ಬೆಸ್ಕಾಂ
ಬೆಂಗಳೂರು: ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸಿದ ಕಟ್ಟಡಗಳಿಗೆ ಶಾಶ್ವತ ಮತ್ತು ತಾತ್ಕಾಲಿಕ ವಿದ್ಯುತ್ ಸರಬರಾಜು ಕಡಿತಗೊಳಿಸುವುದಾಗಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಪ್ರಕಟಿಸಿದೆ.
ನಾಗರಿಕ ಸಂಸ್ಥೆಗಳು, ಸಂಬಂಧಪಟ್ಟ ಪ್ರಾಧಿಕಾರಗಳು, ಪಂಚಾಯತ್ ರಾಜ್ ಇಲಾಖೆ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸೇರಿದಂತೆ ಇತರ ಸಂಸ್ಥೆಗಳಿಂದ ಮನವಿ ಬಂದ ಸಂದರ್ಭದಲ್ಲಿ ಮಾತ್ರ ಬೆಸ್ಕಾಂ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುತ್ತದೆ.
ಬೆಸ್ಕಾಂನ ಕಾರ್ಯಾಚರಣೆ ವಿಭಾಗದ ಮುಖ್ಯ ಪ್ರಧಾನ ವ್ಯವಸ್ಥಾಪಕರು (ಎಲೆಕ್ಟ್ರಿಕಲ್) ಈ ಸಂಬಂಧ ಇತ್ತೀಚೆಗೆ ಸುತ್ತೋಲೆ ಹೊರಡಿಸಿದ್ದಾರೆ. ಸಂಬಂಧಪಟ್ಟ ಪ್ರಾಧಿಕಾರದಿಂದ ಲಿಖಿತ ನಿರ್ದೇಶನಗಳನ್ನು ಪಡೆದ ಬಳಿಕ ಗ್ರಾಹಕರಿಗೆ ಏಳು ದಿನಗಳ ನೋಟಿಸ್ ನೀಡಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಎಲ್ಲಾ ಅಧಿಕಾರಿಗಳಿಗೆ ಸುತ್ತೋಲೆಯಲ್ಲಿ ನಿರ್ದೇಶನ ನೀಡಿದ್ದಾರೆ. ಈ ಬಗ್ಗೆ ಯಾವುದೇ ಲೋಪಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಬಾಬುಸಾಪಾಳ್ಯದಲ್ಲಿ ಕಟ್ಟಡ ಕುಸಿದು ಒಂಬತ್ತು ಕಾರ್ಮಿಕರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತರು ನಡೆಸುತ್ತಿರುವ ವಿಚಾರಣೆಯನ್ನು ಬೆಸ್ಕಾಂ ತನ್ನ ಸುತ್ತೋಲೆಯಲ್ಲಿ ಉಲ್ಲೇಖಿಸಿದೆ.
‘ಅಕ್ರಮ ಕಟ್ಟಡಗಳ ನಿರ್ಮಾಣದ ವಿರುದ್ಧ ಹೋರಾಡಲು ಬೆಸ್ಕಾಂನ ಈ ಆದೇಶ ಬಹಳ ಮಹತ್ವದ್ದಾಗಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್ಬಿ) ಕೂಡ ಇದನ್ನು ಅನುಸರಿಸಬೇಕು’ ಎಂದು ಹೇಳುತ್ತಾರೆ ಜಯನಗರ ನಿವಾಸಿ ಸಿ.ಎನ್.ಕುಮಾರ್.
ಬೆಂಗಳೂರು ಒಕ್ಕೂಟದ ಸಂಚಾಲಕ ಆರ್. ರಾಜಗೋಪಾಲನ್, ‘ಬಿಬಿಎಂಪಿ ಕಾಯ್ದೆಯ ಸೆಕ್ಷನ್ 248 (3) ಮತ್ತು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಯ ಸೆಕ್ಷನ್ 15 (4)ರ ಪ್ರಕಾರ ಅಕ್ರಮವಾಗಿ ಕಟ್ಟಡ ನಿರ್ಮಿಸುವವರಿಗೆ ನೀಡುವ ದೃಢೀಕರಣ ಆದೇಶಗಳಲ್ಲಿ ವಿದ್ಯುತ್, ನೀರು ಮತ್ತು ವಿದ್ಯುತ್ ಸಂಪರ್ಕವನ್ನು ತಕ್ಷಣವೇ ಕಡಿತಗೊಳಿಸುವುದನ್ನು ಬಿಬಿಎಂಪಿ ಮಾಡಬೇಕು’ ಎಂದು ಸಲಹೆ ನೀಡಿದರು.
‘ಕಾಮಗಾರಿ ಸ್ಥಗಿತಗೊಳಿಸುವಂತೆ ಬಿಬಿಎಂಪಿ ನೀಡಿದ ನೋಟಿಸ್‌ಗಳನ್ನು ಲೆಕ್ಕಿಸದೇ ಕೆಲಸ ಮುಂದುವರಿಸುವುದನ್ನು ನೋಡಿದ್ದೇವೆ. ಕೆಲಸ ನಿಲ್ಲಿಸುವ ಪರಿಣಾಮಕಾರಿ ಮಾರ್ಗವೆಂದರೆ ವಿದ್ಯುತ್ ಮತ್ತು ನೀರು ಸರಬರಾಜನ್ನು ಕಡಿತಗೊಳಿಸುವುದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.