ADVERTISEMENT

ಹೆಬ್ಬಗೋಡಿ ಮೆಟ್ರೊಗೆ ಬಯೋಕಾನ್ ಹೆಸರು: ಸ್ಥಳೀಯರ ಪ್ರತಿಭಟನೆ

‘ನಮ್ಮ ಹೆಬ್ಬಗೋಡಿ ನಮ್ಮ ಅಸ್ಮಿತೆ’ ಹೋರಾಟ

​ಪ್ರಜಾವಾಣಿ ವಾರ್ತೆ
Published 8 ಜನವರಿ 2024, 20:11 IST
Last Updated 8 ಜನವರಿ 2024, 20:11 IST
ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿಯಲ್ಲಿ ಮೆಟ್ರೊ ನಿಲ್ದಾಣದ ಹೆಸರನ್ನು ಬಯೋಕಾನ್ ಹೆಬ್ಬಗೋಡಿ ಎಂದು ನಾಮಕರಣ ಮಾಡಿರುವುದನ್ನು ವಿರೋಧಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು
ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿಯಲ್ಲಿ ಮೆಟ್ರೊ ನಿಲ್ದಾಣದ ಹೆಸರನ್ನು ಬಯೋಕಾನ್ ಹೆಬ್ಬಗೋಡಿ ಎಂದು ನಾಮಕರಣ ಮಾಡಿರುವುದನ್ನು ವಿರೋಧಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು   

ಆನೇಕಲ್ : ಹೆಬ್ಬಗೋಡಿಯ ಮೆಟ್ರೊ ನಿಲ್ದಾಣಕ್ಕೆ ‘ಬಯೋಕಾನ್‌ ಹೆಬ್ಬಗೋಡಿ’ ಎಂದು ನಾಮಕರಣ ಮಾಡುವ ನಿರ್ಧಾರ ವಿರೋಧಿಸಿ ಸ್ಥಳೀಯರು ಬಿಎಂಆರ್‌ಸಿಎಲ್‌ ವಿರುದ್ಧ ಸೋಮವಾರ ಪ್ರತಿಭಟನೆ ನಡೆಸಿದರು.

ಹೆಬ್ಬಗೋಡಿ ನಗರಸಭೆ ವ್ಯಾಪ್ತಿಯ ನೂರಾರು ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

‘ಮೆಟ್ರೊ ನಿಲ್ದಾಣಕ್ಕೆ ಹೆಬ್ಬಗೋಡಿ ಬದಲು ಖಾಸಗಿ ಕಂಪನಿಯೊಂದರ ಹೆಸರು ಇಡಲು ಹೊರಟಿರುವ ಬಿಎಂಆರ್‌ಸಿಎಲ್‌,  ಹೆಬ್ಬಗೋಡಿ ಜನತೆಯ ಸ್ವಾಭಿಮಾನಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದೆ. ಹೀಗಾಗಿ ‘ನಮ್ಮ ಹೆಬ್ಬಗೋಡಿ ನಮ್ಮ ಅಸ್ಮಿತೆ’ ಹೆಸರಿನಡಿಯಲ್ಲಿ ಹೋರಾಟ ಆರಂಭಿಸಿದ್ದೇವೆ’ ಎಂದು ಹೆಬ್ಬಗೋಡಿ ನಗರಸಭೆ ಸದಸ್ಯ ಮುನಿಕೃಷ್ಣ ಒತ್ತಾಯಿಸಿದರು.

ADVERTISEMENT

ಹೆಬ್ಬಗೋಡಿಗೆ ತನ್ನದೇ ಆದ ಇತಿಹಾಸವಿದೆ. ಹೆಸರಿನ ಬದಲಾವಣೆಯ ಮೂಲಕ ಇಲ್ಲಿನ ನಾಗರಿಕರಿಗೆ ಅವಮಾನ ಮಾಡಲಾ‌ಗುತ್ತಿದೆ. ಬಿಎಂಆರ್‌ಸಿಎಲ್‌ ಸಂಸ್ಥೆಯು ಇಲ್ಲಿನ ನಗರಸಭೆ ಮತ್ತು ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡದೇ ಏಕಪಕ್ಷೀಯ ನಿರ್ಧಾರ ಕೈಗೊಂಡಿರುವುದು ಉತ್ತಮ ಬೆಳವಣಿಗೆಯಲ್ಲ ಎಂದು ಹೆಬ್ಬಗೋಡಿ ಮಂಜುನಾಥ್‌ ಅಸಮಾಧಾನ ವ್ಯಕ್ತಪಡಿಸಿದರು.

