ADVERTISEMENT

ಹಗಲು ಬಿರಿಯಾನಿ ಮಾರಾಟ, ರಾತ್ರಿ ಕಳ್ಳತನ: 38 ದ್ವಿಚಕ್ರ ವಾಹನ ಜಪ್ತಿ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 15:51 IST
Last Updated 18 ನವೆಂಬರ್ 2025, 15:51 IST
ಕಳ್ಳತನ (ಪ್ರಾತಿನಿಧಿಕ ಚಿತ್ರ)
ಕಳ್ಳತನ (ಪ್ರಾತಿನಿಧಿಕ ಚಿತ್ರ)   

ಬೆಂಗಳೂರು: ಮನೆಯ ಎದುರು, ಕಾಂಪೌಂಡ್ ಒಳಗೆ ಹಾಗೂ ರಸ್ತೆ ಬದಿಯಲ್ಲಿ ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನಗಳನ್ನು ನಕಲಿ ಕೀ ಬಳಸಿ ಕಳ್ಳತನ ಮಾಡುತ್ತಿದ್ದ ಐವರು ಕಳ್ಳರನ್ನು ಬಂಧಿಸಿರುವ ನಗರ ಪೊಲೀಸರು, ₹52.50 ಲಕ್ಷ ಮೌಲ್ಯದ 38 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಮಹದೇವಪುರ ಹಾಗೂ ಬಂಡೇಪಾಳ್ಯ ವ್ಯಾಪ್ತಿಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

ಮಹದೇವಪುರ ಠಾಣೆ ಪೊಲೀಸರು ಇಬ್ಬರು ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿದ್ದಾರೆ. ಮನುಕುಮಾರ್ ಮತ್ತು ಸಚಿನ್ ಬಂಧಿತರು. ಆರೋಪಿಗಳಿಂದ ₹37.50 ಲಕ್ಷ ಮೌಲ್ಯದ 20 ದ್ವಿಚಕ್ರ ವಾಹನ ವಶಕ್ಕೆ ಪಡೆದುಕೊಂಡಿದ್ದಾರೆ. 

ಇಬ್ಬರೂ ಹಗಲು ವೇಳೆ ತಳ್ಳುವ ಗಾಡಿಯಲ್ಲಿ ಬಿರಿಯಾನಿ ಮಾರಾಟ ಮಾಡುತ್ತಿದ್ದರು. ರಾತ್ರಿ ವೇಳೆ ದ್ವಿಚಕ್ರ ವಾಹನಗಳ ಹ್ಯಾಂಡಲ್‌ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದರು. ಮನುಕುಮಾರ್ ಹಾಗೂ ಸಚಿನ್ ಅವರು ಒಂದೇ ಕುಟುಂಬದ ಸಹೋದರಿಯರನ್ನು ಮದುವೆ ಆಗಿದ್ದರು. ಆರೋಪಿಗಳ ಕಳ್ಳತನ ಕೃತ್ಯದ ಬಗ್ಗೆ ಪತ್ನಿಯರಿಗೂ ಅರಿವಿತ್ತು. ಐಷಾರಾಮಿ ಜೀವನಕ್ಕಾಗಿ ಪತಿಯರ ಕೃತ್ಯಕ್ಕೆ ಅಕ್ಕ–ತಂಗಿ ಬೆಂಬಲ ನೀಡುತ್ತಿದ್ದರು ಎಂದು ಪೊಲೀಸರು ಹೇಳಿದರು.

ADVERTISEMENT

ಆರೋಪಿಗಳ ವಿರುದ್ಧ ನಗರದ ರಾಮಮೂರ್ತಿನಗರ, ಮಹದೇವಪುರ, ಎಚ್‌ಎಎಲ್, ವೈಟ್‌ಫೀಲ್ಡ್ ಸೇರಿದಂತೆ ಹಲವು ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.