ADVERTISEMENT

2 ತಿಂಗಳಲ್ಲಿ ಬಿಜೆಪಿ ಸರ್ಕಾರ: ಅಶೋಕ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2018, 20:21 IST
Last Updated 11 ಅಕ್ಟೋಬರ್ 2018, 20:21 IST

ಬೆಂಗಳೂರು: ‘ಎರಡು ತಿಂಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದೆ’ ಎಂದು ಶಾಸಕ ಆರ್‌.ಅಶೋಕ್‌ ತಿಳಿಸಿದರು.

ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಡಾ.ಸಿದ್ದರಾಮಯ್ಯ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಾನು ಸ್ಪರ್ಧೆ ಮಾಡುವುದು ಬೇಡ ಎಂದು ಬಿ.ಎಸ್‌.ಯಡಿಯೂರಪ್ಪ ಅವರೇ ಹೇಳಿದ್ದಾರೆ. ಶೀಘ್ರದಲ್ಲಿ ಸರ್ಕಾರ ರಚನೆಯಾಗಲಿದ್ದು, ಅದರ ಭಾಗವಾಗಿ ಇರಬೇಕು ಎಂದೂ ಸೂಚಿಸಿದ್ದಾರೆ. ಬಿ.ಶ್ರೀರಾಮುಲು ಅವರಿಗೂ ಅದೇ ರೀತಿ ಹೇಳಿದ್ದಾರೆ. ಲೋಕಸಭಾ ಚುನಾವಣೆಗೆ ಮುನ್ನ ನಮ್ಮದೇ ಸರ್ಕಾರ ಇರಲಿದೆ’ ಎಂದು ಅವರು ಹೇಳಿದರು.

ADVERTISEMENT

‘ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಅತೃಪ್ತರ ಜತೆಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಅವರ ಜತೆಗೆ ಬುಧವಾರ ರಾತ್ರಿಯೂ ಸಮಾಲೋಚನೆ ನಡೆಸಿದ್ದೇನೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಲ್ಲಿ ಹೊಂದಾಣಿಕೆ ಕೊರತೆ ಇದೆ. ಅದು ನಮಗೆ ಪ್ಲಸ್‌ ಪಾಯಿಂಟ್ ಆಗಲಿದೆ’ ಎಂದರು.

‘ಲೋಕಸಭಾ ಚುನಾವಣೆವರೆಗೆ ಕಾಯಿರಿ ಎಂದು ಕೇಂದ್ರದ ಮುಖಂಡರು ತಿಳಿಸಿಲ್ಲ. ನಾವು ಆಪರೇಷನ್‌ ಕಮಲ ಮಾಡುವುದಿಲ್ಲ. ಪಕ್ಷಕ್ಕೆ ಯಾರನ್ನು ಸೇರ್ಪಡೆ ಮಾಡಬೇಕು ಎಂಬ ಬಗ್ಗೆ ಕೇಂದ್ರದ ಹಾಗೂ ರಾಜ್ಯದ ನಾಯಕರು ತೀರ್ಮಾನಿಸಲಿದ್ದಾರೆ’ ಎಂದು ಅವರು ತಿಳಿಸಿದರು.

ಗುರುವಾರ ಸಂಜೆ ಸುದ್ದಿಗಾರರ ಜತೆಗೆ ಮಾತನಾಡಿದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ‘ಕಾಂಗ್ರೆಸ್‌ ಪಕ್ಷ ಇಡೀ ದೇಶದಲ್ಲಿ ಅಸ್ಪೃಶ್ಯ ಪಕ್ಷ ಆಗಿದೆ. ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ತೆಲಂಗಾಣ, ತಮಿಳುನಾಡಿನಲ್ಲಿ ತಿರಸ್ಕೃತ ಸರಕು ಆಗಿದೆ. ಕಾಂಗ್ರೆಸ್‌ ಮುಕ್ತ ಭಾರತ ಆಗಬೇಕು ಎಂಬುದು 130 ಕೋಟಿ ಜನರ ಸಂಕಲ್ಪ. ಅದು ತನ್ನಿಂದ ತಾನೇ ಆಗಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.