ADVERTISEMENT

ವಿಮಾನಯಾನ: ಬಳಕೆದಾರರ ಶುಲ್ಕ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 30 ಮೇ 2020, 19:59 IST
Last Updated 30 ಮೇ 2020, 19:59 IST
   

ಬೆಂಗಳೂರು: ಬೆಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣ ಸಂಸ್ಥೆಯು (ಬಿಐಎಎಲ್‌) ಬಳಕೆದಾರರ ಅಭಿವೃದ್ಧಿ ಶುಲ್ಕವನ್ನು (ಯುಡಿಎಫ್‌) ಪರಿಷ್ಕರಿಸಿದ್ದು, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಕೆಐಎ) ಪ್ರಯಾಣಿಕರಿಗೆ ದೊರೆಯುವ ಸೇವೆ ಮತ್ತಷ್ಟು ದುಬಾರಿಯಾಗಲಿದೆ.

ಯುಡಿಎಫ್‌ ಹೆಚ್ಚಳಕ್ಕೆ ಬಿಐಎಎಲ್‌ ಮಾಡಿದ್ದ ಮನವಿಯನ್ನು ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರ (ಏರಾ) ಪುರಸ್ಕರಿಸಿದ್ದು, ಯುಡಿಎಫ್‌ ಹೆಚ್ಚಳಕ್ಕೆ ಅನುಮತಿ ನೀಡಿದೆ. ಇದರನ್ವಯ, ದೇಸಿ ಪ್ರಯಾಣಿಕರ ಯುಡಿಎಫ್‌ ₹179ರಿಂದ ₹184ಕ್ಕೆ ಹಾಗೂ ವಿದೇಶಿ ಪ್ರಯಾಣಿಕರ ಯುಡಿಎಫ್‌ ₹716ರಿಂದ ₹839ಕ್ಕೆ ಹೆಚ್ಚಿಸಲಾಗಿದೆ. ಜೂನ್‌ 1ರಿಂದ ಪರಿಷ್ಕೃತ ದರ ಅನ್ವಯವಾಗಲಿದೆ.

ಕಳೆದ ಜನವರಿ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಸಾಕಷ್ಟು ಪ್ರಮಾಣದಲ್ಲಿ ಏರಿಕೆಯಾಗಿತ್ತು. ಪ್ರಯಾಣಿಕರ ಮೇಲೆ ಹೆಚ್ಚು ಹೊರೆ ಬೀಳಬಾರದು ಎಂಬ ಕಾರಣಕ್ಕೆ ಇಂಧನದ ಒಟ್ಟಾರೆ ಶುಲ್ಕ (ಎಫ್‌ಟಿಸಿ) ಸಂಗ್ರಹಿಸುವುದನ್ನು ನಾಗರಿಕ ವಿಮಾನಯಾನ ಸಚಿವಾಲಯವು ತಾತ್ಕಾಲಿಕವಾಗಿ ನಿಷೇಧಿಸಿತ್ತು. ಎಫ್‌ಟಿಸಿ ನಿಷೇಧದಿಂದಾದ ನಷ್ಟವನ್ನು ಸರಿದೂಗಿಸಿಕೊಳ್ಳಲು ಈಗ ಯುಡಿಎಫ್‌ ಹೆಚ್ಚಿಸಲಾಗಿದೆ ಎಂದು ಬಿಐಎಎಲ್‌ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.