ಬೆಂಗಳೂರು: ರೌಡಿ ಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ. ಭಾರತಿನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆಯನ್ನು ಸಿಐಡಿ ಪೊಲೀಸರು ನಡೆಸಲಿದ್ದಾರೆ.
ಜುಲೈ 15ರಂದು ಬಿಕ್ಲು ಶಿವ ಅವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಶಿವ ಅವರ ತಾಯಿ ವಿಜಯಲಕ್ಷ್ಮಿ ಅವರು ನೀಡಿದ ದೂರು ಆಧರಿಸಿ ಕೆ.ಆರ್.ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್ ಸೇರಿದಂತೆ ಐವರ ವಿರುದ್ಧ ಭಾರತಿನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಬೈರತಿ ಬಸವರಾಜ್ ಅವರನ್ನು ಭಾರತಿನಗರ ಠಾಣೆಯ ಪೊಲೀಸರು ಎರಡು ಬಾರಿ ವಿಚಾರಣೆ ನಡೆಸಿದ್ದಾರೆ.
ಆರೋಪಿಗಳಾದ ಕಿರಣ್, ಮದನ್, ಸ್ಯಾಮ್ಯುಯಲ್, ಪ್ರದೀಪ್, ವಿಮಲ್, ಅನಿಲ್, ಕೋಲಾರ ಜಿಲ್ಲೆ ಮಾಲೂರಿನ ಅವಿನಾಶ್ ದೀನಹಳ್ಳಿ, ಸುದರ್ಶನ್, ಮುರುಗೇಶ್ ಹಾಗೂ ನರಸಿಂಹ ಸೇರಿದಂತೆ 12 ಮಂದಿಯನ್ನು ಬಂಧಿಸಲಾಗಿದೆ. ಆರೋಪಿಗಳು ಪೊಲೀಸ್ ಕಸ್ಟಡಿ ಹಾಗೂ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರನ್ನು ಬಾಡಿ ವಾರಂಟ್ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಸಿಐಡಿ ಮೂಲಗಳು ತಿಳಿಸಿವೆ.
ಪ್ರಮುಖ ಆರೋಪಿಯಾಗಿರುವ ಜಗದೀಶ್ ಅಲಿಯಾಸ್ ಜಗ್ಗನ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಆತ ದುಬೈನಲ್ಲಿ ತಲೆಮರೆಸಿಕೊಂಡಿರುವ ಶಂಕೆಯಿದೆ.
‘ಜಗದೀಶ್ ವಿರುದ್ಧ ಭಾರತಿನಗರ ಠಾಣೆ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದರು. ಮುಂದಿನ ತನಿಖೆಯನ್ನು ಸಿಐಡಿ ಪೊಲೀಸರೇ ನಡೆಸಲಿದ್ದಾರೆ. ಬೈರತಿ ಬಸವರಾಜ್ ಅವರಿಗೂ ಸಿಐಡಿ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಬರುವಂತೆ ಸೂಚಿಸುವ ಸಾಧ್ಯತೆಯಿದೆ’ ಎಂದು ಮೂಲಗಳು ಹೇಳಿವೆ.
‘ಬಿಕ್ಲು ಶಿವ ಹತ್ಯೆಗೂ ಮುನ್ನವೇ ಆರೋಪಿ ಜಗದೀಶ್ ನಾಪತ್ತೆ ಆಗಿರುವ ಮಾಹಿತಿ ಸಿಕ್ಕಿದೆ. ಸುಪಾರಿ ಕೊಟ್ಟು ತಲೆಮರೆಸಿಕೊಂಡಿರುವುದು ತನಿಖೆಯಿಂದ ಗೊತ್ತಾಗಿದೆ. ಬೆಂಗಳೂರಿನಿಂದ ಕೇರಳ, ತಮಿಳುನಾಡು ಬಳಿಕ ಉತ್ತರಾಖಂಡ್ಗೆ ತೆರಳಿ ಅಲ್ಲಿಂದ ವಿದೇಶಕ್ಕೆ ಹೋಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ವಿದೇಶದಲ್ಲಿ ತಲೆಮರೆಸಿಕೊಂಡಿರುವ ಮಾಹಿತಿ ಆಧಾರದಲ್ಲಿ ವಿಮಾನ ನಿಲ್ದಾಣಗಳು, ಅಂತರರಾಷ್ಟ್ರೀಯ ಗಡಿ ಪ್ರದೇಶ ಹಾಗೂ ಬಂದರುಗಳಿಗೆ ಪ್ರಕರಣದ ಪೂರ್ಣ ವಿವರಗಳನ್ನು ನೀಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಬಿಕ್ಲು ಶಿವನಿಗೆ ಆರೋಪಿಗಳು ಪ್ರಾಣ ಬೆದರಿಕೆ ಹಾಕುತ್ತಿದ್ದರು. ಜುಲೈ 15ರಂದು ತಡರಾತ್ರಿ ಬಿಳಿ ಬಣ್ಣದ ಸ್ಕಾರ್ಪಿಯೋ ಕಾರಿನಲ್ಲಿ ಬಂದಿದ್ದ ಆರೋಪಿಗಳು, ಮನೆಯ ಮುಂದೆ ಕಾರಿನ ಬಳಿ ನಿಂತಿದ್ದ ಶಿವಪ್ರಕಾಶ್ನ ಮೇಲೆ ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಿದ್ದರು. ಕಿತ್ತಗನೂರು ಜಾಗದ ವಿಚಾರವಾಗಿ ಜಗದೀಶ್, ಕಿರಣ್, ವಿಮಲ್, ಅನಿಲ್ ಮತ್ತು ಇತರರು ಬೈರತಿ ಬಸವರಾಜ್ ಅವರ ಕುಮ್ಮಕ್ಕಿನಿಂದ ಕೊಲೆ ಮಾಡಿದ್ದಾರೆ’ ಎಂದು ವಿಜಯಲಕ್ಷ್ಮಿ ಅವರು ದೂರು ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.