ಬೆಂಗಳೂರು: ರಸ್ತೆಯಲ್ಲಿ ಮಾರಕಾಸ್ತ್ರ ಹಿಡಿದು ವ್ಹೀಲಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಆರೋಪಿಗಳನ್ನು ಪೂರ್ವ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ನಯೀಂ ಪಾಷಾ, ಅರಾಫತ್, ಸಾಹಿಲ್ ಹುಸೇನ್, ನಜ್ಮತ್, ಅದ್ನಾನ್ ಪಾಷಾ, ನಿಯಾಮತ್ ಉಲ್ಲಾ ಸೇರಿದಂತೆ 11 ಆರೋಪಿಗಳನ್ನು ಬಂಧಿಸಿ, ಏಳು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಡಿ.ದೇವರಾಜ್ ತಿಳಿಸಿದ್ದಾರೆ.
ಆರೋಪಿಗಳು ಫೆಬ್ರುವರಿ 13ರಂದು ರೀಲ್ಸ್‌ಗಾಗಿ ಮಾರಕಾಸ್ತ್ರ ಹಿಡಿದು, ತ್ರಿಬಲ್ ರೈಡ್, ವ್ಹೀಲಿ ಮಾಡುತ್ತಾ ಕೆ.ಜಿ ಹಳ್ಳಿಯಿಂದ, ಡಿ.ಜೆ ಹಳ್ಳಿ, ರಾಮಮೂರ್ತಿ ನಗರ ಮಾರ್ಗವಾಗಿ ಹೊಸಕೋಟೆ ಟೋಲ್‌ವರೆಗೂ ಹೋಗಿದ್ದರು. ಅದೇ ರೀತಿ ಕೆ.ಜಿ ಹಳ್ಳಿಗೆ ವಾಪಸ್ ಆಗಿದ್ದರು.
ಆರೋಪಿಗಳ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಡಿ.ಜೆ.ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ. ಅವರ ಹೆಸರನ್ನು ರೌಡಿಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಡುರಸ್ತೆಯಲ್ಲಿ ಮಾರಕಾಸ್ತ್ರ ಹಿಡಿದು ವ್ಹೀಲಿ ಮಾಡಿರುವ ವಿಡಿಯೊವನ್ನು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.
ಕೆಲವು ಪುಂಡರು ಲಾಂಗ್ ಹಿಡಿದುಕೊಂಡು ಬೈಕ್ ವ್ಹೀಲಿ ನಡೆಸುವುದನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೇನೆ.–ಜಿ.ಪರಮೇಶ್ವರ, ಗೃಹ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.