ADVERTISEMENT

ಕೋವಿಡ್ ಸಂಕಷ್ಟ: ವಿದ್ಯುತ್ ದರ ಹೆಚ್ಚಳ ಪ್ರಸ್ತಾವಕ್ಕೆ ಆಕ್ಷೇಪ

ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗದಿಂದ ಅಹವಾಲು ಸ್ವೀಕಾರ ಪ್ರಾರಂಭ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2022, 20:33 IST
Last Updated 14 ಫೆಬ್ರುವರಿ 2022, 20:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಕೋವಿಡ್‌ನಿಂದಾಗಿ ಎಲ್ಲ ವರ್ಗದವರು ಕಳೆದ ಎರಡು ವರ್ಷಗಳಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಈಗಪ್ರತಿ ಯೂನಿಟ್‌ ವಿದ್ಯುತ್‌ಗೆ ₹1.58 ದರ ಹೆಚ್ಚಿಸುವ ಬೆಸ್ಕಾಂ ಕೋರಿಕೆ ಅವೈಜ್ಞಾನಿಕ. ನಷ್ಟ ಸರಿದೂಗಿಸಲು ವಿದ್ಯುತ್ ಖರೀದಿಯ ಮೋಸದ ವ್ಯವಹಾರ ತಡೆಯಬೇಕು. ಹಾಗೂ ವ್ಯವಸ್ಥೆಯ ಲೋಪಗಳನ್ನು ಸರಿಪಡಿಸಬೇಕು’

ಇವುಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ಸಾರ್ವಜನಿಕ ವಿಚಾರಣೆ ಸಭೆಯಲ್ಲಿ ಗ್ರಾಹಕರು, ಕೈಗಾರಿಕೋದ್ಯಮಿಗಳು ಹಾಗೂ ವಿವಿಧ ಸಂಘ–ಸಂಸ್ಥೆಗಳ ಮುಖಂಡರಿಂದ ವ್ಯಕ್ತವಾದ ಅಭಿಪ್ರಾಯಗಳಿವು. ಬೆಸ್ಕಾಂ ಸಲ್ಲಿಸಿರುವ ವಿದ್ಯುತ್ ದರ ಪರಿಷ್ಕರಣೆ ಕೋರಿಕೆ ಪ್ರಸ್ತಾವಕ್ಕೆ ಆಯೋಗದ ಅಧ್ಯಕ್ಷ ಮಂಜುನಾಥ್ ಎಚ್‌.ಎಂ. ಹಾಗೂ ಸದಸ್ಯ ಎಂ.ಡಿ. ರವಿ ಅವರು ಗ್ರಾಹಕರಿಂದ ಅಹವಾಲುಗಳನ್ನು ಸ್ವೀಕರಿಸಿದರು.

ಒಟ್ಟು 70 ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದು, 25 ಪ್ರತಿನಿಧಿಗಳು ಮೌಕಿಕವಾಗಿ ಅಭಿಪ್ರಾಯ ಮಂಡಿಸಿದರು. ಬಹುತೇಕರು ವಿದ್ಯುತ್ ದರ ಹೆಚ್ಚಳಕ್ಕೆ ವಿರೋಧ ವ್ಯಕ್ತಪಡಿಸಿದರು. ಕಳಪೆ ಗುಣಮಟ್ಟದ ಮೀಟರ್ ಅಳವಡಿಕೆ, ನೆಲದಡಿ ವಿದ್ಯುತ್‌ ಕೇಬಲ್‌ ಅಳವಡಿಕೆಯಲ್ಲಿ ದೋಷ, ವಿದ್ಯುತ್ ಪರಿವರ್ತಕಗಳ ನಿರ್ವಹಣೆ ಕೊರತೆ, ವಿದ್ಯುತ್ ಕಳ್ಳತನ ಸೇರಿದಂತೆ ವ್ಯವಸ್ಥೆಯಲ್ಲಿನ ವಿವಿಧ ಲೋಪಗಳನ್ನು ಸರಿಪಡಿಸುವಂತೆ ಸಲಹೆ ನೀಡಿದರು.

