ADVERTISEMENT

ಬೆಸ್ಕಾಂ ಭೂಗತ ಕೇಬಲ್‌ ಅಳವಡಿಕೆಯಿಂದ ಗಣನೀಯವಾಗಿ ತಗ್ಗಿದ ವಿದ್ಯುತ್ ನಷ್ಟ

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 0:04 IST
Last Updated 28 ಜುಲೈ 2025, 0:04 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಎ.ಐ ಚಿತ್ರ

ಬೆಂಗಳೂರು: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ), ಎತ್ತರಿಸಿದ ಕೇಬಲ್‌ಗಳನ್ನು ಭೂಗತ ಕೇಬಲ್‌ಗಳಾಗಿ(ಯುಜಿ) ಪರಿವರ್ತಿಸಲು ಆರಂಭಿಸಿದ ಬಳಿಕ ವಿದ್ಯುತ್ ವಿತರಣೆಯಲ್ಲಿನ ನಷ್ಟದ ಪ್ರಮಾಣ ತಗ್ಗಿದೆ.

ADVERTISEMENT

ಕಳೆದ ಐದು ವರ್ಷಗಳಲ್ಲಿ ವಿದ್ಯುತ್ ವಿತರಣೆಯಲ್ಲಿನ ನಷ್ಟದ ಪ್ರಮಾಣ ಶೇಕಡ 30ರಷ್ಟು ಕಡಿಮೆಯಾಗಿದೆ. 2024–25ನೇ ಸಾಲಿನಲ್ಲಿ ವಿದ್ಯುತ್‌ ವಿತರಣೆಯಲ್ಲಿನ ನಷ್ಟದ ಪ್ರಮಾಣ ಶೇ 8.44ಕ್ಕೆ ಇಳಿದಿದೆ. ಇದು ಬೆಸ್ಕಾಂನ ದಕ್ಷತೆಯನ್ನು ಸುಧಾರಿಸುವ ಜೊತೆಗೆ, ವಿದ್ಯುತ್ ಖರೀದಿ ವೆಚ್ಚವನ್ನೂ ಕಡಿಮೆ ಮಾಡಲು ನೆರವಾಗುತ್ತಿದೆ.

ಬೆಂಗಳೂರು ನಗರದಲ್ಲಿ 2019–20ರಲ್ಲಿ ಓವರ್‌ಹೆಡ್‌ ಕೇಬಲ್‌ಗಳನ್ನು ಯುಜಿ ಕೇಬಲ್‌ಗಳನ್ನಾಗಿ ಪರಿವರ್ತಿಸುವ ಯೋಜನೆ ಆರಂಭವಾಯಿತು.

‘ನಗರದಲ್ಲಿ ದೊಡ್ಡ ಪ್ರಮಾಣದಲ್ಲಿ ಯುಜಿ ಕೇಬಲ್‌ಗಳನ್ನಾಗಿ ಪರಿವರ್ತಿಸುವ ಕಾರ್ಯ ಪೂರ್ಣಗೊಂಡಿದೆ. ಪರಿಣಾಮವಾಗಿ ವಿದ್ಯುತ್ ನಷ್ಟ ಗಣನೀಯವಾಗಿ ಕಡಿಮೆಯಾಗುತ್ತಿದೆ’ ಎಂದು ಬೆಸ್ಕಾಂ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈವರೆಗೆ 7,030.33 ಕಿ.ಮೀ. ಉದ್ದದ 11 ಕೆ.ವಿ. ಸಾಮರ್ಥ್ಯದ ತಂತಿಗಳನ್ನು ಭೂಗತ ಕೇಬಲ್‌ಗಳಾಗಿ ಪರಿವರ್ತಿಸಲಾಗಿದೆ. 5,818.55 ಕಿ.ಮೀ. ಎಲ್‌ಟಿ(ಕಡಿಮೆ ಒತ್ತಡ) ತಂತಿಗಳನ್ನು ಭೂಗತ ಕೇಬಲ್‌ಗಳಾಗಿ ಪರಿವರ್ತಿಸಲಾಗಿದೆ. ಇದಕ್ಕೆ ತಗುಲಿರುವ‌ ಒಟ್ಟು ವೆಚ್ಚ ₹5,031.65 ಕೋಟಿ.

‘ಭೂಗತ ಕೇಬಲ್‌ಗಳಾಗಿ ಪರಿವರ್ತಿಸಲು ಆರಂಭಿಸಿದ ನಂತರ, ವಿದ್ಯುತ್ ಸೋರಿಕೆ ಪ್ರಮಾಣ ಕಡಿಮೆಯಾಗಿದೆ’ ಎಂದು ಬೆಸ್ಕಾಂನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಭೂಗತ ಕೇಬಲ್ ಅಳವಡಿಕೆ ಜೊತೆಗೆ, ಜಾಗೃತ ದಳವು ವಿದ್ಯುತ್ ಕಳ್ಳತನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಇದರಿಂದಾಗಿ ವಿದ್ಯುತ್ ಕಳ್ಳತನ ಕಡಿಮೆಯಾಗಿದೆ. ಡಿಜಿಟಲ್ ಮೀಟರ್‌ಗಳನ್ನು ಅಳವಡಿಸುವುದರಿಂದ ವಿದ್ಯುತ್ ನಷ್ಟವನ್ನು ಕಡಿಮೆ ಮಾಡಲು ಸಾಧ್ಯವಾಗಿದೆ’ ಎಂದು ಮತ್ತೊಬ್ಬ ಅಧಿಕಾರಿ ಹೇಳಿದರು.

ಇಷ್ಟಾದರೂ ವಿದ್ಯುತ್ ನಷ್ಟವನ್ನು ತಡೆಯುವುದು ಸವಾಲಾಗಿದೆ. ಬೆಂಗಳೂರು ನಗರದ ಜೊತೆಗೆ ಗ್ರಾಮೀಣ ಪ್ರದೇಶದಲ್ಲೂ ಇದೇ ರೀತಿ ಭೂಗತ ಕೇಬಲ್‌ಗಳನ್ನಾಗಿ ಪರಿವರ್ತಿಸುವ ಕಾರ್ಯ ನಡೆದರೆ, ವಿದ್ಯುತ್ ಸೋರಿಕೆ ಮತ್ತು ನಷ್ಟದ ಪ್ರಮಾಣವನ್ನು ಇನ್ನಷ್ಟು ತಡೆಯಬಹುದು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.