ADVERTISEMENT

ಬಿಕ್ಲು ಶಿವ ಕೊಲೆ ಪ್ರಕರಣ: ಜಗ್ಗ ಜೈಲಿಗೆ, ನಾಲ್ವರು ಸಿಐಡಿ ಕಸ್ಟಡಿಗೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 14:34 IST
Last Updated 8 ಸೆಪ್ಟೆಂಬರ್ 2025, 14:34 IST
ಬಿಕ್ಲು ಶಿವ 
ಬಿಕ್ಲು ಶಿವ    

ಬೆಂಗಳೂರು: ರೌಡಿ ಶೀಟರ್ ಆಗಿದ್ದ ಶಿವಪ್ರಕಾಶ್‌ ಅಲಿಯಾಸ್‌ ಬಿಕ್ಲು ಶಿವ ಕೊಲೆ ಪ್ರಕರಣದ ಮೊದಲನೇ ಆರೋಪಿ ಜಗದೀಶ್‌ ಅಲಿಯಾಸ್‌ ಜಗ್ಗನ ಸಿಐಡಿ ಕಸ್ಟಡಿಯು ಸೋಮವಾರಕ್ಕೆ ಅಂತ್ಯವಾಗಿದ್ದು, ನ್ಯಾಯಾಲಯದ ಸೂಚನೆ ಮೇರೆಗೆ ಆರೋಪಿಯನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.

14 ದಿನಗಳಿಂದ ಸಿಐಡಿ ಕಸ್ಟಡಿಯಲ್ಲಿದ್ದ ಆರೋಪಿಯನ್ನು ಜನಪ್ರತಿನಿಧಿನಗಳ ವಿಶೇಷ ಕೋರ್ಟ್‌ಗೆ ಸೋಮವಾರ ಮಧ್ಯಾಹ್ನ ಸಿಐಡಿ ಪೊಲೀಸರು ಹಾಜರು ಪಡಿಸಿದರು. ಆರೋಪಿಯನ್ನು ಸೆ.22ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಧೀಶರು ಆದೇಶಿಸಿದರು. 

ಪ್ರಾಸಿಕ್ಯೂಷನ್‌ ಪರ ವಕೀಲರು, ಆರೋಪಿಯನ್ನು ಚಿಕ್ಕಬಳ್ಳಾಪುರ ಜೈಲಿಗೆ ಕಳುಹಿಸುವಂತೆ ಮನವಿ ಮಾಡಿದರು. ಆದರೆ, ನ್ಯಾಯಾಧೀಶರು, ಪರಪ್ಪನ ಅಗ್ರಹಾರ ಜೈಲಿನಲ್ಲೇ ವಿಶೇಷ ಬ್ಯಾರಕ್‌ನಲ್ಲಿ ಇರಿಸುವಂತೆ ಆದೇಶಿಸಿದರು.

ADVERTISEMENT

ಈ ಪ್ರಕರಣದಲ್ಲಿ ಕಿರಣ್‌, ಮದನ್‌, ಸ್ಯಾಮ್ಯುಯಲ್‌, ಪ್ರದೀಪ್, ವಿಮಲ್‌, ಅನಿಲ್‌, ಕೋಲಾರ ಜಿಲ್ಲೆ ಮಾಲೂರಿನ ಅವಿನಾಶ್ ದೀನಹಳ್ಳಿ, ಸುದರ್ಶನ್‌, ಮುರುಗೇಶ್ ಹಾಗೂ ನರಸಿಂಹ ಸೇರಿದಂತೆ 17 ಮಂದಿಯನ್ನು ಭಾರತಿನಗರ ಠಾಣೆಯ ಪೊಲೀಸರು ಈ ಹಿಂದೆ ಬಂಧಿಸಿದ್ದರು. ಇದೀಗ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು, ಆರೋಪಿಗಳ ವಿರುದ್ಧ ಸಂಘಟಿತ ಅಪರಾಧ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂಬುದು ಗೊತ್ತಾಗಿದೆ.

ಪ್ರಕರಣದಲ್ಲಿ ಜೈಲಿನಲ್ಲಿರುವ 17 ಆರೋಪಿಗಳ ಪೈಕಿ ಕಿರಣ್ ,ಮದನ್, ವಿಮಲ್ ಸೇರಿ ನಾಲ್ವರನ್ನು ಹೆಚ್ಚಿನ ವಿಚಾರಣೆಗಾಗಿ ಸಿಐಡಿ ಪೊಲೀಸರು ಬಾಡಿ ವಾರಂಟ್ ಮೇಲೆ ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

ವಿಚಾರಣೆ ಎದುರಿಸಿದ್ದ ಶಾಸಕ: ಇದೇ ಪ್ರಕರಣದಲ್ಲಿ ಐದನೇ ಆರೋಪಿ ಆಗಿರುವ ಕೆ.ಆರ್‌.ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್‌ ಅವರನ್ನು ಭಾರತಿನಗರ ಠಾಣೆಯಲ್ಲಿ ಎರಡು ಬಾರಿ ವಿಚಾರಣೆ ನಡೆಸಲಾಗಿತ್ತು. ಅದಾದ ಮೇಲೆ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರವು ಸಿಐಡಿಗೆ ಹಸ್ತಾಂತರಿಸಿ ಆದೇಶಿಸಿತ್ತು. ದೆಹಲಿ ವಿಮಾನ ನಿಲ್ದಾಣದಲ್ಲಿ ಆರೋಪಿ ಜಗ್ಗನನ್ನು ಸಿಐಡಿ ಪೊಲೀಸರು ಬಂಧಿಸಿದ್ದರು.

ಭಾರತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜುಲೈ 15ರಂದು ಶಿವಪ್ರಕಾಶ್ ಅವರ ಕೊಲೆ ನಡೆದಿತ್ತು.

‘ಜಾಗದ ವಿಚಾರವಾಗಿ ಜಗದೀಶ್, ಕಿರಣ್, ವಿಮಲ್‌, ಅನಿಲ್ ಮತ್ತು ಇತರರು ಬೈರತಿ ಬಸವರಾಜ್​ ಅವರ ಕುಮ್ಮಕಿನಿಂದ ಕೊಲೆ ಮಾಡಿದ್ದಾರೆ’ ಎಂದು ಆರೋಪಿಸಿ ಬಿಕ್ಲು ಶಿವ ಅವರ ತಾಯಿ ವಿಜಯಲಕ್ಷ್ಮಿ ನೀಡಿದ ದೂರು ಆಧರಿಸಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.