ADVERTISEMENT

ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) ಇಂಧನ ಸಮಿತಿಯ ಶ್ರೀನಾಥ್ ಭಂಡಾರಿ ಮತ್ತು ಮಲ್ಲಪ್ಪ ಗೌಡ, ‘ಹೈಟೆನ್ಷನ್ ಲೈನ್ ಸಂಪರ್ಕ ಹೊಂದಿರುವ ಕೈಗಾರಿಕಾ ಗ್ರಾಹಕರು ಅಗ್ಗವಾಗಿರುವ ಮುಕ್ತ ಮೂಲಗಳಿಂದ ವಿದ್ಯುತ್ ಪಡೆಯುತ್ತಿದ್ದು, ಬೆಸ್ಕಾಂನಿಂದ ದೂರ ಸರಿಯುತ್ತಿದ್ದಾರೆ. ಅದರಿಂದಾಗಿ ಹೈಟೆನ್ಷನ್ ಲೈನ್ ಬಳಕೆ ಶೇ 23 ರಷ್ಟು ಕಡಿಮೆಯಾಗಿದೆ. ಲೋಟೆನ್ಷನ್ ಲೈನ್ಬಳಕೆಯೂ ಕಡಿಮೆಯಾಗಿದೆ. ಮಾರುಕಟ್ಟೆಯ ಪೈಪೋಟಿಯಿಂದ ಕೈಗಾರಿಕೆಗಳು ಹೈರಾಣಾಗಿವೆ. ವಿದ್ಯುತ್‌ ದರವನ್ನೂ ಹೆಚ್ಚಳ ಮಾಡಿದರೆ ಬಾಗಿಲು ಮುಚ್ಚಬೇಕಾಗುತ್ತವೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಪ್ರತಿ ಯೂನಿಟ್‌ಗೆ ಸರಾಸರಿ ವೆಚ್ಚ ₹ 8.17 ಆಗಿದೆ. ಕೃಷಿ ಪಂಪ್‌ಸೆಟ್‌ಗಳಿಗೆ ಸರಬರಾಜು ಮಾಡಲಾದ ವಿದ್ಯುತ್‌ನ ಪ್ರತಿ ಯೂನಿಟ್‌ಗೆ ₹ 3.90 ಸಬ್ಸಿಡಿ ನೀಡುತ್ತಿರುವುದು ಇತರ ಗ್ರಾಹಕರ ಮೇಲೆ ದೊಡ್ಡ ಹೊರೆಯಾಗಿ ಪರಿಣಮಿಸಿದೆ.ಸರ್ಕಾರದ ಸ್ಥಾವರಗಳಿಂದ ಬಾಕಿ ಉಳಿದಿರುವ ₹ 698.85 ಕೋಟಿಗಳನ್ನು ಗ್ರಾಹಕರ ಮೇಲೆ ವರ್ಗಾವಣೆ ಮಾಡಬಾರದು. ಅದನ್ನು ಸರ್ಕಾರದಿಂದ ವಸೂಲಿ ಮಾಡಬೇಕು.ಅನಧಿಕೃತ ಕೃಷಿ ಪಂಪ್‌ಸೆಟ್‌ಗಳು ಬೆಸ್ಕಾಂನ ಚಟುವಟಿಕೆಗಳಿಗೆ ಕಂಟಕಪ್ರಾಯವಾಗಿವೆ. 24,874 ಅನಧಿಕೃತ ಕೃಷಿ ಪಂಪ್‌ಸೆಟ್‌ಗಳನ್ನು ಕ್ರಮಬದ್ಧಗೊಳಿಸಬೇಕು’ ಎಂದು ಆಗ್ರಹಿಸಿದರು.

ಪೀಣ್ಯ ಕೈಗಾರಿಕಾ ಸಂಘದ ಲಕ್ಷ್ಮೀಕಾಂತ್, ‘ಸಂಘದಡಿ 10 ಸಾವಿರ ಕೈಗಾರಿಕೆಗಳು ನೋಂದಾಯಿಸಲ್ಪಟ್ಟಿವೆ. ಕೋವಿಡ್‌ನಿಂದ ಶೇ 50 ರಷ್ಟು ಕೈಗಾರಿಕೆಗಳು ಮುಚ್ಚಿವೆ. ಎರಡು ವರ್ಷಗಳು ವಿದ್ಯುತ್ ದರ ಹೆಚ್ಚಳ ಮಾಡಬಾರದು’ ಎಂದು ಮನವಿ ಮಾಡಿಕೊಂಡರು.

ಕೈಗಾರಿಕೋದ್ಯಮಿ ನರಸಿಂಹಯ್ಯ, ‘ಗುಣಮಟ್ಟದ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಎಲ್ಲ ಕೈಗಾರಿಕೆಗಳು ಕೋಮಾ ಸ್ಥಿತಿ ತಲುಪಿವೆ. ಕಾರ್ಮಿಕರಿಗೆ ವೇತನ ನೀಡುವುದೇ ಕಷ್ಟವಾಗಿದೆ. ವಾರದಲ್ಲಿ ಆರು ದಿನ ಸರಿಯಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಇದರಿಂದ ಜನರೇಟರ್‌ಗಳನ್ನು ಬಳಸಬೇಕಾಗಿದೆ. ಹಣ ಪಾವತಿ ಒಂದು ದಿನ ತಡವಾದರೂ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಆನ್‌ಲೈನ್ ಹಣ ಪಾವತಿ ವ್ಯವಸ್ಥೆಯನ್ನೂ ಸರಿಯಾಗಿ ರೂಪಿಸಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ವಿದ್ಯುತ್ ಪರಿವರ್ತಕಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ಒಮ್ಮೆ ಅಳವಡಿಸಿದರೆ 10–15 ವರ್ಷಗಳು ಅತ್ತ ತಿರುಗಿ ನೋಡುತ್ತಿಲ್ಲ. ಪ್ರತಿ ವಿದ್ಯುತ್ ಪರಿವರ್ತಕದ ಮೇಲೆ ಅದರ ನಿರ್ವಹಣೆಯ ವಿವರವನ್ನು ನಮೂದಿಸಬೇಕು. ಕೆಲವರಿಗೆ ಅರ್ಜಿ ಸಲ್ಲಿಸಿದ ಮೂರು ದಿನಗಳಲ್ಲಿಯೇ ವಿದ್ಯುತ್ ಸಂಪರ್ಕ ದೊರೆತರೆ, ಇನ್ನೂ ಕೆಲವರಿಗೆ ತಿಂಗಳು ಬೇಕಾಗುತ್ತವೆ’ ಎಂದು ಕೃಷ್ಣಪ್ಪ ಹೇಳಿದರು.

