ದರು. ರೇಚಲ್ ಅವರು ಸ್ನೇಹಿತನ ಬಳಿಯಿದ್ದ ಪರವಾನಗಿ ಹೊಂದಿದ್ದ ಪಿಸ್ತೂಲ್ ಅನ್ನು ನೋಡುತ್ತಿದ್ದಾಗ ಆಕಸ್ಮಿಕವಾಗಿ ಗುಂಡು ಹಾರಿದೆ. ರೇಚಲ್‌ ಅವರ ಹೊಟ್ಟೆಗೆ ಗುಂಡು ತಗುಲಿದ್ದು, ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ನಿಖಿಲ್ ನಾಯಕ್ ಅವರು ರೇಚಲ್‌ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದರು. ರೇಚಲ್ ಅವರ ಒಂದು ಮೂತ್ರಪಿಂಡಕ್ಕೆ ಹಾನಿಯಾಗಿದೆ ಎಂದು ಮೂಲಗಳು ತಿಳಿಸಿವೆ.

‘ರೇಚಲ್ ಅವರ ಸ್ಥಿತಿ ಗಂಭೀರವಾಗಿದೆ. ಚಿಕಿತ್ಸೆ ಮುಂದುವರಿದಿದೆ’ ಎಂದು ಪೊಲೀಸರು ಹೇಳಿದರು.

‘ಘಟನೆಯ ಬಳಿಕ ನಿಖಿಲ್ ನಾಯಕ್‌ ಅವರೇ ರೇಚಲ್‌ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ರೇಚಲ್ ಸಹೋದರಿ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪರವಾನಗಿ ಹೊಂದಿರುವವರು ಶಸ್ತ್ರಾಸ್ತ್ರ ದುರ್ಬಳಕೆ ಆಗದಂತೆ ಇರಿಸಿಕೊಳ್ಳಬೇಕು. ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿಯೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಜಂಟಿ‌‌ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಿಳಿಸಿದರು.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.