ಕಮ್ಮಸಂದ್ರ, ವೀರಸಂದ್ರ, ಸಂಪಿಗೆ ನಗರ ವಾರ್ಡ್‌ಗಳಿಗೆ ಹೆಚ್ಚಿನ ಸಮಸ್ಯೆಯಾಗಿದೆ. ಶಾಲಾ–ಕಾಲೇಜುಗಳಿವೆ. ಹೀಗಾಗಿ ಹೆಬ್ಬಗೋಡಿ ನಗರಸಭೆ ವ್ಯಾಪ್ತಿಯಲ್ಲಿ ಸ್ಕೈವಾಕ್‌ ನಿರ್ಮಿಸಬೇಕು. ಬಿಎಂಆರ್‌ಸಿಎಲ್‌ ಈಗಲೇ ಸೂಕ್ತ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಅಗತ್ಯ ಸೌಲಭ್ಯ ನೀಡಬೇಕು. ಬಯೋಕಾನ್‌ ಹೆಸರನ್ನು ತೆಗೆಯುವವರೆಗೂ ಹೋರಾಟ ಮುಂದುವರೆಯಲಿದೆ ಎಂದು ತಿಳಿಸಿದರು.

ಬಯೋಕಾನ್‌ ಹೆಸರನ್ನು ಮೆಟ್ರೊ ನಿಲ್ದಾಣಕ್ಕೆ ಇಟ್ಟಿರುವುದರಿಂದ ಸ್ಥಳೀಯರ ಭಾವನೆಗಳಿಗೆ ಧಕ್ಕೆಯಾಗಿದೆ. ಹೆಬ್ಬಗೋಡಿಯಲ್ಲಿ ವಿವಿಧ ರಾಜ್ಯಗಳ ಜನರು ವಾಸವಾಗಿದ್ದಾರೆ.ಹೆಬ್ಬಗೋಡಿಯು ಆನೇಕಲ್‌ ತಾಲ್ಲೂಕಿನ ಏಕೈಕ ನಗರಸಭೆಯಾಗಿದೆ. ಆದರೆ ವಾಣಿಜ್ಯ ಕಾರಣಕ್ಕೆ ಬಯೋಕಾನ್‌ ಹೆಬ್ಬಗೋಡಿ ಎಂದು ನಾಮಕರಣ ಮಾಡುತ್ತಿರುವುದು ಸರಿಯಲ್ಲ ‌ಎಂದು ಕರವೇ ಕಾರ್ಮಿಕ ಘಟಕದ ಅಧ್ಯಕ್ಷ ಹೆಬ್ಬಗೋಡಿ ಅಂಬರೀಷ್‌ ಆಕ್ಷೇಪ ವ್ಯಕ್ತಪಡಿಸಿದರು.

ಬಿಎಸ್‌ಪಿ ರಾಜ್ಯ ಖಜಾಂಚಿ ಚಿನ್ನಪ್ಪ ವೈ.ಚಿಕ್ಕಹಾಗಡೆ, ನಗರಸಭೆ ಸದಸ್ಯರಾದ ರಾಮಚಂದ್ರ, ರಾಮಣ್ಣ, ಅರುಣ್‌, ಸವಿತಾ ರಮೇಶ್‌, ಕೇಶವರೆಡ್ಡಿ, ಗಾಯತ್ರಿ, ಮಂಜುಳ, ಜಯರಾಮ್, ನಾರಾಯಣಸ್ವಾಮಿ, ಮುರಳಿ, ಕಬಡ್ಡಿ ಮಂಜು, ಕಿರಣ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.