ಪೀಣ್ಯದ ಎಸ್‌.ಎಂ. ಹುಸೇನ್, ‘ಬೆಸ್ಕಾಂ ನಷ್ಟವನ್ನು ಗ್ರಾಹಕರ ಮೇಲೆ ಹೇರುವುದು ಸರಿಯಲ್ಲ. ಅಧಿಕಾರಿಗಳು ಗ್ರಾಹಕ ಸ್ನೇಹಿಯಾಗಿಲ್ಲ’ ಎಂದು ದೂರಿದರು.

‘ಅಧಿಕ ದರಕ್ಕೆ ವಿದ್ಯುತ್ ಮಾರಾಟ’

‘ವಿದ್ಯುತ್ ಇಲಾಖೆಯು ಬೇರೆ ರಾಜ್ಯಗಳಿಗೆ ಯೂನಿಟ್‌ಗೆ ₹ 3ರಂತೆ ಮಾರಾಟ ಮಾಡುತ್ತಿದೆ. ರಾಜ್ಯದ ಉದ್ಯಮಿಗಳಿಗೆ ವಾಣಿಜ್ಯ ವ್ಯವಹಾರಕ್ಕೆ ಯೂನಿಟ್‌ಗೆ ₹ 7ಕ್ಕೆ ನಿಗದಿಪಡಿಸಲಾಗಿದೆ. ಇದು ಅನ್ಯಾಯ’ ಎಂದು ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘದ ಅಧ್ಯಕ್ಷ ಪಿ.ಸಿ. ರಾವ್ ದೂರಿದರು.

‘ವಿದ್ಯುತ್ ಮೇಲಿನ ತೆರಿಗೆಯನ್ನು ಶೇ 9ರಿಂದ ಶೇ 4ಕ್ಕೆ ಇಳಿಕೆ ಮಾಡಬೇಕು. ಪ್ರಿಪೇಯ್ಡ್‌ ಮೀಟರ್‌ಗಳನ್ನು ಅಳವಡಿಸಬೇಕು. ಸ್ಥಿರ ಶುಲ್ಕವನ್ನು ಕಡಿಮೆ ಮಾಡಬೇಕು. ಸರ್ಕಾರಿ ಸಂಸ್ಥೆಗಳು ಬಾಕಿ ಉಳಿಸಿಕೊಂಡಿರುವ ವಿದ್ಯುತ್ ಬಿಲ್‌ಗಳನ್ನು ವಸೂಲಿ ಮಾಡಬೇಕು’ ಸಲಹೆ ನೀಡಿದರು.

ಇದೇ 28ರವರೆಗೆ ಅಹವಾಲು ಸ್ವೀಕಾರ

ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ ಗ್ರಾಹಕರಿಂದ ಇದೇ 28ರವರೆಗೆ ಅಹವಾಲು ಸ್ವೀಕರಿಸಲಿದೆ. ವಿದ್ಯುತ್‌ ದರ ಪರಿಷ್ಕರಿಸುವಂತೆ ಕೆಇಆರ್‌ಸಿಗೆ ವಿದ್ಯುತ್‌ ಸರಬರಾಜು ಕಂಪನಿಗಳು (ಎಸ್ಕಾಂಗಳು) ಪ್ರಸ್ತಾವ ಸಲ್ಲಿಸಿವೆ. ಎಲ್ಲ ಎಸ್ಕಾಂಗಳು ಮತ್ತು ಕೆಪಿಟಿಸಿಎಲ್‌ಗೆ ಸಂಬಂಧಿಸಿದ ವಾರ್ಷಿಕ ಆದಾಯದ ವಿವರಗಳನ್ನು ಕೆಇಆರ್‌ಸಿ ಪರಾಮರ್ಶೆ ನಡೆಸಲಿದೆ.

ಕಳೆದ ವರ್ಷ ಬೆಸ್ಕಾಂ ಪ್ರತಿ ಯೂನಿಟ್‌ ವಿದ್ಯುತ್‌ಗೆ ₹1.35 ಹೆಚ್ಚಿಸುವಂತೆ ಪ್ರಸ್ತಾವ ಸಲ್ಲಿಸಿತ್ತು. ಆದರೆ, ಕೆಇಆರ್‌ಸಿ ಪ್ರತಿ ಯೂನಿಟ್‌ ವಿದ್ಯುತ್‌ಗೆ 30 ಪೈಸೆ ಹೆಚ್ಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.