ADVERTISEMENT

ಬೆಂಗಳೂರು: ಕೃಷ್ಣ ಬೈರೇಗೌಡ ರಾಜೀನಾಮೆಗೆ ಬಿಜೆಪಿ ಆಗ್ರಹ

ಬ್ಯಾಟರಾಯನಪುರ ವೃತ್ತದಲ್ಲಿ ಬೃಹತ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 23:32 IST
Last Updated 17 ಡಿಸೆಂಬರ್ 2025, 23:32 IST
ಬ್ಯಾಟರಾಯನಪುರ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಬ್ಯಾಟರಾಯನಪುರ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ಬೆಂಗಳೂರು: ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಭೂದಾಖಲೆಗಳನ್ನು ತಿರುಚಿ ಅಕ್ರಮ‌‌‌ ಎಸಗಿದ್ದಾರೆಂದು ಆರೋಪಿಸಿ ಬ್ಯಾಟರಾಯನಪುರ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಬ್ಯಾಟರಾಯನಪುರ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಸಚಿವರ ವಿರುದ್ಧ ಘೋಷಣೆಗಳನ್ನು ಕೂಗಿ ರಾಜಿನಾಮೆಗೆ ಒತ್ತಾಯಿಸಿದರು. 

ಈ ವೇಳೆ ಪೋಲಿಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಪ್ರತಿಭಟನಕಾರರನ್ನು ಬಂಧಿಸಿ ಸಂಪಿಗೆಹಳ್ಳಿ ಸಹಾಯಕ ಪೊಲೀಸ್ ಠಾಣೆಯ ಮೈದಾನಕ್ಕೆ ಕರೆದೊಯ್ದು, ನಂತರ ಬಿಡುಗಡೆ ಮಾಡಲಾಯಿತು.

ADVERTISEMENT

ಇದಕ್ಕೂ ಮುನ್ನ ಬ್ಯಾಟರಾಯನಪುರ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಹನುಮಂತಗೌಡ ಮಾತನಾಡಿ ‘ಸಚಿವರ ಮೇಲೆ ಆರೋಪವಿದೆ. ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು’ ಎಂದು ಆಗ್ರಹಿಸಿದರು.

ಬ್ಯಾಟರಾಯನಪುರ ನಗರ ಮಂಡಲ ಬಿಜೆಪಿ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ‘ದಾಖಲೆಗಳನ್ನು ತಿರುಚಿ, ಸರ್ಕಾರಿ ಆಸ್ತಿಯನ್ನು ಕಬಳಿಸಲು ಮುಂದಾಗಿರುವ ಗಂಭೀರ ಆರೋಪ ಸಚಿವರ ಮೇಲಿದೆ. ದಾಖಲೆಗಳೂ ಆರೋಪವನ್ನು ಪುಷ್ಟೀಕರಿಸುತ್ತಿವೆ. ಸಚಿವರು ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು’ ಎಂದು ಒತ್ತಾಯಿಸಿದರು.

ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಮುನಿಹನುಮಯ್ಯ, ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪಿ.ವೆಂಕಟೇಶ್, ಬಿ.ಎಸ್. ಅನಿಲ್ ಕುಮಾರ್, ಕೆ.ಡಿ. ಪ್ರತಾಪ್ ಗೌಡ, ಲೋಹಿತ್ ಗೌಡ, ತಿಮ್ಮೇಗೌಡ, ಎಲ್. ನಂಜಪ್ಪ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.